Advertisement

ಕಾರಂಜಾ ಸಂತ್ರಸ್ತರಿಂದ ಸಚಿವ ಖಾಶೆಂಪೂರಗೆ ಘೇರಾವ್‌

09:41 AM Jan 18, 2019 | Team Udayavani |

ಬೀದರ: ಕಾರಂಜಾ ಮುಳುಗಡೆ ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಳಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಸದಸ್ಯರು ಸಚಿವ ಬಂಡೆಪ್ಪ ಖಾಶೆಂಪೂರ ಅವರಿಗೆ ಘೇರಾವ್‌ ಹಾಕಿದ ಘಟನೆ ಗುರುವಾರ ನಡೆಯಿತು.

Advertisement

ಬಡವರ ಬಂಧು ಹಾಗೂ ಕಾಯಕ ಯೋಜನೆ ಚಾಲನೆಗೆ ಆಗಮಿಸಿದ ಸಚಿವರಿಗೆ ಘೇರಾವ್‌ ಹಾಕಿದ ರೈತರು. ಕಾರಂಜಾ ಯೋಜನೆಗೆ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ನ್ಯಾಯ ನೀಡುವುದಾಗಿ ಹೇಳಿದ್ದು, ಇಂದಿಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 15-10-2018ರಂದು ಬೆಂಗಳೂರಿನ ವಿಧಾನ ಸೌಧದ ಸಭಾಂಗಣದಲ್ಲಿ ಮುಖ್ಯಮಂತ್ರಿಗಳು ಪರಿಹಾರ ಕೊಡುವುದಾಗಿ ಆಸ್ವಾಸನೆ ನೀಡಿದರು. ಅಲ್ಲದೇ 16-11-2018ರಂದು ಬೀದರ ನಗರಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಬಹಿರಂಗ ಸಭೆಯಲ್ಲಿಯೇ ಸೂಕ್ತ ಪರಿಹಾರ ನೀಡುವ ಭರವಸೆ ಕೂಡ ನೀಡಿದರು. ಕೂಡಲೆ ಸರ್ಕಾರ ರೈತರಿಗೆ ಸ್ಪಂದಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಬಂಡೆಪ್ಪ ಖಾಶೆಂಪೂರ ಅವರು, ಕಾರಂಜಾ ಸಂತ್ರಸ್ತರ ಕುರಿತು ಮತ್ತೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಮೂಲಕ ನ್ಯಾಯ ಒದಗಿಸುವ ಕಾರ್ಯ ಮಾಡುವುದಾಗಿ ಭರವಸೆ ನೀಡಿದರು.

ನಂತರ ಮಾತನಾಡಿದ ಹೋರಾಟ ಸಮಿತಿ ಮುಖಂಡರು, ಸರ್ಕಾರ ಫೆ.1ರ ವರೆಗೆ ಸೂಕ್ತ ಪರಿಹಾರ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳದಿದ್ದರೆ, ಕಾರಂಜಾ ಜಲಾಶಯದಿಂದ ಹರಿದು ಹೋಗುವ ನೀರಿನ ಪೈಪ್‌ಗ್ಳು ಒಡೆದು ಹಾಕುವ ಮೂಲಕ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ಸರ್ಕಾರ ಸ್ಪಂದಿಸದಿದ್ದರೆ ನಾನು ನಿಮ್ಮ ಹೋರಾಟದಲ್ಲಿ ಭಾಗಿ ಆಗುವುದಾಗಿ ತಿಳಿಸಿದರು.

ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚ್ಚಕನಳ್ಳಿ, ವೀರಭದ್ರಪ್ಪ ಉಪ್ಪಿನ, ರಾಜಕುಮಾರ ಚಿಲ್ಲರ್ಗಿ, ನಾಗಶೆಟ್ಟೆಪ್ಪಾ ಹಚ್ಚಿ, ಅರವಿಂದ ಕುಲಕರ್ಣಿ, ಓಂಕಾರ ಪಾಟೀಲ, ವಿಜಯಕುಮಾರ ಕುಲಕರ್ಣಿ, ವೈಜಿನಾಥ ಮರಕಲ, ರಾಜಪ್ಪ ಕಮಾಲಪೂರ, ಬಸವರಾಜ, ಮಲಶೆಟ್ಟೆಪ್ಪಾ, ಚಂದ್ರಶೇಖರ, ಸೂರ್ಯಕಾಂತ ಸಂಗೋಳಗಿ, ಬಾಬುರಾವ್‌ ಹಜ್ಜರಗಿ, ಸುಭಾಷ ಬ್ಯಾಲಹಳ್ಳಿ, ಸಂಗ್ರಾಮಪ್ಪಾ ಹಿಂದೊಡ್ಡಿ, ಶಿವಶರಣಪ್ಪ ಔರಾದ, ರಿತಿಕ ಕುಲಕರ್ಣಿ, ಭೀಮರೆಡ್ಡಿ, ವಿಜಯಕುಮಾರ ಬೋರಾಳ, ಮೋಹನರಾವ್‌, ದಾಮೋದರ, ಕಾಶೀನಾಥ, ಶ್ರೀಕಾಂತ ಹಜ್ಜರಗಿ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next