Advertisement

ಘೋಡ್‌ಬಂದರ್‌ ರೋಡ್‌ ಕನ್ನಡ ಅಸೋಸಿಯೇಶನ್‌ ಜಿಬಿಆರ್‌ಕೆಎ ಟ್ರೋಫಿ

04:52 PM Mar 29, 2018 | Team Udayavani |

ಥಾಣೆ: ಘೋಡ್‌ಬಂದರ್‌ರೋಡ್‌ ಕನ್ನಡ ಅಸೋಸಿಯೇಶನ್‌ ಥಾಣೆ ಇದರ ದ್ವಿತೀಯ ವಾರ್ಷಿಕ ಸೀಮಿತ ಓವರ್‌ಗಳ ಜಿಬಿಆರ್‌ಕೆಎ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟದ ಸಮಾರೋಪ ಹಾಗೂ ಬಹುಮಾನ ವಿತರಣೆ ಸಮಾರಂಭವು ಥಾಣೆ ಪಶ್ಚಿಮದ ಘೋಡ್‌ಬಂದರ್‌ ರೋಡ್‌ ಹೈಪರ್‌ ಸಿಟಿಮಾಲ್‌ ಸಮೀಪದ ಟಿಎಂಸಿ ಮೈದಾನದಲ್ಲಿ ಮಾ. 25 ರಂದು ಸಂಜೆ ಜರಗಿತು.

Advertisement

ಒಟ್ಟು ಹದಿನೆಂಟು ತಂಡಗಳು ಭಾಗವಹಿಸಿದ ಈ ಪಂದ್ಯಾಟದಲ್ಲಿ ಚಾನೆಲ್‌ ಇಲೆವೆನ್‌ ತಂಡವು ಪ್ರಥಮ ಸ್ಥಾನವನ್ನು ಪಡೆದು 1,11,111 ರೂ. ನಗದು ಮತ್ತು ಟ್ರೋಫಿ, ಪ್ರಶಸ್ತಿ ಪತ್ರವನ್ನು ಮುಡಿಗೇರಿಸಿಕೊಂಡಿತು. ಸಾನ್ವಿ ಸ್ಟಾರ್‌ ಮುಂಬಯಿ ತಂಡವು  ದ್ವಿತೀಯ ಸ್ಥಾನದೊಂದಿಗೆ 55,555 ರೂ. ನಗದು ಮತ್ತು ಟ್ರೋಫಿ ಹಾಗೂ ಪ್ರಶಸ್ತಿ ಪತ್ರವನ್ನು ನಿಡಲಾಯಿತು. ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ಚಾನೆಲ್‌  ತಂಡದ ಅಬ್ಬು ಇವರು ಪಂದ್ಯ ಪುರುಷೋತ್ತಮ ಮತ್ತು ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

ಸಾನ್ವಿ ಸ್ಟಾರ್‌ ತಂಡದ ಪ್ರಶಾಂತ್‌ ಪೂಜಾರಿ ಇವರು ಉತ್ತಮ ಎಸೆತಗಾರ ಮತ್ತು ಚಾನೆಲ್‌ ಇಲೆವೆೆನ್‌ ತಂಡದ ಮಿಥುನ್‌ ಉತ್ತಮ ದಾಂಡಿಗ ಪ್ರಶಸ್ತಿಗೆ ಭಾಜನರಾದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ್‌ ಪೂಜಾರಿ ಇವರು ಮಾತನಾಡಿ, ದೊಡ್ಡ ಮಟ್ಟದ ಮೊತ್ತದೊಂದಿಗೆ ಪಂದ್ಯಾಟವನ್ನು ಆಯೋಜಿಸಿ ಕ್ರೀಡೆಗೆ ವಿಶೇಷ ಪ್ರೋತ್ಸಾಹ ನೀಡಿದ್ದೀರಿ. ಜಾತಿ, ಮತ, ಭೇದವಿಲ್ಲದೆ ಒಗ್ಗಟ್ಟಿನಿಂದ ಬಾಳಲು ಆಟೋಟಗಳು ಪ್ರೇರಕ ಶಕ್ತಿಯಾಗಿದೆ. ಆತ್ಮ ವಿಶ್ವಾಸ, ಮನೋಸ್ಥೈರ್ಯ ಹೆಚ್ಚಿಸುವ ಪಂದ್ಯಾಟಗಳು ದೈಹಿಕ, ಮಾನಸಿಕ, ಬೌದ್ಧಿಕ, ಬೆಳವಣಿಗೆಗೆ ಸಹಕಾರಿಯಾಗಲಿವೆ. ಶಿಸ್ತುಬದ್ಧ ಆಯೋಜನೆಯಿಂದ ನಾಡು-ನುಡಿಯ ಕಲಾ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಲು ಸಾಧ್ಯ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಘೋಡ್‌ಬಂದರ್‌ರೋಡ್‌ ಕನ್ನಡ ಅಸೋಸಿಯೇಶನ್‌ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ ಇವರು ಮಾತನಾಪಿ, ಎರಡು ತಿಂಗಳ ಅವಿಶ್ರಾಂತ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಕ್ರೀಡಾ ಉಪ ಸಮಿತಿಯ ಅಶೋಕ್‌ ಮೂಲ್ಯ ಮತ್ತು ತಂಡದವರ ಶ್ರಮದಾಯಕ ಸಾಧನೆ ಫಲ ನೀಡಿದೆ. ಮಹಿಳಾ ವಿಭಾಗ, ಸರ್ವ ಸದಸ್ಯರು, ಥಾಣೆ ಹೊಟೇಲ್‌ ಅಸೋಸಿಯೇಶನ್‌, ದಾನಿಗಳು ಹಾಗೂ ಸಹಪ್ರಾಯೋಜಕರಾದ ಕತ್ತಲೆಕೋಣೆ ಚಿತ್ರದ ತಂಡದವರ ಸಹಕಾರವನ್ನು ಮರೆಯುವಂತಿಲ್ಲ. ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಕ್ರಿಕೆಟ್‌ ತಂಡದವರಿಗೂ, ಸರ್ವ ಸದಸ್ಯರಿಗೂ, ಅಂತಾರಾಳದ ಕೃತಜ್ಞತೆಗಳು ಎಂದು ನುಡಿದು ಶುಭಹಾರೈಸಿದರು. ದಾನಿಗಳಾದ ಶ್ಯಾಮ್‌ ಎನ್‌. ಶೆಟ್ಟಿ, ಮಹೇಶ್‌ ಕರ್ಕೇರ, ನಗರ ಸೇವಕ ರವಿ ಕಾರತ್‌, ಕತ್ತಲೆಕೋಣೆ ಚಿತ್ರದ ನಿರ್ಮಾಪಕ ಪುರುಷೋತ್ತಮ ಅಮೀನ್‌, ನಿನಾದ್‌ ಬೋರ್ಕರ್‌, ಕಲಾವಿದೆ ಅನಿತಾ ರಾವ್‌ ಇವರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಶುಭಹಾರೈಸಿದರು. ಜತೆ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಬೆಳುವಾಯಿ ಗಣ್ಯರುಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಮನೀಷ್‌ ಶೆಟ್ಟಿ ನಿಟ್ಟೆ ವೀಕ್ಷಕ ವಿವರಣೆ ನೀಡಿದರು.ವೇದಿಕೆಯಲ್ಲಿ ಪದಾಧಿಕಾರಿಗಳಾದ ಲಕ್ಷ್ಮ ಣ್‌ ಮಣಿಯಾಣಿ, ಹರೀಶ್‌ ಡಿ. ಸಾಲ್ಯಾನ್‌, ಪ್ರತಿಭಾ ಎ. ಶೆಟ್ಟಿ, ಜಯ ಪೂಜಾರಿ, ಚಂದ್ರಶೇಖರ ಶೆಟ್ಟಿ, ಗೋಪಾಲ್‌ ಶೆಟ್ಟಿ, ಪ್ರಶಾಂತ್‌ ನಾಯಕ್‌, ಅಶೋಕ್‌ ಮೂಲ್ಯ, ಸೀತಾರಾಮ ಶೆಟ್ಟಿ, ಕರುಣಾಕರ ಶೆಟ್ಟಿ, ಪ್ರವೀಣ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next