Advertisement

ಪೋಲಿ ಹೋಟೆಲ್‌ನಲ್ಲಿ ಘಮ ಘಮಾ ಬೆಣ್ಣೆದೋಸೆ

06:15 AM Aug 13, 2018 | |

ಬ್ರಾಹ್ಮಣರ ಫ‌ಲಾರಾರ ಮಂದಿರ, ವೀರಶೈವರ ಖಾನಾವಳಿ, ಉಡುಪಿ ಹೋಟೆಲ್‌, ಗೌಡರ ಹೋಟೆಲ್‌, ಇವೆಲ್ಲಾ ಹೆಸರುಗಳನ್ನು ಓದಿರುತ್ತೀರಿ. ಮನೆದೇವರು, ಇಷ್ಟದ ದೇವರ ಹೆಸರಿನಲ್ಲಿ ಇರುವ ಹೋಟೆಲುಗಳಿಗೂ ಲೆಕ್ಕವಿಲ್ಲ. ಸೋದರ-ಸೋದರಿಯರ, ಮೆಚ್ಚಿನ ನಟ-ನಟಿಯರ, ಪ್ರೇಯಸಿಯರ ಹಾಗೂ ಮಕ್ಕಳ ಹೆಸರು ಹೊಂದಿದ ಹೋಟೆಲುಗಳೂ ಸಾಕಷ್ಟಿವೆ. ಆದರೆ ಹೋಟೆಲೊಂದಕ್ಕೆ ಪೋಲಿ ಹೋಟೆಲ್‌ ಎಂದೇ ಹೆಸರಿಡಲಾಗಿದೆ ಮತ್ತು ಅದು ತುಂಬಾ ಫೇಮಸ್‌ ಆಗಿದೆ ಅಂದರೆ…

Advertisement

ಈ ಅಚ್ಚರಿಯನ್ನು ನೋಡಬೇಕೆಂದರೆ ನೀವು ಹಲಗೂರಿಗೆ ಬರಬೇಕು. ಮಂಡ್ಯ ಜಿಲ್ಲೆ ಮಳವಳ್ಳಿಯಿಂದ ಮುತ್ತತ್ತಿಗೆ ಹೋಗುವ ದಾರಿಯಲ್ಲಿ ಸೆಂಟರ್‌ ಪಾಯಿಂಟ್‌ ಥರಾ ಸಿಗುವ ಸ್ಥಳವೇ ಹಲಗೂರು. ಮುತ್ತತ್ತಿಗೆ ಹೋಗುವ ಮುಖ್ಯರಸ್ತೆಯಲ್ಲೇ ಈ ಹೋಟೆಲ್‌ ಇದೆ. 

ಪ್ರವಾಸಿಗರಿಂದ, ತಿಂಡಿ ಪ್ರಿಯರಿಂದ ಸದಾ ಗಿಜಿ ಗಿಜಿ ಅನ್ನುವುದು ಈ ಹೋಟೆಲಿನ ಹೆಚ್ಚುಗಾರಿಕೆ. ಪೋಲಿ ಹೋಟಲಿಗೆ ನಾ ಮುಂದು ತಾಮುಂದು ಎಂದು ಜನ ನುಗ್ಗಿ ಬರಲಿಕ್ಕೆ ಕಾರಣ ಇಲ್ಲಿನ ಬೆಣ್ಣೆ ದೋಸೆ! ಬಹಳಷ್ಟು ಮಂದಿ ಅರ್ಧಡಜನ್‌ ದೋಸೆ ತಿನ್ನುತ್ತಾರೆ ಅಂದರೆ, ಇಲ್ಲಿ ದೋಸೆಯ ರುಚಿ ಹೇಗಿರಬಹುದು ಲೆಕ್ಕ ಹಾಕಿ. 

ಈಗ ಹೋಟೆಲನ್ನು ಸುರೇಂದ್ರ ಎನ್ನುವವರು ನೋಡಿಕೊಳ್ಳುತ್ತಾರೆ ‘ ಸಾರ್‌, ಎಲ್ಲರೂ ಹೋಟೆಲಿಗೆ ದೇವರ ಹೆಸರು ಇಡುತ್ತಾರೆ. ಇದ್ಯಾಕೆ ನಿಮ್ಮ ಹೋಟೆಲಿಗೆ ಪೋಲಿ ಹೋಟೆಲ್‌ ಎಂಬ ಹೆಸರು ಬಂತು ಎಂದರೆ ಅವರು ಒಂದು ಸ್ವಾರಸ್ಯದ ಕಥೆ ಹೇಳುತ್ತಾರೆ.

60 ವರ್ಷದ ಹಿಂದೆ ಹವಾಲ್ದಾರ್‌ ಶಿವಣ್ಣ ಎಂಬಾತ ಇಲ್ಲಿ ಒಂದು ಹೋಟೆಲ್‌ ಇಟ್ಟಿದ್ದರಂತೆ. ಈ ಶಿವಣ್ಣ ಮತ್ಯಾರು ಅಲ್ಲ; ಸುರೇಂದ್ರ ಅವರ ತಾತ. ಹೋಟೆಲ್‌ ಶುರುವಾದ ದಿನಗಳಲ್ಲಿ ಈ ಪ್ರದೇಶವಿಡೀ ಕೃಷಿ ಭೂಮಿಯಿಂದ ಸುತ್ತುವರಿದಿತ್ತಂತೆ. ಜಮೀನಿನ ಮಧ್ಯೆಯೇ ಈ ಹೋಟೆಲೂ ಇತ್ತು. ಅದಕ್ಕೆ ಯಾವ ಹೆಸರೂ ಇರಲಿಲ್ಲ. ಜನ ಅದನ್ನು ಶಿವಣ್ಣನ ಹೋಟೆಲ್‌ ಎಂದೇ ಕರೆಯುತ್ತಿದ್ದರಂತೆ. 

Advertisement

ಹಳ್ಳಿ ಜನ ಅಂದಮೇಲೆ ಕೇಳಬೇಕೆ? ಅವರೆಲ್ಲ ದನ-ಕರು, ಕುರಿ-ಆಡುಗಳನ್ನೆಲ್ಲ ಮೇಯಲು ಬಿಟ್ಟು ಮತ್ತೆಲ್ಲೋ ಹರಟುತ್ತ ಕೂತುಬಿಡುತ್ತಿದ್ದರಂತೆ. ಮೇಯಲು ಬಂದ ಜಾನುವಾರುಗಳು ಕೆಲವೊಮ್ಮೆ ಸೀದಾ ಹೋಟೆಲಿಗೇ ಬರುತ್ತಿದ್ದವಂತೆ. ನೋಡುವಷ್ಟು ದಿನ ನೋಡಿದ ಶಿವಣ್ಣ, ಕಡೆಗೊಮ್ಮೆ ಆ ಜಾನುವಾರಗಳನ್ನೆಲ್ಲ ಕಟ್ಟಿ ಹಾಕಿ, ಅವುಗಳ ಮಾಲೀಕರಿಗೆ ಪೋಲಿ ಮಾತುಗಳಲ್ಲೇ ಬೈಯ್ದರಂತೆ. ಅಂದಿನಿಂದ ಜನ ಅವಲರಿಗೆ ಪೋಲಿ ಹೋಟೆಲ್‌ ಶಿವಣ್ಣ ಎಂದು ಹೆಸರಿಟ್ಟರಂತೆ. 

ಶಿವಣ್ಣ ಅವರ ತರುವಾಯ ಅವರ ಮಗ ನಾಗರಾಜು ಹೋಟೆಲಿನ ಓನರ್‌ ಆದರು. ಈ ಸಂದರ್ಭದಲ್ಲಿಯೇ, ಇದೇ ಹೋಟೆಲಿನ ಹಿಂದೆ ಬೋರ್‌ವೆಲ್‌ ಯಂತ್ರ ಕೊರೆಸುವ ಶಾಪ್‌ ಆರಂಭವಾಗಿದೆ. ಅವರು ಅಡ್ರೆಸ್‌ ಬರೆಸುವಾಗ, ಪೋಲಿ ಹೋಟೆಲ್‌ ಹಿಂಭಾಗ ಎಂದು ಬರೆಸಿದರಂತೆ. ಅಂದಿನಿಂತ ಇದು ಪೋಲಿ ಹೋಟೆಲ್‌ ಎಂದೇ ಹೆಸರಾಗಿದೆ. 

ಇಲ್ಲಿ ಸಿಗುವ ಸೆಟ್‌ ದೋಸೆ, ಬೆಣ್ಣೆ ದೋಸೆ, ಕೆಂಪು ಚಟ್ನಿಗೆ ಮರುಳಾಗದವರಿಲ್ಲ. ಬೆಳಗಿನಿಂದ ಸಂಜೆಯವರೆಗೂ ದೋಸೆ ಸಿಗುತ್ತದೆ. ಸಾದಾ ದೋಸೆಗೆ 40 ಹಾಗೂ ಬೆಣ್ಣೆ ದೋಸೆಗೆ 50ರೂ. ಉಪ್ಪಿಟ್ಟು, ರೈಸ್‌ಬಾತ್‌ ಹಾಗೂ ಮಿನಿ ಮೀಲ್ಸ್‌ಗೆ 25 ರೂ. ದರವಿದೆ. 

ಈ ಹೋಟೆಲಿನ ತಿಂಡಿ ಅದೆಷ್ಟು ರುಚಿಯಾಗಿದೆ ಅಂದರೆ, ಶೂಟಿಂಗ್‌ಗೆಂದು ಮುತ್ತತ್ತಿ ಅಥವಾ ಶಿವನಸಮುದ್ರಕ್ಕೆ ಹೋಗುವಾಗ, ನಟರಾದ ಶಿವರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಸೇರಿದಂತೆ ಹಲವರು ತಪ್ಪದೇ ಇಲ್ಲಿಗೆ ಬಂದು ಬೆಣ್ಣೆ ದೋಸೆ ತಿಂದೇ ಹೋಗುತ್ತಾರೆ. 

ಪೋಲಿ ಹೋಟೆಲ್‌ ಎಂಬುದು ಹೋಟೆಲಿನ ಹೆಸರಷ್ಟೇ ಆಗಿದೆ. ಹೋಟೆಲಿನ ಒಳಗೆ ಸಭ್ಯರೇ ಇರುತ್ತಾರೆ. ಮುತ್ತತ್ತಿಯ ಕಡೆಗೆ ಟ್ರಿಪ್‌ ಹೋದರೆ, ಪೋಲಿ ಹೋಟೆಲಿಗೂ ಹೋಗಿಬರಲು  ಮರೆಯಬೇಡಿ. 

– ಜಗದೀಶ್‌ ಮಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next