ನವಿಮುಂಬಯಿ: ಕಾರಣಿಕ ಕ್ಷೇತ್ರ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ನ. 20ರಂದು ತುಳಸಿ ಪೂಜೆಯನ್ನು ವಿವಿಧ ಧಾರ್ಮಿಕ ಪೂಜಾ ಕಾರ್ಯ ಕ್ರಮಗಳೊಂದಿಗೆ ನಡೆಸಲಾಯಿತು.
ಸಂಜೆ ಶ್ರೀ ಮೂಕಾಂಬಿಕಾ ಭಜನಾ ಮಂಡಳಿಯವರಿಂದ ಭಜನೆ, ಅನಂತರ ಕುಣಿತ ಭಜನೆ, ತುಳಸಿ ವಿವಾಹ, ತುಳಸಿ ಪೂಜೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ, ಹೊಟೇಲ್ ಉದ್ಯಮಿಗಳಾದ ಚಿದಾನಂದ ಶೆಟ್ಟಿ ಅವರ ಸೇವಾರ್ಥಕವಾಗಿ ಅನ್ನಪ್ರಸಾದ ನಡೆಯಿತು.
ದೇವಾಲಯ ಪ್ರಧಾನ ಅರ್ಚಕ ರಾದ ಗುರುಪ್ರಸಾದ್ ಭಟ್ ಅವರು ತುಳಸಿ ಪೂಜೆ ನೆರವೇರಿಸಿ ಭಕ್ತರಿಗೆ ತುಳಸಿ ಪೂಜೆಯ ಮಹತ್ವವನ್ನು ತಿಳಿಸಿ, ಕಾರ್ತಿಕ ಮಾಸದಲ್ಲಿ ಬರುವ ದೀಪಾವಳಿಯು ದೀಪಗಳ ಹಬ್ಬ ವಾದರೆ, ಅನಂತರ ದ್ವಾದಶಿಯಂದು ಬರುವ ಹಬ್ಬವೇ ತುಳಸಿ ಪೂಜೆ. ವಿಷ್ಣುವು ಶಂಕಾಸುರನೆಂಬ ರಾಕ್ಷಸನನ್ನು ಸಂಹರಿಸಿ ಆಯಾಸ ಪರಿಹಾರಾರ್ತಕನಾಗಿ ಆಷಾಢ ಏಕಾದಶಿಯಂದು ದೀರ್ಘ ನಿದ್ದೆ ಗೊಳಗಾದವನು ನಾಲ್ಕು ತಿಂಗಳ ಅನಂತರ ಕಾರ್ತಿಕ ಮಾಸದ ಶುಕ್ಲ ದ್ವಾದಶಿಯಂದು ಎಚ್ಚರಗೊಳ್ಳುತ್ತಾನೆ. ಆದ್ದರಿಂದಲೇ ಈ ಹಬಕ್ಕೆ ಉತ್ಥಾನ ದ್ವಾದಶಿ ಎನ್ನುತ್ತಾರೆ. ಹಿಂದೂ ಧರ್ಮದಲ್ಲಿ ಎಲ್ಲರೂ ತುಳಸಿಯನ್ನು ಪೂಜಿಸುತ್ತಾರೆ.
ಆಯುರ್ವೇದ ದಲ್ಲಿಯೂ ತುಳಸಿಗೆ ಮಹತ್ವದ ಸ್ಥಾನವಿದೆ. ಮನೆ ಯಂಗಳದಲ್ಲಿ ತುಳಸಿಗಿಡವಿದ್ದರೆ ಮನೆಯಲ್ಲಿ ಆರೋಗ್ಯ ಸುಖ, ಸಂಪತ್ತು ವೃದ್ಧಿಯಾಗುತ್ತದೆ ಎಂದು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಅಂತಹ ಮಹತ್ವದ ತುಳಸಿಯ ಪೂಜೆಯನ್ನು ಇಂದು ನಾವು ಶಾಸ್ತ್ರೋಕ್ತವಾಗಿ ಆಚರಿಸಿದ್ದೇವೆ. ನಿಮಗೆಲ್ಲರಿಗೂ ವಿಷ್ಣು ದೇವರು, ಹರಿವಲ್ಲಭೆ ತುಳಸಿ ಮಾತೆ, ತಾಯಿ ಮೂಕಾಂಬಿಕೆ ಸನ್ಮಂಗಳನ್ನುಂಟು ಮಾಡಲಿ ಎಂದು ಹಾರೈಸಿದರು.
ಅಪಾರ ಸಂಖ್ಯೆಯಲ್ಲಿ ಭಕ್ತರು ತುಳಸಿ ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ನಂದಿಕೂರು ಜಗದೀಶ್ ಶೆಟ್ಟಿ, ಕೆ.ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಶ್ ಎಸ್. ಕೋಟ್ಯಾನ್, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ ಎಂ. ಶೆಟ್ಟಿ, ಕೋಶಾಧಿಕಾರಿ ಶೇಖರ್ ವಿ. ದೇವಾಡಿಗ, ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್ ಶೆಟ್ಟಿ, ಸಮಿತಿಯ ಸರ್ವ ಸದಸ್ಯರು, ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಸದಸ್ಯರು, ಉಪಸಮಿತಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯೆಯರು ಪಾಲ್ಗೊಂಡು ಸಹಕರಿಸಿದರು.