Advertisement

ಹೆಣ್ಣುಮಕ್ಕಳಿಗೆ ಆತ್ಮರಕ್ಷಣಾ ಕಲೆ ಅವಶ್ಯ

09:29 PM Mar 11, 2020 | Lakshmi GovindaRaj |

ಗುಡಿಬಂಡೆ: ತಾಲೂಕಿನ ವಿವಿಧ ಸರಕಾರಿ, ಖಾಸಗಿ ಶಾಲಾ-ಕಾಲೇಜು ಹೆಣ್ಣು ಮಕ್ಕಳಿಗೆ ಕರಾಟೆ ಹಾಗೂ ಆತ್ಮರಕ್ಷಣಾ ಕಲೆಯ ಪ್ರದರ್ಶನದ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಜಿಲ್ಲಾಧಿಕಾರಿ ಆರ್‌.ಲತಾ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತ ವತಿಯಿಂದ ಆಯೋಜನೆ ಮಾಡಲಾಗಿತ್ತು.

Advertisement

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮಿನಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಆತ್ಮರಕ್ಷಣಾ ಕಲೆ ಮತ್ತು ಪ್ರದರ್ಶನ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಆರ್‌.ಲತಾ ಉದ್ಘಾಟಿಸಿದರು.

ನಿಮ್ಮನ್ನೂ ನೀವು ರಕ್ಷಿಸಿಕೊಳ್ಳಿ: ನಂತರ ಮಾತನಾಡಿದ ಅವರು, ದೇಶದಲ್ಲಿ ಉನ್ನತಮಟ್ಟದ ಹುದ್ದೆಗಳಲ್ಲಿ ಮಹಿಳೆಯರೆ ಮೇಲುಗೈ ಪಡೆಯುತ್ತಿದ್ದು ಯಾವುದೇ ಕಾರಣಕ್ಕೂ ಇತ್ತೀಚಿನ ಹೆಣ್ಣು ಮಕ್ಕಳು ಎದೆಗುಂದಬಾರದು. ಆತ್ಮ ಸ್ಥೈರ್ಯದಿಂದ ಮುನ್ನುಗ್ಗಿ ಅಪರಿಚಿತರು ಹಾಗೂ ಪುಂಡರ ನಕಲಿ ಮಾತುಗಳಿಂದ ಅಥವಾ ಹಣದ ಆಮಿಷಗಳಿಗೆ ಒಳಗಾಗದೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕು ಎಂದರು.

ಸಮಸ್ಯೆಯಾದ್ರೆ ಹೆಲ್ಪ್ಲೈನ್‌ಗೆ ಕರೆ ಮಾಡಿ: ಈಗಾಗಲೇ ಎಲ್ಲಾ ಕಡೆ ಓಬವ್ವನ ಪಡೆಯಿದ್ದು ಹೆಲ್ಪ್ಲೈನ್‌ಗೆ ಕರೆ ಮಾಡಿದರೆ ತಕ್ಷಣ ರಕ್ಷಣೆಗೆ ಬರುತ್ತಾರೆ. ಎಲ್ಲಾ ಹೆಣ್ಣು ಮಕ್ಕಳ ಆತ್ಮ ರಕ್ಷಣೆಯ ದೃಷ್ಟಿ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗುವಂತ ಆತ್ಮರಕ್ಷಣಾ ಕಲಿಕೆಯ ಮೂಲಕ ಸ್ಫೂರ್ತಿ ದೊರೆತಂತಾಗಿದೆ. ವಿದ್ಯಾರ್ಥಿನಿಯರು ನಿರಂತರವಾಗಿ ತಮ್ಮ ಪಠ್ಯದ ಜತೆಗೆ ಆತ್ಮರಕ್ಷಣಾ ಕಲಿಕೆ ಅಭ್ಯಾಸ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಗಂಡು ಮಕ್ಕಳಿಗಿಂತ ಬಲಿಷ್ಠರಾಗಿ: ಹೆಣ್ಣು-ಗಂಡು ಮಕ್ಕಳಿಗಿಂತ ಬಲಿಷ್ಠರಾಗಿದ್ದು, ತಮ್ಮ ಮನೆಯಲ್ಲಿ ದಿನನಿತ್ಯ ಕೆಲಸಗಳಿಂದ ಹಿಡಿದು ಕಚೇರಿಯ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಹೆಣ್ಣುಮಕ್ಕಳು ಆರ್ಥಿಕವಾಗಿ ಸಬಲರಾಗಲು ಅತ್ಯುನ್ನತ ಸ್ಥಾನಕ್ಕೇರಲು ಶ್ರಮಿಸಬೇಕು ಎಂದರು.

Advertisement

ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ: ತಾಲೂಕಿನಲ್ಲಿ ಅತಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ಪತ್ತೆಯಾಗಿದ್ದು, ಹೆಣ್ಣುಮಕ್ಕಳು ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಿ ಪ್ರಕರಣದ ಬಗ್ಗೆ ಮಾಹಿತಿ ನೀಡಿ ಬಾಲ್ಯವಿವಾಹವನ್ನು ತಡೆಗಟ್ಟಲು ಮುಂದಾಗಬೇಕು. ಅಲ್ಲದೆ, ಸಾರ್ವಜನಿಕರು ಬಾಲ್ಯವಿವಾಹದ ವಿರುದ್ಧ ದನಿಯೆತ್ತಬೇಕು ಎಂದು ಸಲಹೆ ನೀಡಿದರು.

ನಿಮ್ಮ ರಕ್ಷಣೆಗೆ ನಾವಿದ್ದೇವೆ: ಜಿಲ್ಲಾಡಳಿತ, ಪೊಲೀಸ್‌ ಇಲಾಖೆ ಎಲ್ಲಾ ಮಹಿಳೆಯರ, ವಿದ್ಯಾರ್ಥಿಗಳ ಪರವಾಗಿದೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ ಎಲ್ಲಾ ಹೆಣ್ಣು ಮಕ್ಕಳು ನಿರ್ಭಯದಿಂದ ಓಡಾಡುವಂತಾಗಬೇಕು. ಯಾವುದೇ ಸಮಯದಲ್ಲಿ ನಿಮ್ಮ ರಕ್ಷಣೆಗೆ ನಾವಿದ್ದೇವೆ. ಒಳ್ಳೆಯ ಸಮಾಜ ನಿರ್ಮಾಣ ಮಾಡಬೇಕು ಎಂದುಬೇಕು ಎನ್ನುವುದೇ ಈ ಎಲ್ಲಾ ಕಾರ್ಯಕ್ರಮಗಳ ಉದ್ದೇಶ ಎಂದು ತಿಳಿಸಿದರು.

ನಿರಂತರ ಅಭ್ಯಾಸ ಮಾಡಿ: ಎಲ್ಲಾ ಮಕ್ಕಳು ಕರಾಟೆಯನ್ನು ಕೇವಲ 4 ದಿನಕ್ಕೆ ಸೀಮಿತವಾಗದೆ ನಿರಂತರ ಅಭ್ಯಾಸ ಮಾಡುತ್ತಿರಬೇಕು. ಮುಂದಿನ ದಿನಗಳಲ್ಲಿ ಸರಕಾರಿ ಶಾಲಾ-ಕಾಲೇಜುಗಳಲ್ಲಿನ ದೈಹಿಕ ಶಿಕ್ಷಕರಿಗೆ ಆತ್ಮರಕ್ಷಣೆ ಕಲೆಯ ಬಗ್ಗೆ ತರಬೇತಿ ನೀಡಿ ಪ್ರತಿನಿತ್ಯ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆಯ ಬಗ್ಗೆ ಅಭ್ಯಾಸ ಮಾಡಿಸಲು ಜಿಲ್ಲಾಡಳಿತದಿಂದ ಆದೇಶ ಹೊರಡಿಸಲಾಗುತ್ತದೆ ಎಂದರು.

ಸಾವಿರಕ್ಕೂ ಹೆಚ್ಚು ಮಕ್ಕಳು ಭಾಗಿ: ತಾಲೂಕಿನ ವಿವಿಧ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜಿನ 1000ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕರಾಟೆ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಕರಾಟೆ ಶಿಕ್ಷಕ ಗೋಪಾಲಕೃಷ್ಣ ಯಾದವ್‌ ಮಾರ್ಗದರ್ಶನದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿನಿಯರು ಹೆಂಚುಗಳನ್ನು ಕೈಗಳಿಂದ ಹೊಡೆಯುವುದು, ಕೈಗಳ ಮೇಲೆ ದ್ವಿಚಕ್ರವಾಹನ ಹತ್ತಿಸುವುದು ಸೇರಿದಂತೆ ಇತರೆ ಸಾಹಸ ಪ್ರದರ್ಶನಗಳನ್ನು ನಡೆಸಿಕೊಟ್ಟರು.

ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ ತಿಂಡಿಯ ವ್ಯವಸ್ಥೆ, ಕೋಚಿಮುಲ್‌ ನಿಂದ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ನಗರಾಭಿವೃವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಣುಕಾ, ಜಿಲ್ಲಾ ಪಂಚಾಯತ್‌ ಸದಸ್ಯ ವರಲಕ್ಷಿ, ತಹಶೀಲ್ದಾರ್‌ ಡಿ.ಹನುಮಂತರಾಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್‌. ಸುಖನ್ಯಾ, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ರಾಮಯ್ಯ, ಸಮಾಜ ಕಲ್ಯಾಣ ಇಲಾಖೆಯ ಗ್ರೇಡ್‌ -2 ನಿರ್ದೇಶಕ ಜಗದೀಶ್‌, ಟಿಪಿಒ ಶಶಿಕಲಾ, ತಾಲೂಕಿನ ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next