Advertisement

ಪೋಷಕರ ತೀರ್ಮಾನದಂತೆ ಬಿಸಿಯೂಟ ನೀಡಿ

07:54 AM Jul 07, 2019 | Team Udayavani |

ಸಂತೆಮರಹಳ್ಳಿ: ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ-02 ರಲ್ಲಿ ಜೆಎಸ್‌ಎಸ್‌ ಅಕ್ಷರ ದಾಸೋಹದಿಂದ ವಿತರಣೆಯಾಗುವ ಮಧ್ಯಾಹ್ನದ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಹಿನ್ನೆಲೆಯಲ್ಲಿ ಪೋಷಕರು ಊಟಕ್ಕೆ ನಿರ್ಬಂಧ ಹೇರಿದ್ದಾರೆ. ಇದರ ಬಗ್ಗೆ ಇಲ್ಲಿನ ವಾಸಿಗಳು ಪೋಷಕರು ಸಭೆ ಸೇರಿ ಏನು ನಿರ್ಧಾರ ಮಾಡುತ್ತಾರೆ ಅದರಂತೆ ಅಧಿಕಾರಿಗಳು ನಡೆದುಕೊಳ್ಳಿ ಎಂದು ಶಾಸಕ ಎನ್‌. ಮಹೇಶ್‌ ಹೇಳಿದರು.

Advertisement

ಹಲ್ಲಿ ಪ್ರಕರಣ: ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಬಿಸಿಯೂಟದಲ್ಲಿ ಹಲ್ಲಿ ಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಉದಯ್‌ಕುಮಾರ್‌ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ವಿ. ತಿರುಮಲಾಚಾರಿ ಸಭೆಗೆ ಮಾಹಿತಿ ನೀಡಿದರು.

ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಉದಯ್‌ಕುಮಾರ್‌ ಮಾತನಾಡಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಈ ಶಾಲೆಯ ಪೋಷಕರು ಜೆಎಸ್‌ಎಸ್‌ ಅಕ್ಷರ ದಾಸೋಹದಿಂದ ಸರಬರಾಜಾಗುವ ಊಟವನ್ನು ಬೇಡ ಎಂದು ನಿರ್ಬಂಧ ಹೇರಿದ್ದಾರೆ. ಜು.11 ರಂದು ಜಿಪಂನಲ್ಲಿ ನಡೆಯಲಿರುವ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗುವುದು.

ಗ್ರಾಮಸ್ಥರ ಅಭಿಪ್ರಾಯವನ್ನೂ ತಿಳಿಸಲಾಗುವುದು. ಅವರು ಏನು ಸೂಚನೆ ನೀಡುತ್ತಾರೋ ಅದನ್ನು ಮತ್ತೆ ಗ್ರಾಮದ ಶಾಲೆಯಲ್ಲಿ ಪೋಷಕರ ಗ್ರಾಮಸ್ಥರ ಸಭೆ ಸೇರಿಸಿ ನಂತರ ತೀರ್ಮಾನ ಕೈಗೊಳ್ಳ ಲಾಗುವುದು ಎಂದರು. ಇದಕ್ಕೆ ಶಾಸಕರು ಒಪ್ಪಿಗೆ ಸೂಚಿಸಿ ಅಷ್ಟು ದಿನಗಳಲ್ಲಿ ಊಟಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದರು.

ಬಸವಾಪುರ ಅವ್ಯವಸ್ಥೆ ಸರಿಪಡಿಸಿ: ಕೆಸ್ತೂರು ಗ್ರಾಮದ ಬಸವಾಪುರದಲ್ಲಿ ಉಪ್ಪಾರ ಜನಾಂಗ ವಾಸವಾಗಿದೆ. ಆದರೆ ಇಲ್ಲಿಗೆ ಮೂಲ ಸೌಲಭ್ಯ ನೀಡುವಲ್ಲಿ ಆಡಳಿತ ವಿಫ‌ಲ ವಾಗಿದೆ. ರಸ್ತೆ, ಚರಂಡಿ ಇಲ್ಲ. ಮಳೆ ಬಂದರೆ ನೀರೆಲ್ಲಾ ಮನೆಗಳಿಗೆ ನುಗ್ಗುತ್ತದೆ. ಸುತ್ತಲೂ ತಡೆಗೋಡೆ ನಿರ್ಮಿಸಬೇಕು.

Advertisement

ಶಾಸಕರು ಈ ಹಿಂದೆ ಆಶ್ವಾಸನೆ ಕೊಟ್ಟಂತೆ ನಮ್ಮ ಗ್ರಾಮವನ್ನು ದತ್ತು ಪಡೆದುಕೊಂಡು ನಮಗೆ ಸವಲತ್ತುಗಳನ್ನು ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು. ಈ ಬಗ್ಗೆ ಈಗಾಗಲೇ ಯೋಜನೆ ತಯಾರಾಗಿದೆ. ಅಲ್ಲದೆ ನರೇಗಾ ಯೋಜನೆಯಲ್ಲೂ ರಸ್ತೆ ಚರಂಡಿ ನಿರ್ಮಾಣ ಮಾಡಿ ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನೂ ಬಗೆಹರಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಕಾವೇರಿ ನೀರಾವರಿ ನಿಗಮ ಅವ್ಯವಹಾರ: ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕಾಲುವೆ ದುರಸ್ತಿ ಮಾಡಿಲ್ಲ. ಆದರೂ ಬಿಲ್‌ ಪಾವತಿ ಮಾಡಿಕೊಂಡಿದ್ದಾರೆ. ಸರ್ಕಾರದ ಲಕ್ಷಾಂತರ ರೂ. ದುರುಪಯೋಗ ಮಾಡಲಾಗಿದೆ. 300 ಎಕರೆ ಪ್ರದೇಶಕ್ಕೆ ನೀರುಣಿಸುವ ಸ್ಥಳದಲ್ಲಿ ಕಾಲವೆ ದುರಸ್ತಿ ಮಾಡದೆ ಕೇವಲ 6 ಎಕರೆ ಇರುವ ಒಬ್ಬರ ಜಮೀನಿಗೆ ಹೋಗುವ ನಾಲೆ ದುರಸ್ತಿ ಮಾಡಿದ್ದಾರೆ.

ಗಿಡಗಂಟಿಗಳನ್ನು ತೆರವುಗೊಳಿಸಿಲ್ಲ. ಪ್ರತಿ ವರ್ಷವೂ ಇಲ್ಲಿನ ಎಂಜಿನಿಯರ್‌ ರೈತರ ಸಮಸ್ಯೆ ಪರಿಹಾರಕ್ಕೆ ಕಿಮ್ಮತ್ತಿನ ಬೆಲೆಯನ್ನೂ ನೀಡುತ್ತಿಲ್ಲ ಎಂದು ರೈತರು ಆರೋಪಿಸಿದರು. ಎಂಜಿನಿಯರ್‌ ಕರುಣಾಮಯಿ ಅವರನ್ನು ತರಾಟೆ ತೆಗೆದುಕೊಂಡ ಶಾಸಕರು ಕೂಡಲೇ ಈ ಎಲ್ಲಾ ಸಮಸ್ಯೆ ನಿವಾರಿಸಬೇಕು ಎಲ್ಲವೆಂದರೆ ಕಾನೂನು ಕ್ರಮ ಜಾರಿಗೊಳಿಸುವ ಎಚ್ಚರಿಕೆ ನೀಡಿದರು.

ಇದರೊಂದಿಗೆ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಕಳಪೆಯಾಗಿರುವ ಬಗ್ಗೆ, ಸೆಸ್ಕ್ ಇಲಾಖೆ ಹಣ ಕಟ್ಟಿಸಿಕೊಂಡು 3 ವರ್ಷವಾದರೂ ಇನ್ನೂ ವಿದ್ಯುತ್‌ ಸಂಪರ್ಕ ನೀಡದಿರುವ ಬಗ್ಗೆ, ಸ್ಮಶಾನಕ್ಕೆ ಜಾಗವನ್ನು ಕಲ್ಪಿಸಿಕೊಡುವುದು, ಖಾಲಿ ನಿವೇಶನ, ಮನೆ ನಿರ್ಮಾಣ, ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಶಾಸಕರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಗ್ರಾಪಂ ಅಧ್ಯಕ್ಷೆ ಸರಿತಾ, ಉಪಾಧ್ಯಕ್ಷ ಜೆ.ರಂಗಸ್ವಾಮಿ, ಸದಸ್ಯರಾದ ಚಿನ್ನಸ್ವಾಮಿ, ಮಾದೇಶ್‌, ಸಿದ್ದಪ್ಪಸ್ವಾಮಿ, ಶಿವಮಲ್ಲು, ತಹಶೀಲ್ದಾರ್‌ ವರ್ಷಾ ಇಒ ಬಿ.ಎಸ್‌. ರಾಜು ಪಿಡಿಒ ಟಿ.ಲಲಿತಾ, ಮಹಾದೇವಸ್ವಾಮಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದ ರು.

Advertisement

Udayavani is now on Telegram. Click here to join our channel and stay updated with the latest news.

Next