Advertisement

ಮಾಹಿತಿ ಪಡೆಯುವುದೇ ಉದ್ಯಮವಾಗಬಾರದು

11:58 AM Jan 31, 2017 | Team Udayavani |

ಬೆಂಗಳೂರು: ಅಗತ್ಯ ಮಾಹಿತಿ ಪಡೆಯು ವುದು ಪ್ರತಿಯೊಬ್ಬರ ಹಕ್ಕು. ಆದರೆ, ವೈಯಕ್ತಿಕ ಅಗತ್ಯ, ಸಾರ್ವಜನಿಕ ಹಿತಾಸಕ್ತಿಯಿಂದ ಮಾಹಿತಿ ಹಕ್ಕಿನಡಿ ಮಾಹಿತಿ ಪಡೆಯಬೇಕೇ ಹೊರತು ಪ್ರಚಾರಕ್ಕಾಗಿ ಪಡೆಯಬಾರದು. ಮಾಹಿತಿ ಪಡೆಯುವುದನ್ನೇ ವೃತ್ತಿ, ಉದ್ಯಮ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ರಾಜ್ಯ ಮಾಹಿತಿ ಆಯೋಗದ ವತಿಯಿಂದ ಕೆಪಿಎಸ್‌ಸಿ ಕಟ್ಟಡದ ಸಮೀಪ ನೂತನವಾಗಿ ನಿರ್ಮಾಣಗೊಂಡ ಮಾಹಿತಿ ಸೌಧವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಅಗತ್ಯವಾದ ಮಾಹಿತಿ ಎಲ್ಲರಿಗೂ ಸಿಗಬೇಕು. ಆದರೆ ಅವಶ್ಯಕತೆ, ಜನಹಿತ ಉದ್ದೇಶದಿಂದ ಮಾಹಿತಿ ಪಡೆಯಬೇಕೆ ಹೊರತು ಪ್ರಚಾರಕ್ಕಾಗಿ ಪಡೆಯುವುದು ಸರಿಯಲ್ಲ ಎಂದರು.

ಇತ್ತೀಚೆಗೆ ಮಾಹಿತಿ ಹಕ್ಕು ಕಾರ್ಯಕರ್ತರು ಎಂಬುದಾಗಿ ಲೆಟರ್‌ಹೆಡ್‌, ವಿಸಿಟಿಂಗ್‌ ಕಾರ್ಡ್‌ ಮುದ್ರಿಸಿ ಬಳಸುವುದನ್ನು ಕಂಡಿ ದ್ದೇವೆ. ಆದರೆ, ಕಾನೂನಿನಲ್ಲಿ ಎಲ್ಲಿಯೂ ಈ ಬಗ್ಗೆ ಪ್ರಸ್ತಾಪವಿಲ್ಲ. ಆಡಳಿತದಲ್ಲಿನ ಲೋಪ, ಭ್ರಷ್ಟಾಚಾರ, ಅಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಎಲ್ಲರಿಗೂ ಹಕ್ಕಿದೆ. ಆದರೆ, ಅದನ್ನೇ ಉದ್ಯಮ, ವೃತ್ತಿ ಮಾಡಿಕೊಳ್ಳುವುದು ಸೂಕ್ತ ವಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಮಾಹಿತಿ ಹಕ್ಕು ಆಯೋಗಕ್ಕೆ ದೇಶದಲ್ಲೇ ಮೊದಲ ಬಾರಿಗೆ ಸ್ವಂತ ಕಟ್ಟಡ ನಿರ್ಮಾಣ ವಾಗಿರುವುದು ಕರ್ನಾಟಕದಲ್ಲಿ. ಸುಮಾರು 17 ಕೋಟಿ ರೂ. ವೆಚ್ಚದಲ್ಲಿ ಮಾಹಿತಿ ಸೌಧ ನಿರ್ಮಾಣವಾಗಿದ್ದು, ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅರ್ಧ ಮೊತ್ತವನ್ನು ರಾಜ್ಯ ಸರ್ಕಾರವೂ ಭರಿಸಿದೆ ಎಂದರು.

ಸದ್ಯದಲ್ಲೇ ಆಯುಕ್ತರ ನೇಮಕ: ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ, ಆಹಾರ ಭದ್ರತಾ ಕಾಯ್ದೆ ಹಾಗೂ ಉದ್ಯೋಗ ಖಾತ್ರಿ ಯೋಜನೆಗಳು ಹಿಂದಿನ ಯುಪಿಎ ಸರ್ಕಾರದ ಮಹತ್ವದ ಕೊಡುಗೆಗಳು. ಜನರ ಮೂಲಭೂತ ಹಕ್ಕು, ಬದುಕಿಗೆ ಸಂಬಂಧಿಸಿದಂತೆ ಹಾಗೂ ಸರ್ಕಾರದ ಆಡಳಿತ ಪಾರದರ್ಶಕವಾಗಿರಬೇಕು, ಜನರಿಗೆ ಮಾಹಿತಿ ಸುಲಭವಾಗಿ ಸಿಗಬೇಕು ಎಂಬ ಕಾರಣಕ್ಕೆ ಈ ಕಾಯ್ದೆಗಳನ್ನು ಜಾರಿಗೊಳಿಸಿದೆ. ಸದ್ಯದಲ್ಲೇ ಆಯೋಗಕ್ಕೆ ನೂತನ ಆಯುಕ್ತರು ಹಾಗೂ ಮೂವರು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು.

Advertisement

ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ದೇಶದಲ್ಲೇ ಎದ್ದು ಕಾಣುವಂತಹ ಮಾಹಿತಿ ಸೌಧ ಕರ್ನಾಟಕದಲ್ಲಿ ನಿರ್ಮಾಣವಾಗಿರುವುದು ಹೆಮ್ಮೆಯ ಸಂಗತಿ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಾಹಿತಿ ಹಕ್ಕಿನಂತಹ ಕಾಯ್ದೆಗಳು ಮಹತ್ವದ್ದಾಗಿದೆ. ವಿಧಾನಸೌಧದ ಸಮೀಪವೇ ಮಾಹಿತಿ ಸೌಧ ನಿರ್ಮಾಣವಾಗಿರುವುದು ಅರ್ಥಪೂರ್ಣವಾಗಿದೆ ಎಂದರು. ಕೇಂದ್ರ ಮಾಹಿತಿ ಆಯುಕ್ತ ಪ್ರೊ.ಎಂ.ಶ್ರೀಧರ್‌ ಆಚಾರ್ಯಲು, ಎಚ್‌.ಸಿ.ಮಹದೇವಪ್ಪ, ಮೇಯರ್‌ ಜಿ.ಪದ್ಮಾವತಿ, ರಾಜ್ಯ ಮುಖ್ಯ ಮಾಹಿತಿ ಆಯುಕ್ತ (ಪ್ರಭಾರ) ಎಲ್‌.ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.

“ಬಿಜೆಪಿ, ಕಾಂಗ್ರೆಸ್‌ ಇತರ ಪಕ್ಷಗಳಿಗೆ ಮಾದರಿಯಾಗಲಿ’
ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಸ್ವಯಂಪ್ರೇರಿತವಾಗಿ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡುವ ಮೂಲಕ ಇತರೆ ಪಕ್ಷಗಳಿಗೆ ಮಾದರಿಯಾಗಬೇಕು ಎಂದು ಕೇಂದ್ರ ಮಾಹಿತಿ ಆಯುಕ್ತ ಪ್ರೊ.ಎಂ.ಶ್ರೀಧರ್‌ ಆಚಾರ್ಯಲು ಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳ ವಹಿವಾಟುಗಳನ್ನು ಮಾಹಿತಿ ಹಕ್ಕು ಕಾಯ್ದೆಯಿಂದ ಹೊರಗಿಟ್ಟಿರುವುದು ಸರಿಯಲ್ಲ.

ಆದ್ದರಿಂದ 2 ಪ್ರಮುಖ ಪಕ್ಷಗಳು ಈ ಕಾಯ್ದೆ ಯ ವ್ಯಾಪ್ತಿಗೆ ಮೊದಲು ಬಂದು ಇತರೆ ಪಕ್ಷಗಳನ್ನು ಪ್ರೇರೇಪಿಸಬೇಕು ಎಂದರು. ಅರ್ಜಿದಾರರು ಕಾಯ್ದೆಯಡಿ ಮಾಹಿತಿ ಕೋರಿದ ಕೆಲ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಾಹಿತಿ ನಿರಾಕರಿಸಿ ನ್ಯಾಯಾಲಯದ ಮೆಟ್ಟಿಲೇರುವ ಪ್ರಸಂಗ ನಡೆಯುತ್ತಿದೆ. ಅಂತಹ ಪ್ರಕರಣಗಳಲ್ಲಿ ವಕೀಲರು ಅರ್ಜಿದಾರರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು.

ಆಯೋಗದ ಆ್ಯಪ್‌ ಬಿಡುಗಡೆ
ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಆರ್‌ಟಿಐ ಪ್ರಕರಣಗಳ ಮಾಹಿತಿ ಅಂಗೈ ನಲ್ಲಿ ಪಡೆಯಬಹುದಾದ ಮೊಬೈಲ್‌ ಆ್ಯಪ್‌ ಸೇವೆಗೆ (ಪ್ಲೇ ಸ್ಟೋರ್‌ನಲ್ಲಿ kಜಿc ಎಂದು ನಮೂದಿಸಿ ಆ್ಯಪ್‌ ಡೌನ್‌ಲೋಡ್‌ ಮಾಡಬಹುದು) ಇದೇ ವೇಳೆ ಚಾಲನೆ ನೀಡಲಾಯಿತು. 

ನೂತನ ಆ್ಯಪ್‌ನಲ್ಲಿ ಸಾರ್ವಜನಿಕರಿಗೆ ಸ್ವೀಕೃತಿ ವಿವರ, ಆಯೋಗದಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ ವಿವರ, ಅರ್ಜಿದಾರರ ದೂರು ಯಾವ ನ್ಯಾಯಾಲಯ ದಲ್ಲಿ ವಿಚಾರಣೆಗೆ ಬರಲಿದೆ ಎಂಬ ಮಾಹಿತಿ ಸಿಗಲಿದೆ. ಜತೆಗೆ ಪ್ರಕರಣಗಳ ವಿಚಾರಣೆ ದಿನಾಂಕವನ್ನೂ ಪಡೆದು ನ್ಯಾಯಾಲಯ ಸಭಾಂಗಣಕ್ಕೆ ಹಾಜರಾಗಬಹುದಾಗಿದೆ. ವಿಚಾರಣೆಯಾದ ಪ್ರಕರಣಗಳ ಆದೇಶ ಪ್ರತಿಯೂ ಆ್ಯಪ್‌ನಲ್ಲಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next