ದೇವದುರ್ಗ: ರೈತರಿಗೆ ಮಾರಕವಾಗಲಿರುವ ಮೂರು ಕೃಷಿ ಕಾಯ್ದೆಗಳ ವಾಪಸ್ ಬೆಳೆಗಳಿಗೆ ಶಾಸನ ಬದ್ಧ ಬೆಂಬಲ ಬೆಲೆ ಮತ್ತು ಖರೀದಿಗೆ ಕಾನೂನಾತ್ಮಕ ಖಾತರಿ ನೀಡಲು ಒತ್ತಾಯಿಸಿ ಜನಾಂದೋಲನ ಮಹಾಮೈತ್ರಿಯ ಜಾಥಾ ದೇವದುರ್ಗಕ್ಕೆ ಗುರುವಾರ ಆಗಮಿಸಿತು.
ಜನಾಂದೋಲನ ಪರಿವರ್ತನಾ ಸಮಿತಿ ಅಧ್ಯಕ್ಷ ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಕ್ಲಬ್ ಆವರಣದಿಂದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತವರೆಗೆ ಜಾಥಾ ಮಾಡಲಾಯಿತು.
ಬಹಿರಂಗ ಸಭೆಯನ್ನು ಉದ್ದೇಶಿಸಿ ಎಸ್. ಆರ್.ಹಿರೇಮಠ ಮಾತನಾಡಿ, ಕೇಂದ್ರ ಸರಕಾರ ರೈತ ಶಕ್ತಿಗೆ ಬೆದರಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದುಕೊಂಡಿದೆ. ಆದರೆ, ರಾಜ್ಯ ಸರಕಾರಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ಚುನಾಯಿತ ಜನಪ್ರತಿನಿಧಿಗಳು ವಿರೋಧಿ ನಿಲುವುಗಳನ್ನು ಕೈಗೊಂಡಾಗ ಮತ್ತು ದಾರಿ ತಪ್ಪಿದಾಗ ಜನರೇ ಒಗ್ಗೂಡಿ ಪಾಠ ಕಲಿಸುವ ಅನಿವಾರ್ಯತೆ ಇದೆ. ಈಗಾಗಲೇ ಇದು ಅನೇಕ ಘಟನೆಗಳಲ್ಲಿ ಸಾಬೀತುಗೊಂಡಿದೆ. ಕೇಂದ್ರ ಮತ್ತು ರಾಜ್ಯದ ಆಡಳಿತದಲ್ಲಿ ಶೇ.40ರಷ್ಟು ಕ್ರಿಮಿನಲ್ ಜನಪ್ರತಿನಿಧಿಗಳಿದ್ದು, ಇದು ದೇಶಕ್ಕೆ ದೊಡ್ಡ ಆತಂಕಕಾರಿ ಸಂಗತಿಯಾಗಿದೆ ಎಂದು ದೂರಿದರು.
ಜನಪ್ರತಿನಿಧಿಗಳು ಜನಸೇವಕರು ಎಂಬುದನ್ನು ಮರೆತಿದ್ದಾರೆ. ವ್ಯಾಪಕ ಭ್ರಷ್ಟಾಚಾರ ಎಸಗುತ್ತಾ ದೊಡ್ಡ-ದೊಡ್ಡ ಶ್ರೀಮಂತರ ಕೈಯಲ್ಲಿ ಅಧಿಕಾರಿ ಹೋಗುತ್ತಿದೆ. ಆದಾಯ, ಸಂಪತ್ತು ಕೇಂದ್ರೀಕೃತವಾಗುತ್ತಿದೆ. ಸ್ವರಾಜ್ ಕಲ್ಪನೆ ದಾರಿ ತಪ್ಪುತ್ತಿದೆ. ಜನಶಕ್ತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದಾಗ ಮಾತ್ರ ನ್ಯಾಯ ಪಡೆಯಲು ಸಾಧ್ಯ. ಜನಜಾಗೃತಿ ಮೂಡಿಸಿ ಹೊಸ ಆಂದೋಲನ ಪ್ರಾರಂಭ ಮಾಡಲಾಗಿದ್ದು, ಬೀದರ ಜಿಲ್ಲೆಯ ಬಸವ ಕಲ್ಯಾಣದಿಂದ ಬೆಂಗಳೂರವರೆಗೆ, ಚಾಮರಾಜ ನಗರ ಜಿಲ್ಲೆಯ ಮಲೇಮಹದೇಶ್ವರ ಬೆಟ್ಟದಿಂದ ಬೆಂಗಳೂರವರೆಗೆ 2ನೇ ಹಂತದಲ್ಲಿ ಜಾಥಾ ನಡೆಯಲಿದ್ದು, ಪ್ರಗತಿಪರ ಚಿಂತಕರು, ವಿವಿಧ ಸಂಘಟನೆಗಳ ಮೂಲ ಉದ್ದೇಶ ಸಫಲತೆಗೆ ಸಹಕರಿಸಬೇಕು ಎಂದು ಕರೆ ನೀಡಿದರು.
ಜನಸಂಗ್ರಾಮ ಸಮಿತಿ ಜಿಲ್ಲಾ ಸಂಚಾಲಕ ಭೀಮರಾಯ ನಾಯಕ ಜರದಬಂಡಿ, ವಿವಿಧ ಸಂಘಟನೆಗಳ ಮುಖಂಡರಾದ ಪಿ.ಗಿರಿಯಪ್ಪ ಪೂಜಾರಿ, ಶಂಕರಗೌಡ, ಖಾಜಾ ಅಸ್ಲಾಂಸಾಬ್, ಬೂದೆಯ್ಯ ಸ್ವಾಮಿ ಗಬ್ಬೂರ ಮಾತನಾಡಿದರು. ಉಮಾಪತಿಗೌಡ ನಗರಗುಂಡ, ಚನ್ನಬಸವ ಹಾಗೂ ಕೂಲಿಕಾರರ ಸಂಘಟನೆಗಳು ಪಾಲ್ಗೊಂಡಿದ್ದವು.