ಶಿವಮೊಗ್ಗ-ಸಾಗರ ಮಾರ್ಗದ ತಂಗಳವಾಡಿ ಗ್ರಾಮದ ಹೊನಗೋಡು ಕೇಶವ ಬರೀ ತೆಂಗಿನ ಮರಗಳನ್ನು ನಂಬಿಕೊಂಡೇ ಬದುಕುತ್ತಿಲ್ಲ. ತೆಂಗಿನ ಮರವಲ್ಲದೇ ಶುಂಠಿಯೂ ಕೂಡ ಆದಾಯ ಮೂಲವಾಗಿದೆ ಇವರಿಗೆ. ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಹೊಂದಿಕೊಂಡಂತೆ ಇವರ ಹೊಲವಿದೆ. ತೆಂಗಿನ ಮರಗಳ ನಡುವೆ ಖಾಲಿ ಜಾಗದಲ್ಲಿ ಶುಂಠಿ ಕೃಷಿ ನಡೆಸಲು ನಿರ್ಧರಿಸಿದರು.
2017ರ ಮೇ ತಿಂಗಳ 2 ನೇ ವಾರದಲ್ಲಿ ಈ ಹೊಲದಲ್ಲಿ ತೆಂಗಿನ ಮರಗಳ ನಡುವಿನ ಖಾಲಿ ಸ್ಥಳವನ್ನು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿ ಹದಗೊಳಿಸಿದರು. 50 ಅಡಿ ಉದ್ದ 3 ಅಡಿ ಅಗಲದ ಪಟ್ಟೆ ನಿರ್ಮಿಸಿದರು. ಹೀಗೆ ಪಟ್ಟೆ ಸಾಲು ನಿರ್ಮಿಸುವಾಗ ಸಾಲಿನಿಂದ ಸಾಲಿಗೆ 2 ಅಡಿ ಅಂತರವಿರುವಂತೆ ನೋಡಿಕೊಂಡರು. ಪಟ್ಟೆಸಾಲಿನ ಒಳಗೆ ಸಗಣಿ ಗೊಬ್ಬರ ಮತ್ತು ಕುರಿ ಗೊಬ್ಬರ ಬಳಸಿ ಶುಂಠಿ ಬೀಜ ನಾಟಿ ಮಾಡಿದರು.
ಹೊಲದಲ್ಲಿರುವ ಕೊಳವೆ ಬಾವಿ ಇದೆ. ಅದರಿಂದ ಸ್ಪ್ರಿಂಕ್ಲರ್ ವ್ಯವಸ್ಥೆ ರೂಪಿಸಿದರು. ಶುಂಠಿ ಗಿಡ ಬೆಳೆಯುತ್ತಿದ್ದಂತೆ ತೆಂಗಿನ ಗರಿ ಮತ್ತು ಕಾಯಿಗಳು ಬಿದ್ದು ತೊಂದರೆಯಾಗದಂತೆ ಬಲಿತ ಮತ್ತು ಬೆಳೆಯುವ ಹಂತದಲ್ಲಿರುವ ತೆಂಗಿನ ಕಾಯಿ, ಗರಿಗಳನ್ನು ತೆಗೆಸಿ, ಒಟ್ಟು ಸುಮಾರು 3 ಎಕರೆ ವಿಸ್ತೀರ್ಣದ ಜಾಗದಲ್ಲಿ 20 ಕ್ವಿಂಟಾಲ್ ಶುಂಠಿ ಬೀಜ ನಾಟಿ ಮಾಡಿದ್ದರು.
ಪ್ರತಿ ಒಂದುವರೆ ತಿಂಗಳಿಗೆ ಒಮ್ಮೆಯಂತೆ ಒಟ್ಟು 3 ಸಲ 19:19 ಮತ್ತು 20:20 ರಸಗೊಬ್ಬರ ಹದ ಪ್ರಮಾಣದಲ್ಲಿ ನೀಡಿದ್ದಾರೆ. ಶುಂಠಿ ಗಡ್ಡೆಗಳು ಚೆನ್ನಾಗಿ ಬೆಳೆಯಲು ಅನುಕೂಲವಾಗುವಂತೆ ಒಟ್ಟು 2 ಸಲ ಟಾನಿಕ್ ಮತ್ತು 4 ಸಲ ಔಷಧ ಸಿಂಪಡಿಸಿದ್ದಾರೆ.
ಫಸಲು ಎಷ್ಟು? ಲಾಭ ಹೇಗೆ?: ಬೇಸಿಗೆಯ ಆರಂಭದಲ್ಲಿಯೇ ಕೃಷಿ ಆರಂಭಿಸಿದ್ದಾರೆ. ತೆಂಗಿನ ಮರದ ಅರೆ ಬರೆ ನೆರಳಿನ ಕಾರಣ ಶುಂಠಿ ಸಸಿಗಳು ಚೆನ್ನಾಗಿ ಚಿಗುರಿ ಬೆಳೆದಿವೆ. ತೆಂಗಿನ ಮರಗಳ ಜೊತೆ ಇವಕ್ಕೂ ನೀರಾವರಿ ನಡೆಸಿದ್ದರು. ಪ್ರತಿಯೊಂದು ಶುಂಠಿ ಗಿಡಗಳು ಚೆನ್ನಾಗಿ ಟಿಸಿಲು ಹೊಡೆದು ಬೆಳೆದಿವೆ. ಸರಾಸರಿ ಒಂದು ಕ್ವಿಂಟಾಲ್ ಬೀಜದ ಗಿಡಗಳು 15 ಕ್ವಿಂಟಾಲ್ ಆಗುವಷ್ಟು ಅಂದರೆ 1:15 ಪ್ರಮಾಣದಲ್ಲಿ ಫಸಲು ಬಿಟ್ಟಿದೆ.
ಒಟ್ಟು ಸುಮಾರು 350 ಕ್ವಿಂಟಾಲ್ ಫಸಲು ದೊರೆತಿದೆ. ಫಸಲು ಚೆನ್ನಾಗಿ ಇದ್ದು ಬೀಜದ ಶುಂಠಿಯನ್ನಾಗಿ ಬೆಳೆಸಿದ್ದಾರೆ. ಬೀಜದ ಶುಂಠಿಗೆ ಮಾರುಕಟ್ಟೆಯಲ್ಲಿ ರೂ.2,500 ರಿಂದ 3,000 ದರವಿದೆ. ಇದರಿಂದ ಇವರಿಗೆ ರೂ.8 ಲಕ್ಷ ಆದಾಯ. ಶುಂಠಿ ಬೀಜ ಖರೀದಿ, ಗಿಡ ನೆಡುವಿಕೆ,ಗೊಬ್ಬರ, ಔಷಧ, ಟಾನಿಕ್, ಕಳೆ ತೆಗೆದ ಕೂಲಿ ,ನೀರಾವರಿ ಪೈಪ್ ಲೈನ್ ಇತ್ಯಾದಿ ಎಲ್ಲ ಲೆಕ್ಕ ಹಾಕಿದರೂ ರೂ.5 ಲಕ್ಷ ಖರ್ಚಾಗಿದೆ.
ಆದರೂ ಸಹ ರೂ. 3 ಲಕ್ಷ ಲಾಭ. ದೊಡ್ಡ ದೊಡ್ಡ ತೆಂಗಿನ ಮರದ ನೆರಳಿನಲ್ಲಿ ಅದೂ ಆಗಾಗ ತೆಂಗಿನ ಗರಿ ಬೀಳುವ ಕಾರಣ ಶುಂಠಿ ಕೃಷಿ ವಿಫಲವಾಗುತ್ತದೆ ಎಂದು ಗೇಲಿ ಮಾಡಿದ್ದ ಸುತ್ತಮುತ್ತಲ ರೈತರು ಇವರ ಈ ಪ್ರಯೋಗಶೀಲ ಕೃಷಿ ಹಾಗೂ ಬಂಪರ್ ಫಸಲನ್ನು ನೋಡಿ ಅಚ್ಚರಿಗೊಂಡಿದ್ದಾರೆ.
* ಎನ್.ಡಿ.ಹೆಗಡೆ ಆನಂದಪುರಂ