Advertisement

ಜಾತಿ ಪ್ರಮಾಣಪತ್ರ ಪಡೆಯಲು ಪರದಾಟ

12:43 PM Sep 19, 2018 | |

ಬೆಂಗಳೂರು: ಶಾಲಾ ಮಕ್ಕಳು, ವಿದ್ಯಾರ್ಥಿ ವೇತನದಿಂದ ವಂಚಿತವಾಗದಿರಲಿ ಎಂಬ ಉದ್ದೇಶದಿಂದ ಸರ್ಕಾರ ಆನ್‌ ಲೈನ್‌ನಲ್ಲಿ ಅರ್ಜಿಸಲ್ಲಿಸುವ ಸುಧಾರಿತ ವ್ಯವಸ್ಥೆ (ಸ್ಕಾಲರ್‌ಶಿಪ್‌ ಪೋರ್ಟಲ್‌)ಅನ್ನು ಜಾರಿಗೆ ತಂದಿದ್ದು, ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರು ನಗರ ಜಿಪಂ ಆವರಣದಲ್ಲಿ ಜಾತಿ ಪ್ರಮಾಣಪತ್ರ ಪಡೆಯಲು ಪೋಷಕರು ಮತ್ತು ವಿದ್ಯಾರ್ಥಿಗಳು ಪರದಾಡಿದರು.

Advertisement

ಸರ್ಕಾರ ಜಾರಿಗೆ ತಂದಿರುವ ನೂತನ “ಸ್ಕಾಲರ್‌ಶಿಪ್‌ ಪೋರ್ಟಲ್‌’ ಯೋಜನೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಜಾತಿ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ಮಾಡಲಾಗಿದ್ದು, ಪ್ರಮಾಣ ಪತ್ರಕ್ಕಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರ ಜತೆ ದೊಡ್ಡ ಸಾಲಿನಲ್ಲಿ ನಿಂತಿದ್ದರು.

ಪ್ರಮಾಣಪತ್ರ ನೀಡಲು ಜಿಲ್ಲಾಡಳಿತ ಒಂದೇ ಕೌಂಟರ್‌ ತೆರೆದಿದ್ದರಿಂದ ಬೆಳಗ್ಗೆಯಿಂದ ಸಂಜೆಯವರೆಗೂ ದೊಡ್ಡ ಸರದಿಯಲ್ಲಿ ಪೋಷಕರೊಂದಿಗೆ ಪುಟ್ಟ -ಪುಟ್ಟ ಮಕ್ಕಳು ಕೂಡ ಪರದಾಡಿದರು. ಬಿಳೆಕಹಳ್ಳಿ, ಅಂಜನಾಪುರ, ತಲಘಟ್ಟಪುರ, ಸೋಮನಹಳ್ಳಿ, ಚಂದ್ರಾನಗರ ಸೇರಿದಂತೆ ಬನಶಂಕರಿ ವ್ಯಾಪ್ತಿಯ ಹಲವು ಶಾಲೆಗಳ ನೂರಾರು ಮಕ್ಕಳು ಆಗಮಿಸಿದ್ದರು.

 ಉತ್ತರ ಕರ್ನಾಟಕ ಭಾಗದ ಕೂಲಿಕಾರ್ಮಿಕರು ಈ ಸಾಲಿನಲ್ಲಿ ಇದ್ದದ್ದು ವಿಶೇಷವಾಗಿತ್ತು. ದುಡಿಮೆಯಿಲ್ಲದೆ ಊರು ಬಿಟ್ಟು ಸಂಸಾರ ಸಮೇತ ಬಂದು ಬೆಂಗಳೂರು ಸೇರಿಕೊಂಡೆ. ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು, ಮಗುವನ್ನು ಬನಶಂಕರಿ ಸಮೀಪದ ಚಂದ್ರಾನಗರದ ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ. ಜಾತಿ ಪ್ರಮಾಣ ಪತ್ರಕ್ಕಾಗಿಯೇ ಕೂಲಿ ಬಿಟ್ಟು, ಮಗುವಿನೊಂದಿಗೆ ಸೋಮವಾರದಿಂದ ಅಲೆದಾಡುತ್ತಿದ್ದೇನೆ. ಆದರೂ, ಇನ್ನೂ ಜಾತಿ ಪ್ರಮಾಣ ಪತ್ರ ಕೈಗೆ ಸಿಕ್ಕಿಲ್ಲ ಎಂದು ಕಲಬುರಗಿ ಮೂಲದ ರಮೇಶ ದೂರಿದರು.

ಸೋಮವಾರದಿಂದಲೂ ಇಷ್ಟೇ ದೊಡ್ಡ ಸಂಖ್ಯೆಯ ಸಾಲಿದೆ. ಆದರೂ,ಜಿಲ್ಲಾಡಳಿತ ಕೌಂಟರ್‌ ಹೆಚ್ಚಳದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಧಿಕಾರಿಗಳಿಗೆ ಸಾರ್ವಜನಿಕರ ಸಂಕಷ್ಟ ತಿಳಿಯುತ್ತಿಲ್ಲ ಎಂದು ಯಾದಗಿರಿ ಮೂಲದ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಶೇ.30ರಷ್ಟು ಅರ್ಜಿಸಲ್ಲಿಕೆ: ಸುಮಾರು 2ಲಕ್ಷ ವಿದ್ಯಾರ್ಥಿಗಳನ್ನು ಸ್ಕಾಲರ್‌ಶಿಪ್‌ ಪೋರ್ಟಲ್‌ ಯೋಜನೆ ವ್ಯಾಪ್ತಿಗೆ ತರಲು ಬೆಂಗಳೂರು ನಗರ ಜಿಲ್ಲಾಡಳಿತ ಕ್ರಿಯಾಯೋಜನೆ ರೂಪಿಸಿದ್ದು, ಮಂಗಳವಾರದವರೆಗೂ ಶೇ.30.62 ಮಕ್ಕಳು ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹಿರಿಯ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ತಿಳಿಸಿದರು. ಅಕ್ಟೋಬರ್‌ ಅಂತ್ಯದವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ ಇದು,ª ಅದಕ್ಕೂ ಮೊದಲೇ ಗುರಿ ಮುಟ್ಟವ ಭರವಸೆ ಇದೆ ಎಂದರು.

ಶೇ.80 ವಿದ್ಯಾರ್ಥಿಗಳಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಇಲ್ಲ. ಹೀಗಾಗಿ, ಪ್ರಮಾಣಪತ್ರ ಪಡೆಯಲು ಪೋಷಕರು ಮುಂದಾಗುತ್ತಿದ್ದಾರೆ. ಅರ್ಜಿಸಲ್ಲಿಕೆ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನೆರವಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳನ್ನು ಈ ಯೋಜನೆ ವ್ಯಾಪ್ತಿಗೆ ತರುವ ವಿಶ್ವಾಸ ಇದೆ.
-ಎಂ.ಎಸ್‌.ಅರ್ಚನಾ, ಬೆಂಗಳೂರು ನಗರ ಜಿಪಂ ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next