Advertisement

ಕಾವ್ಯಗಳಲ್ಲಿ ಗಜಲ್‌ ಸುಂದರ ಶೈಲಿ: ವಾಹೀದ್‌ ವಾಜೀದ್‌

03:04 PM Jan 02, 2018 | |

ರಾಯಚೂರು: ಜಗತ್ತಿನ ಕಾವ್ಯಗಳಲ್ಲಿ ಗಜಲ್‌ ಪ್ರಕಾರ ಬಹಳ ಸುಂದರ ಶೈಲಿಯ ಬರವಣಿಗೆಯಾಗಿದೆ. ಆಸ್ವಾದಿಸುವ ಸಂಗೀತ ಮತ್ತು ಸಾಹಿತ್ಯಾಸಕ್ತರಿಗೆ ಗಜಲ್‌ಗಿಂತ ಉತ್ತಮ ಸಾಹಿತ್ಯವಿಲ್ಲ ಎಂದು ಉರ್ದು ಅಕಾಡೆಮಿ ಸದಸ್ಯ ವಾಹೀದ್‌ ವಾಜೀದ್‌ ಅಭಿಪ್ರಾಯಪಟ್ಟರು.

Advertisement

ನಗರದ ಕನ್ನಡ ಭವನದಲ್ಲಿ ಸುರಭಿ ಸಾಂಸ್ಕೃತಿಕ ಬಳಗ ಮತ್ತು ಚುಟುಕು ಸಾಹಿತ್ಯ ಪರಿಷತ್‌ನಿಂದ ಕವಿ ಸಾಮ್ರಾಟ್‌ ಮಿರ್ಜಾ ಗಾಲಿಬ್‌ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಗಜಲ್‌ ಕಾವ್ಯ ಚರ್ಚಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸಾಮಾನ್ಯವಾಗಿ ಗಜಲ್‌ ಉರ್ದು, ಹಿಂದಿಯಲ್ಲಿ ಪ್ರಚಲಿತ. ಆದರೆ, ಅಂಥ ಕ್ಲಿಷ್ಟಕರ ಕಾವ್ಯವನ್ನು ಕನ್ನಡದಲ್ಲೂ ರಚಿಸಿರುವುದು ಸಂತೋಷದ ಸಂಗತಿ. ಆದರೆ, ಗಜಲ್‌ ಕಾವ್ಯದ ಸಾಹಿತ್ಯವನ್ನು ಅರಿತು ಸೂತ್ರದ ಅನುಸಾರ ಬರೆದಾಗ ಮಾತ್ರ ಅದು ಮೂರ್ತರೂಪ ತಾಳುತ್ತದೆ. ಇಲ್ಲವೆಂದರೆ ಆಭಾಸವಾಗುತ್ತದೆ. ಗಜಲ್‌ ಸಾಹಿತ್ಯ ಅರಿಯದೆ ರಚಿಸಿದರೆ ಅದು ಕಾವ್ಯವಾಗುತ್ತದೆ ಅಷ್ಟೇ ಎಂದರು.
 
ಈ ಭಾಗದ ಖ್ಯಾತನಾಮರಾದ ಶಾಂತರಸರು, ಮುಕ್ತಾಯಕ್ಕ, ಜಂಬಣ್ಣ ಅಮರಚಿಂತರಂಥ ಸಾಹಿತಿಗಳು ಗಜಲ್‌ ಕಾವ್ಯಕ್ಕೆ ಮನಸೋತು ಸೊಗಸಾದ ಗಜಲ್‌ಗ‌ಳನ್ನು ರಚಿಸಿದ್ದಾರೆ. ಗಜಲ್‌ ರಚನೆ ಶೈಲಿ ಬೇರೆಯದ್ದೇ ರೂಪತಾಳಿದೆ. ಯುವ ಕವಿಗಳು ಗಜಲ್‌ನಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಯುವ ಕವಿ ಈರಣ್ಣ ಬೆಂಗಾಲಿ ಮಾತನಾಡಿ, ಗಜಲ್‌ ಎಂದಾಕ್ಷಣ ನಮ್ಮ ಭಾಗದ ಕಡೆ ತಿರುಗಿ ನೋಡುವ ಹಾಗೆ ನಮ್ಮಲ್ಲಿನ ಸಾಹಿತಿಗಳು ಗಜಲ್‌ ರಚಿಸಿದ್ದಾರೆ. ಅವರ ಪ್ರಭಾವದಿಂದ ಇತರರು ಗಜಲ್‌ ರಚನೆಯಲ್ಲಿ ತೊಡಗಿಕೊಂಡಿರುವುದು ಉತ್ತಮ ಬೆಳವಣಿಗೆ. ಗಜಲ್‌ ಕಾವ್ಯ ಸುಮಧುರ ಶೈಲಿಯಿಂದ ಕೂಡಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. ಯುವ ಕವಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪ್ರಾಧ್ಯಾಪಕ ದಸ್ತಗಿರ್‌ಸಾಬ್‌ ದಿನ್ನಿ ಮಾತನಾಡಿ, ಗಜಲ್‌ ಕಾವ್ಯ ಹಲವು ಆಯಾಮಗಳನ್ನು ಒಳಗೊಂಡಿದೆ. ಗಜಲ್‌ ಕಾವ್ಯದ ಬಗ್ಗೆ ಆಸಕ್ತಿ ಬೆಳೆಯಲು ಇಂಥ ಸಂವಾದ ಕಾರ್ಯಕ್ರಮಗಳು ಪೂರಕ. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವೀರಹನುಮಾನ್‌ ಮಾತನಾಡಿ, ಗಜಲ್‌ ಕಾವ್ಯ ಪರಂಪರೆ ಮುಂದುವರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸಿದ್ದು, ವಾಹೀದ್‌ ವಾಜೀದ್‌ ಅವರಿಂದ ಮತ್ತಷ್ಟು ಉಪನ್ಯಾಸಗಳನ್ನು ಆಯೋಜಿಸುವುದು ಅಗತ್ಯ ಎಂದರು.

ಕವಿಗಳಾದ ಮಹಾದೇವ ಪಾಟೀಲ್‌, ಮಲ್ಲೇಶ, ಅಂಬಮ್ಮ, ಭೀಮೋಜಿರಾವ್‌, ಯಲ್ಲಪ್ಪ, ಶಿವಶಂಕರ, ಮುದಿರಾಜ, ಸೈಯ್ಯದ್‌ ಹಫೀಜುಲ್ಲಾ, ಎಚ್‌.ಎಚ್‌.ಮ್ಯಾದಾರ್‌, ಬಾಬು ಭಂಡಾರಿಗಲ್‌, ಶ್ರೀನಿವಾಸ ಗಟ್ಟು, ಭಗತರಾಜ ನಿಜಾಂಕಾರಿ ಸೇರಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next