ಬೆಂಗಳೂರು: ಹುಡುಗರ ಜತೆ ಮಾತನಾಡಬೇಡಿ ಎಂದು ಬುದ್ಧಿವಾದ ಹೇಳಿದ ಪೋಷಕರ ಮೇಲೆ ಮುನಿಸಿಕೊಂಡ ಮೂವರು ಬಾಲಕಿಯರು, ದಿನವಿಡೀ ಮನೆಗೆ ಹೋಗದೆ ಪೋಷಕರನ್ನು ಆತಂಕಕ್ಕೆ ದೂಡಿದ ಘಟನೆ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯಲಹಂಕದ ಖಾಸಗಿ ಶಾಲೆಯಲ್ಲಿ 7ನೇ ತರಗತಿ ವ್ಯಾಸಾಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಹಾಗೂ ಐದನೇ ತರಗತಿಯ ಒಬ್ಬ ವಿದ್ಯಾರ್ಥಿನಿ ಮಾ.29ರ ಶುಕ್ರವಾರ ಶಾಲೆಗೆ ತೆರಳಿದವರು ವಾಪಾಸ್ ಬಂದಿರಲಿಲ್ಲ. ಆರು ಗಂಟೆಯಾದರೂ ಮಕ್ಕಳು ಮನೆಗೆ ಬರದಿದ್ದಾಗ ಆತಂಕಗೊಂಡ ಪೋಷಕರು, ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಯಲಹಂಕ ಠಾಣೆ ಪೊಲೀಸರು, ಬಾಲಕಿಯರಿಗೆ ಹುಡುಕಾಟ ನಡೆಸಿದ್ದರು. 20ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಬಾಲಕಿಯರ ಪೋಷಕರು ಯಲಹಂಕದ ದೇವಾಲಯ, ಶಾಲೆಗಳ ಆವರಣ, ಅಂಗಡಿ, ಮಾಲ್‌ಗಳ ಬಳಿ ಸುತ್ತಾಡಿದರೂ ರಾತ್ರಿ 11 ಗಂಟೆಯವರೆಗೂ ಎಲ್ಲಿಯೂ ಸುಳಿವು ಸಿಗಲಿಲ್ಲ.
ರಾತ್ರಿ 12 ಗಂಟೆ ಸುಮಾರಿಗೆ ಮನೆಯ ಸಮೀಪವೇ ಇದ್ದ ಬಸ್‌ನಿಲ್ದಾಣದ ಬಳಿ ಬಾಲಕಿಯರು ಅವಿತು ಕುಳಿತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅವರನ್ನು ಠಾಣೆಗೆ ಕರೆದುತಂದರು. ನಂತರ ಠಾಣೆಗೆ ಪೋಷಕರನ್ನು ಕರೆಸಿ ಅವರ ಸಮ್ಮುಖದಲ್ಲಿ ವಿಚಾರಿಸಿದಾಗ “ನಾವು ಯಾವ ಹುಡುಗರೊಂದಿಗೆ ಮಾತನಾಡುವುದಿಲ್ಲ.
ಹೀಗಿದ್ದರೂ ಅಪ್ಪ, ಅಮ್ಮ ಹುಡಗರ ಜೊತೆ ಯಾಕೆ ಮಾತನಾಡುತ್ತೀಯಾ? ಯಾರ ಬಳಿಯೂ ಮಾತನಾಡಬೇಡ ಎಂದು ಪದೇ ಪದೆ ಹೇಳುತ್ತಿದ್ದರು. ಹೀಗಾಗಿ, ಅವರಿಗೆ ಪಾಠ ಕಲಿಸಬೇಕು ಎಂದು ನಾವೇ ಮನೆಬಿಟ್ಟು ಬಂದಿದ್ದೆವು,’ ಎಂದು ಬಾಲಕಿಯೊಬ್ಬಳು ತಿಳಿಸಿದ್ದಾಳೆ. ಕೊನೆಗೆ ಬಾಲಕಿಯರು ಹಾಗೂ ಪೋಷಕರಿಗೆ ಬುದ್ಧಿವಾದ ಹೇಳಿ ಕಳುಹಿಸಿಕೊಡಲಾಯಿತು ಎಂದು ಅಧಿಕಾರಿ ತಿಳಿಸಿದರು.