ಮುಂಬಯಿ: ಘಾಟ್‌ಕೋಪರ್ ಪೂರ್ವದ ಪಂತ್‌ನಗರ ಶ್ರೀ ದುರ್ಗಾಪರಮೇಶ್ವರಿ ಮಂದಿರದಲ್ಲಿ ವಾರ್ಷಿಕ ಉತ್ಸವವು ಮೇ 1ರಂದು ಪ್ರಾರಂಭಗೊಂಡಿದ್ದು, ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೇ 3 ರವರೆಗೆ ಜರಗಲಿದೆ.
ಮೇ 1ರಂದು ನವಕ ಕಲಶಾಭಿಷೇಕ ಪೂಜೆ, ಗಣಪತಿ ಹೋಮ, ಮಹಾ ಮಂಗಳಾರತಿ, ದುರ್ಗಾ ನಮಸ್ಕಾರ ಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿತು. ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ರೂವಾರಿ ಸತೀಶ್ ಸಾಲ್ಯಾನ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಂದಿರದ ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಕುಂಬಳೆ ವಿದ್ವಾನ್ ಹರಿನಾರಾಯಣ ಮಯ್ಯ ಅವರು ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜೆಗಳನ್ನು ಹಾಗೂ ದೇವಿಯ ಬಲಿ ಉತ್ಸವವನ್ನು ನಡೆಸಲಿದ್ದಾರೆ.
ಮೇ 2ರಂದು ಸ್ವಸ್ತಿ ಪುಣ್ಯಾಹವಾಚನ, ರುದ್ರದೇವರಿಗೆ ಸರ್ವ ಕಲಶ ಅಭಿಷೇಕ, ಶ್ರೀ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಸಾಮೂಹಿಕ ಚಂಡಿಕಾ ಹವನ ಯಾಗವು ನಡೆಯಲಿದ್ದು, ಅನಂತರ ದುರ್ಗಾದೇವಿಯ ಮಹಾಪೂಜೆಯನ್ನು ಆಯೋಜಿಸಲಾಗಿದೆ. ಮೇ 3
ರಂದು ಬೆಳಗ್ಗೆ ಶ್ರೀ ದುರ್ಗಾಪರೇಶ್ವರಿ ನವಕ ಕಲಶಾಭಿಷೇಕ,ರುದ್ರಾಭಿಷೇಕ, ಸಂಜೆ 7 ಗಂಟೆಗೆ ಮಹಾಪೂಜೆ, ಮಹಾ ಪ್ರಸಾದ ವಿತರಣೆ ನಡೆಯಲಿದ್ದು, ತುಳು-ಕನ್ನಡಿಗರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸು ವಂತೆ ತಿಳಿಸಲಾಯಿತು.
ಚಿತ್ರ-ವರದಿ: ಸುಭಾಷ್ ಶಿರಿಯಾ