ಫ್ಲೋರಿಡಾ: ಐಸಿಸಿ ಟಿ20 ವಿಶ್ವಕಪ್ 2024ರ ಗುಂಪು ಹಂತದಲ್ಲಿ ಟೀಂ ಇಂಡಿಯಾದ ಪಂದ್ಯಗಳು ಮುಗಿದಿದೆ. ಶನಿವಾರ ಫ್ಲೋರಿಡಾದಲ್ಲಿ ಕೆನಡಾ ವಿರುದ್ದದ ಪಂದ್ಯವು ಮಳೆಯ ಕಾರಣದಿಂದ ರದ್ದಾಗಿದೆ. ಈ ಮೂಲಕ ಭಾರತ ತಂಡವು ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಸೂಪರ್ 8 ಹಂತಕ್ಕೆ ತೇರ್ಗಡೆಯಾಗಿದೆ.
ಅಮೆರಿಕ ಲೆಗ್ ಮುಗಿಸಿರುವ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಗೆ ಪ್ರಯಾಣ ಬೆಳೆಸಲಿದೆ. ಸೂಪರ್ 8 ಹಂತದ ಪಂದ್ಯಗಳನ್ನು ಕೆರಿಬಿಯನ್ ನಲ್ಲಿ ಆಡಲಿದೆ.
ಭಾರತ ತಂಡದ ಜೊತೆ ಮೀಸಲು ಆಟಗಾರರಾಗಿ ಪ್ರಯಾಣಿಸಿದ್ದ ಶುಭ್ಮನ್ ಗಿಲ್ ಮತ್ತು ಆವೇಶ್ ಖಾನ್ ಅವರನ್ನು ಭಾರತಕ್ಕೆ ಕಳುಹಿಸಲಾಗಿದೆ. ಉಳಿದಿಬ್ಬರು ಮೀಸಲು ಆಟಗಾರರಾದ ರಿಂಕು ಸಿಂಗ್ ಮತ್ತು ಖಲೀಲ್ ಅಹಮದ್ ಅವರು ತಂಡದೊಂದಿಗೆ ಪ್ರಯಾಣಿಸಲಿದ್ದಾರೆ.
ಅಶಿಸ್ತಿನ ಕಾರಣದಿಂದ ಟೀಂ ಮ್ಯಾನೇಜ್ ಮೆಂಟ್ ಶುಭ್ಮನ್ ಗಿಲ್ ಅವರನ್ನು ಭಾರತಕ್ಕೆ ವಾಪಾಸ್ ಕಳುಹಿಸಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿತ್ತು. ಆದರೆ, ಇದು ಎಲ್ಲವೂ ಪೂರ್ವ ಯೋಜಿತ ಎಂದು ಹೇಳುವ ಮೂಲಕ ಭಾರತ ತಂಡದ ಬ್ಯಾಟಿಂಗ್ ಕೋಚ್ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಕೆರಿಬಿಯನ್ ಲೆಗ್‌ಗಾಗಿ ಕೇವಲ ಇಬ್ಬರು ಮೀಸಲು ಆಟಗಾರರು ಮಾತ್ರ ತಂಡದೊಂದಿಗೆ ಇರಲಿದ್ದಾರೆ ಎನ್ನುವುದು ಪಂದ್ಯಾವಳಿಯ ಮೊದಲೇ ಟೀಂ ಮ್ಯಾನೇಜ್ ಮೆಂಟ್ ನಿರ್ಣಯ ಮಾಡಿತ್ತು ಎಂದು ವಿಕ್ರಮ್ ರಾಥೋರ್ ಬಹಿರಂಗಪಡಿಸಿದರು.
ಭಾರತವು ಸೂಪರ್ 8ರ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.