ಸೇಡಂ: ಶೋಷಿತ ಮತ್ತು ಸಮಾಜದಿಂದ ದೂರ ಉಳಿದ ಗಿರಿ ಜನರರಲ್ಲಿ ಅಡಗಿರುವ ಸಾಂಸ್ಕೃತಿಕ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಗಿರಿಜನೋತ್ಸವ ಕಾರ್ಯಕ್ರಮ ಆಯೋಜಿಸುತ್ತಾ ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಪಟ್ಟಣದ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಗಿರಿಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಬಡ ಜನರ ಶ್ರೇಯಸ್ಸಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗಿರಿ ಜನರ ಉದ್ಧಾರಕ್ಕಾಗಿ ಅನೇಕ ಕಾರ್ಯಕ್ರಮ ಏರ್ಪಡಿಸುತ್ತಿದೆ.ಅನೇಕ ಶೋಷಿತ ಸಮುದಾಯಗಳು ದೇಶವನ್ನು ಶ್ರೀಮಂತವಾಗಿಸುವ ಕಲೆ ಹೊಂದಿದ್ದರೂ ಪ್ರೋತ್ಸಾಹದ ಕೊರತೆಯಿಂದಮೂಲೆಗುಂಪಾಗಿದ್ದವು. ಈಗ ಗಿರಿಜನೋತ್ಸವ ಕಾರ್ಯಕ್ರಮಗಳ ಮೂಲಕ ಅವರಲ್ಲಿನ ಕಲೆ ಪ್ರೋತ್ಸಾಹಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.
ರಾಜ್ಯದ ಮೂಲೆ ಮೂಲೆಯಲ್ಲಿನ ಕಲಾ ತಂಡಗಳನ್ನು ಒಂದೆಡೆಸೇರಿಸಿದ್ದು, ಸಾರ್ವಜನಿಕರು ಸಹ ಕಲೆಗಾರರ ಶ್ರಮ ಸಾರ್ಥಕವಾಗಿಸಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು. ಶ್ರೀ ಕೊತ್ತಲ ಬಸವೇಶ್ವರ ಸ್ಥಾನದ ಸದಾಶಿವ ಸ್ವಾಮೀಜಿ ಮಾತನಾಡಿ, ಗಿರಿಜನರ ಕಲೆ ಪ್ರೋತ್ಸಾಹಿಸುವ ಸರ್ಕಾರದ ಕಾರ್ಯಶ್ಲಾಘನೀಯ ಎಂದು ಹೇಳಿದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗೇಶ್ವರರಾವ ಮಾಲಿಪಾಟೀಲ, ಎಪಿಎಂಸಿ ಸದಸ್ಯ ಸಿದ್ದು ಬಾನಾರ್, ಅಬ್ದುಲ್ ಗಫೂರ್, ರವಿ ಸಾಹು ತಂಬಾಕೆ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಾನಂದ ಅಣಜಿಗಿ ನಿರೂಪಿಸಿ, ವಂದಿಸಿದರು.