ಹೊಸದಿಲ್ಲಿ: ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಅವರು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ಅವರ ಪಕ್ಷ ಭಾನುವಾರ ಪ್ರಕಟಿಸಿದೆ.
ಅವರು ಕಾಂಗ್ರೆಸ್ ತೊರೆದ ನಂತರ 2022 ರಲ್ಲಿ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ಪಕ್ಷ ಸ್ಥಾಪಿಸಿದ್ದರು. ಇದೀಗ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
“ಡಿಪಿಎಪಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಸಾಹಿಬ್ ಅವರು ಅನಂತನಾಗ್-ರಾಜೌರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇಂದಿನ ಡಿಪಿಎಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಪಕ್ಷದ ಮುಖ್ಯ ವಕ್ತಾರ ಸಲ್ಮಾನ್ ನಿಜಾಮಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
2014ರ ಲೋಕಸಭೆ ಚುನಾವಣೆಯಲ್ಲಿ ಆಜಾದ್ ಅವರು ಉಧಂಪುರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಜಿತೇಂದ್ರ ಸಿಂಗ್ ಎದುರು ಸೋತಿದ್ದರು. ಪಕ್ಷವು ಈ ವರ್ಷ ಮಾಜಿ ರಾಜ್ಯ ಸಚಿವ ಜಿ.ಎಂ.ಸರೂರಿಯನ್ನು ಉಧಂಪುರದಿಂದ ಕಣಕ್ಕಿಳಿಸಿದೆ.
ವಿರೋಧ ಪಕ್ಷದ ಮೈತ್ರಿ ಇಂಡಿಯಾ ಬ್ಲಾಕ್‌ನ ಭಾಗವಾಗಿರುವ ನ್ಯಾಷನಲ್ ಕಾನ್ಫರೆನ್ಸ್, ಅನಂತನಾಗ್-ರಜೌರಿ ಸ್ಥಾನಕ್ಕೆ ಹಿರಿಯ ನಾಯಕ ಮಿಯಾನ್ ಅಲ್ತಾಫ್ ಅಹ್ಮದ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಹೆಸರಿಸಿದೆ.