ಹುಣಸೂರು: ನಾಗರಹೊಳೆ ಉದ್ಯಾನದಂಚಿನ ಗ್ರಾಮ ಸ್ಥರು, ಇಡಿಸಿ ಸದಸ್ಯರು, ಶಾಲಾ-ಕಾಲೇಜು ವಿದ್ಯಾರ್ಥಿ ಗಳು ಹಾಗೂ ಹಾಡಿಗಳ ಆದಿವಾಸಿಗಳು ಕಾಡಿಗೆ ಬೆಂಕಿ ಬೀಳದಂತೆ ಅರಣ್ಯ ಇಲಾಖೆಗೆ ಸಹಕರಿಸಬೇಕೆಂದು ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಪ್ರಸನ್ನಕುಮಾರ್ ಮನವಿ ಮಾಡಿದರು.
ನಾಗರಹೊಳೆ ವನ್ಯಜೀವಿ ವಿಭಾಗದವತಿಯಿಂದ ತಾಲೂಕಿನ ಹನಗೋಡು ಬಳಿಯ ನೇರಳಕುಪ್ಪೆ ಬಿ. ಕಾಲೋನಿಯಲ್ಲಿ ಕಾಡಂಚಿನ ಗ್ರಾಮಸ್ಥರು, ಹಾಡಿ ಮಂದಿ, ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಡಿಸಿ ಸದಸ್ಯರಿಗಾಗಿ ಆಯೋಜಿಸಿದ್ದ ಕಾಡ್ಗಿಚ್ಚಿನಿಂದ ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ಮತ್ತು ಮುನ್ನೆಚ್ಚರಿಕೆ ಕುರಿತ ಅರಿವು ಕಾರ್ಯಾಗಾರದಲ್ಲಿ ಅವರು ಮಾತ ನಾಡಿದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು, ಪ್ರಸ್ತುತ ಅರಣ್ಯಕ್ಕೆ ಹೆಚ್ಚು ಮಳೆಯಾಗದೇ ಬಿಸಿಲಿನ ತಾಪದಿಂದ ಗಿಡಮರಗಳ ಎಲೆಗಳು ಒಣಗಿರುತ್ತವೆ. ಇಂತಹ ಸನ್ನಿವೇಶದಲ್ಲಿ ಅಕಸ್ಮಿಕವಾಗಿ ಅರಣ್ಯಕ್ಕೆ ಬೆಂಕಿ ಬಿದ್ದರೆ ಅರಣ್ಯ ಭಸ್ಮವಾಗುವುದರೊಂದಿಗೆ ವನ್ಯಜೀವಿಗಳು ಬಲಿಯಾಗಿ ಅರಣ್ಯ ಸಂಪತ್ತು ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವುದೇ ಅರಣ್ಯಕ್ಕೆ ಬೆಂಕಿ ತಂತಾನೇ ಬೀಳುವುದಿಲ್ಲ. ಕೆಲ ಕಿಡಿಗೇಡಿಗಳು ಇಂತಹ ಕೃತ್ಯದಲ್ಲಿ ತೊಡಗುತ್ತಾರೆ. ಇಂತಹ ವ್ಯಕ್ತಿಗಳ ಬಗ್ಗೆ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಕೋರಿದರು. ಹುಣಸೂರು ವಲಯದ ಆರ್‌ಎಫ್‌ಒ ಸುರೇಂದ್ರ, ಕಾಡ್ಗಿಚ್ಚು ಎದುರಿಸಲು ಅರಣ್ಯ ಇಲಾಖೆಯು ಫೈರ್ ವಾಚರ್ ನೇಮಕ, ನೀರಿನ ಟ್ಯಾಂಕ್ ವಾಹನ, ಅಗ್ನಿ ಶಾಮಕದಳ ವಾಹನ ಸೇರಿದಂತೆ ಆಧುನಿಕ ಯಂತ್ರೋಪಕರಣಗಳು ಸೇರಿದಂತೆ ಸರ್ವ ರೀತಿ ಯಲ್ಲೂ ಇಲಾಖೆ ಸನ್ನದ್ಧವಾಗಿದೆ ಎಂದು ಹೇಳಿದರು.
ಇದೇ ವೇಳೆ ಬೆಂಕಿ ನಂದಿಸುವ ಕುರಿತು ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಡುವೇಪುರದ ಇಡಿಸಿ ಅಧ್ಯಕ್ಷ ಸ್ವಾಮಿಗೌಡ, ಸದಸ್ಯರಾದ ನೇರಳಕುಪ್ಪೆ ಮಹದೇವ್, ರಾಮಯ್ಯ, ಶಿವಸ್ವಾಮಿ, ಡಿಆರ್‌ಎಫ್‌ಒಗಳಾದ ರತ್ನಾಕರ್, ವೀರಭದ್ರ, ಹಾಡಿಗಳ ಆದಿವಾಸಿಗಳು, ಆರಣ್ಯ ಇಲಾಖೆ ಸಿಬ್ಬಂದಿ ಮತ್ತಿತರರು ಹಾಜರಿದ್ದರು.