ಕೊಪ್ಪಳ: ಜೀವಜಲ ರಕ್ಷಣೆಗಾಗಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಸಾಮಾಜಿಕ ಕಾರ್ಯದ ಭಾಗವಾಗಿ ತಾಲೂಕಿನ 300 ಎಕರೆ ವಿಸ್ತಾರ ಹೊಂದಿರುವ ಗಿಣಗೇರಿ ಕೆರೆಯ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದು, ಗ್ರಾಮದಲ್ಲೂ ಕೆರೆ ಅಭಿವೃದ್ಧಿಗೆ ಭಾರೀ ಉತ್ಸಾಹ-ಹುಮ್ಮಸ್ಸು ಕಾಣಿಸಿಕೊಂಡಿದೆ. ಮುಖಂಡರುಸರಣಿ ಸಭೆಗಳನ್ನು ನಡೆಸುವುದರ ಮೂಲಕ ಎಲ್ಲ ತಯಾರಿ ನಡೆಸಿದ್ದಾರೆ.
ಹೌದು. ಕೋವಿಡ್ ಹಿನ್ನೆಲೆಯಲ್ಲಿ ಅಭಿನವ ಶ್ರೀಗಳು ಕೆರೆಗಳ ಉಳಿವಿಗಾಗಿ ಸರಳ ಜಾತ್ರೆ ಆಚರಣೆ ಮಾಡಿಸಾಮಾಜಿಕ ಕಾರ್ಯಕ್ಕೆ ಮುಂದಾಗಿ ಗಿಣಗೇರಿ ಕೆರೆಯ ಹೂಳೆತ್ತುವಕಾರ್ಯಕ್ಕೆ ಸಜ್ಜಾಗಿದ್ದು, ಗ್ರಾಮದ ಜನರೂ ಭಕ್ತಿಯ ಸೇವೆ ಮಾಡಲುಸನ್ನದ್ಧರಾಗುತ್ತಿದ್ದಾರೆ. ಶ್ರೀಗಳು ಈಗಾಗಲೆ ಕೆರೆಯ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಶ್ರೀಗಳು ನಮ್ಮೂರಿನ ಕೆರೆಯ ರಕ್ಷಣೆಗೆ ಮುಂದಾಗಿದ್ದಾರೆ.
ನಾವೂ ಅವರೊಂದಿಗೆ ಕೆರೆಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸೋಣ. ಇದೊಂದು ಒಳ್ಳೆಯ ಕೆಲಸ. ನಾನು ನೀನು ಎನ್ನದೇ ನಾವೆಲ್ಲರೂ ಒಗ್ಗಟ್ಟಾಗಿ ಎನ್ನುವ ಭಾವನೆಯಿಂದ ಕೆಲಸ ಮಾಡೋಣ. ಇಲ್ಲಿ ಯಾವ ಪಕ್ಷಬೇಧಗಳಿಲ್ಲ. ರಾಜಕೀಯ ದ್ವೇಷ ಬಿಟ್ಟು ಉತ್ಸಾಹದಿಂದ ಕೆಲಸ ಮಾಡೋಣ.ರಾಜಕೀಯವೇ ಬೇರೆ, ಅಭಿವೃದ್ಧಿ ಕಾರ್ಯವೇ ಬೇರೆ. ಅದರಲ್ಲೂ ಶ್ರೀಗಳು ಕೆರೆಯ ಕಾಯಕಕ್ಕೆ ಮುನ್ನುಡಿ ಬರೆದಿದ್ದಾರೆ. ಅವರೊಟ್ಟಿಗೆ ನಾವೂ ಸಮಾಜಮುಖೀ ಸೇವೆ ಮಾಡಿ ಇತರೆ ಗ್ರಾಮಗಳಿಗೂ ಮಾದರಿಯಾಗೋಣ ಎಂಬ ಅಭಿಪ್ರಾಯಗಳನ್ನು ಸರಣಿ ಸಭೆಗಳಲ್ಲಿ ಚರ್ಚಿಸಿದ್ದಾರೆ.
ನಮ್ಮ ಕೆರೆ ನಮ್ಮ ಹೆಮ್ಮೆ ಅಭಿಯಾನ : ಈ ಹಿಂದೆ ಕುಷ್ಟಗಿ ತಾಲೂಕಿನ ನಿಡಶೇಷಿ ಕೆರೆಯ ಅಭಿವೃದ್ಧಿ ವೇಳೆ ಗ್ರಾಮದ ಮುಖಂಡರು ಕೈಗೊಂಡಿರುವ ಕಾರ್ಯದಂತೆ ನಾವು ಮುಂದಾಗೋಣ, ನಮ್ಮ ಕೆರೆಯನ್ನು ನಾವು ಉಳಿಸದಿದ್ದರೆ ಮತ್ಯಾರು ಉಳಿಸುವರು. ನಮ್ಮ ನೈಸರ್ಗಿಕ ಜಲಮೂಲಗಳನ್ನು ರಕ್ಷಣೆ ಮಾಡಿದರೆ ಮುಂದಿನ ನಮ್ಮ ಪೀಳಿಗೆ ನೆಮ್ಮದಿಯಿಂದ ಜೀವನ ನಡೆಸಲಿವೆ. ಇಲ್ಲದಿದ್ದರೆ ನೀರಿಗಾಗಿ ಹಾಹಾಕಾರ ಎದುರಾಗಲಿದೆಎಂಬುದನ್ನು ಅರಿತು “ನಮ್ಮ ಕೆರೆ ನಮ್ಮ ಹೆಮ್ಮೆ’ ಎಂದುಯುವಕರು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ. ಇದಕ್ಕೆ ಹಲವು ಜನಪರ ಸಂಘಟನೆಗಳು,ಯುವಕರು, ಹಿರಿಯರು, ಸಂಘ-ಸಂಸ್ಥೆಗಳು ಸೇರಿರಾಜಕೀಯ ನಾಯಕರೂ ಕೈಜೋಡಿಸುತ್ತಿದ್ದಾರೆ.
ಫೆ. 18ಕ್ಕೆ ಶ್ರೀಗಳ ಪಾದಯಾತ್ರೆ ಸಾಧ್ಯತೆ: ಕೆರೆಯ ಹೂಳೆತ್ತುವ ಕಾರ್ಯ ಇದೇ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆಯಿದ್ದು, ಫೆ.18ರಂದು ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಹೂಳೆತ್ತುವ ಕಾರ್ಯದ ಪೂರ್ವ ತಯಾರಿಯಾಗಿ ಗಿಣಗೇರಿ ಗ್ರಾಮದಲ್ಲಿ ಸಂಜೆ ಪಾದಯಾತ್ರೆ ನಡೆಸಿ ಜನರಲ್ಲಿ ಕೆರೆ ಸಂರಕ್ಷಣೆಯ ಜಾಗೃತಿ ಮೂಡಿಸುವ ಸಾಧ್ಯತೆಯಿದೆ. ಫೆ.21ರಂದು ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ದೊರೆಯುವ ಸಾಧ್ಯತೆಯಿದೆ.
ಆದರೆ ಗವಿಮಠ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಆದರೆ ಗ್ರಾಮದ ಮುಖಂಡರು ತಮ್ಮಷ್ಟಕ್ಕೆ ತಾವು ಸೇವೆ ಸಲ್ಲಿಸಲು ಜೆಸಿಬಿಗಳ ವ್ಯವಸ್ಥೆ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿಕೊಂಡು ತಮ್ಮ ಕೆಲಸಕ್ಕೆ ಅಣಿ ಮಾಡಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಗಿಣಗೇರಿ ಗ್ರಾಮದ ಜನರಲ್ಲಿ ಕೆರೆಯ ಹೂಳೆತ್ತುವ ಕಾರ್ಯದಲ್ಲಿ ಭಾರಿ ಉತ್ಸಾಹ-ಹುಮ್ಮಸ್ಸು ಕಾಣಿಸಿ ಎಲ್ಲರೂ ಒಗ್ಗಟ್ಟಿನಿಂದ ಕೆರೆ ಹೂಳೆತ್ತುವ ಕಾರ್ಯ ಎದುರು ನೋಡುತ್ತಿದ್ದಾರೆ.
ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳು ಕೆರೆ ಹೂಳೆತ್ತುವ ಕಾರ್ಯದ ಕುರಿತಂತೆ ಗ್ರಾಮದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ನಾವುಗ್ರಾಮದಲ್ಲಿನ ಎಲ್ಲ ಹಿರಿಯರೊಂದಿಗೆ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿ ಕೆರೆ ಹೂಳೆತ್ತುವ ಕಾರ್ಯಕ್ಕೆ ತಯಾರಿ ಮಾಡಿಕೊಂಡಿದ್ದೇವೆ.
– ಗೂಳಪ್ಪ ಹಲಗೇರಿ, ಗ್ರಾಮದ ಮುಖಂಡರು
-ದತ್ತು ಕಮ್ಮಾರ