ಬೆಂಗಳೂರು: ಈ ಭ್ರಷ್ಟಾಚಾರದ ಭೂತ ನಿಮಗೂ ಅಂಟಿದೆ, ನಮಗೂ ಅಂಟಿದೆ. ಈ ಸಂಕಷ್ಟದಿಂದ ನೀವು (ಗುತ್ತೆಗೆದಾರರು) ನಾವು (ರಾಜಕೀಯದವರು) ಇಬ್ಬರೂ ಪಾರಾಗಬೇಕಿದೆ ಎಂದು ಬೆಂಗಳೂರು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಸೋಮವಾರ ಹಮ್ಮಿಕೊಂಡಿದ್ದ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ಗುತ್ತಿಗೆ ಕ್ಷೇತ್ರದಲ್ಲಿ ಪ್ಯಾಕೇಜ್ ಪದ್ಧತಿ ಮಾಫಿಯಾ ಆರಂಭವಾಗಿದೆ. ದೊಡ್ಡ ಗುತ್ತಿಗೆದಾರರು ಬೃಹತ್ ಮೊತ್ತದ ಪ್ಯಾಕೇಜ್ ಯೋಜನೆಗಳನ್ನು ತೆಗೆದುಕೊಂಡು ತುಂಡು ಗುತ್ತಿಗೆಯಾಗಿ ಸಣ್ಣವರಿಗೆ ನೀಡುತ್ತಿದ್ದಾರೆ. ಇದು ಸರಕಾರದ ಗಮನಕ್ಕೆ ಬಂದಿದ್ದು ಕಡಿವಾಣ ಹಾಕಲಾಗುವುದು ಎಂದು ಭರವಸೆ ನೀಡಿದರು.
ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ರಾಜಕೀಯದವರ ಸಹವಾಸ ಮಾಡಬೇಡಿ. ಗುತ್ತಿಗೆದಾರರಿಗೆ ಕಿರುಕುಳ ನೀಡುತ್ತಿರುವುದು ನನ್ನ ಗಮನದಲ್ಲಿದೆ. ನೀವು ಹಣವನ್ನು ಬಡ್ಡಿಗೆ ತಂದು, ಮೀಟರ್ ಬಡ್ಡಿ ಕಟ್ಟುತ್ತಾ, ಆಸ್ತಿಗಳನ್ನು ಅಡವಿಟ್ಟು ಕಾಮಗಾರಿಗಳನ್ನು ಮಾಡಿರುತ್ತೀರಿ. ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾದಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬಿಜೆಪಿ ಸರಕಾರದಿಂದ ಹೊರೆ
ಬಿಜೆಪಿ ಸರಕಾರ ಸರಿಯಾದ ಯೋಜನೆ ಮಾಡದೆ ನಿಮ್ಮ ಮೇಲೆ ಹೊರೆ ಹಾಕಿದೆ. ನೀರಾವರಿ ಇಲಾಖೆ ಬಜೆಟ್ 16 ಸಾ.ಕೋಟಿ ರೂ. ಇದೆ. ಆದರೆ ಕಳೆದ ಬಾರಿ 25 ಸಾವಿರ ಕೋ. ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡ ಲಾಗಿತ್ತು. ಜಲಸಂಪನ್ಮೂಲ ಇಲಾಖೆಯಲ್ಲಿ 1ಲಕ್ಷ 25 ಸಾ. ಕೋ.ರೂ. ಮೊತ್ತದ ಕಾಮಗಾರಿ ನಡೆಯುತ್ತಿದೆ. ಹೀಗಿ ದ್ದಾಗ ಗುತ್ತಿಗೆದಾರರು ಕೆಲಸ ಮುಗಿಸುವುದು ಹೇಗೆ? ಸರಕಾರ ಬಿಲ್ ಪಾವತಿ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.