Advertisement

ಸಿಡಿದ ಗ್ಯಾಸ್‌ ಸಿಲಿಂಡರ್‌; ಪಾರಾದ ಕುಟುಂಬ: ಶೇಣಿ ಬಾರೆದಳದಲ್ಲಿ ಮನೆಗೆ ತಗಲಿದ ಬೆಂಕಿ

11:12 PM Apr 22, 2024 | Team Udayavani |

ಕುಂಬಳೆ: ಎಣ್ಮಕಜೆ ಗ್ರಾಮ ಪಂಚಾಯತ್‌ನ ಹದಿನಾಲ್ಕನೇ ವಾರ್ಡ್‌ ವ್ಯಾಪ್ತಿಯ ಶೇಣಿ ಮಣಿಯಂಪಾರೆ ಸಮೀಪದ ಬಾರೆದಳ ಎಂಬಲ್ಲಿ ಜನ ವಾಸ ಇರುವ ಮನೆಯೊಂದಕ್ಕೆ ಸೋಮವಾರ ಮಧ್ಯಾಹ್ನದ ಬಳಿಕ ಆಕಸ್ಮಿಕವಾಗಿ ಬೆಂಕಿ ಹಿಡಿದು ಹೊತ್ತಿ ಉರಿದು ಸಂಪೂರ್ಣ ನಾಶವಾದ ಘಟನೆ ನಡೆದಿದೆ.

Advertisement

ದಿ| ಕುಟ್ಟಿ ನಾಯ್ಕ ಅವರ ಪುತ್ರ ಬಟ್ಯ ನಾಯ್ಕ ಅವರ ಹೆಂಚು ಹಾಸಿದ ಮನೆಗೆ ಬೆಂಕಿ ಹಿಡಿದು ನಾಶವಾಗಿದೆ. ಬಟ್ಯ ನಾಯ್ಕ ಹಾಗೂ ಇವರ ಪುತ್ರನ ಇಬ್ಬರು ಪುಟಾಣಿ ಮಕ್ಕಳು ಮಾತ್ರವೇ ಮನೆಯೊಳಗಿದ್ದು, ಅದೃಷ್ಟವಶಾತ್‌ ಅಪಾಯದಿಂದ ಪಾರಾಗಿದ್ದಾರೆ.

ಮಧ್ಯಾಹ್ನ ಬಳಿಕ ಮನೆಯಲ್ಲಿ ಸಾಕಿದ ದನದ ಹಾಲು ಕರೆದು ಸಮೀಪದ ಡೇರಿಗೆ ಕೊಡಲು ಇವರ ಪುತ್ರನ ಪತ್ನಿ ನಳಿನಿ ತೆರಳಿದ್ದು, ಅ ಬಳಿಕ ಅಲ್ಪ ಹೊತ್ತಿನಲ್ಲಿ ಮನೆಯ ಕೋಣೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿ ಸ್ಥಳದಲ್ಲಿದ್ದ ಬಟ್ಯ ನಾಯ್ಕ ತಿಳಿಸಿದ್ದಾರೆ.

ತತ್‌ಕ್ಷಣ ಮಕ್ಕಳನ್ನು ಕರೆದುಕೊಂಡು ಸಮೀಪದಲ್ಲಿರುವವರಿಗೆ ವಿಷಯ ತಿಳಿಸುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಮರದ ಮಾಡನ್ನು ಸಂಪೂರ್ಣ ಅವರಿಸಿಕೊಂಡಿತ್ತು.

ಮನೆಯಲ್ಲಿದ್ದ ನಗ-ನಗದು,
ಸೊತ್ತುಗಳು ಬೆಂಕಿಗಾಹುತಿ
ಬೆಂಕಿಯನ್ನು ನಂದಿಸುವ ಪ್ರಯತ್ನದ ನಡುವೆ ಮನೆಯೊಳಗೆ ಇದ್ದ ನಗ-ನಗದು ಸಹಿತ ಸ್ಥಳದ ರೇಕಾರ್ಡ್‌, ಗಾದ್ರೆಜ್‌, ಟಿವಿ, ಫ್ರಿಡ್ಜ್ ಬೆಂಕಿಗೆ ಆಹುತಿಯಾಗಿದೆ. ತುಂಬಿಸಿಟ್ಟಿದ್ದ ಗ್ಯಾಸ್‌ ಸಿಲಿಂಡರ್‌ ಬೆಂಕಿ ಹಿಡಿದು ಸುಟ್ಟು ರಟ್ಟಿತ್ತು. ಇದರ ರಭಸಕ್ಕೆ ಮನೆಯ ಗೋಡೆಗಳು ಒಡೆದು ಹೋಗಿದೆ. ಸ್ಥಳೀಯರು ಹರಸಾಹಸ ಪಟ್ಟು ಮನೆಯ ಅಡುಗೆ ಕೋಣೆಯೊಳಗಿದ್ದ ಗ್ಯಾಸ್‌ ಸಿಲಿಂಡರ್‌ ಅನ್ನು ಹೊರ ತೆಗೆದು ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದ್ದರು.

Advertisement

ತತ್‌ಕ್ಷಣ ಕಾಸರಗೋಡಿನಿಂದ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಲು ಸಹಕರಿಸಿದ್ದರು. ಮನೆಯೊಳಗಿದ್ದ ಮನೆಯ ರೇಕಾರ್ಡ್‌, ಐಡೆಂಟಿ ಕಾರ್ಡ್‌ ಶಾಲಾ ಸರ್ಟಿಫಿಕೇಟ್‌ ಸಹಿತ ಚಿನ್ನ ಹಣ ಇನ್ನಿತರ ವಸ್ತುಗಳು ಮನೆ ಸಂಪೂರ್ಣ ಹೊತ್ತಿ ನಾಶವಾಗಿದೆ. ಎಣ್ಮಕಜೆ ಗ್ರಾಮ ಪಂಚಾಯತ್‌ ಅಧ್ಯಕ್ಷ ಸೋಮಶೇಖರ್‌ ಸ್ಥಳಕ್ಕೆ ಆಗಮಿಸಿ ಸ್ಥಳೀಯರೊಂದಿಗೆ ಸೇರಿಕೊಂಡು ಮನೆಯವರಿಗೆ ವಾಸಿಸಲು ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next