Advertisement

ಗ್ರಾಮೀಣ ವಿದ್ಯಾರ್ಥಿಗಳ ಕೀಳರಿಮೆ ತೊಡೆದು ಹಾಕಿ

11:49 AM Dec 09, 2018 | Team Udayavani |

ಮೈಸೂರು: ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಏನಾದರೂ ಕೊಡುಗೆ ನೀಡುವಂತಾಗಬೇಕು ಎಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಹೇಳಿದರು. ಶಾರದಾ ವಿಲಾಸ ಕಾನೂನು ಕಾಲೇಜುವತಿಯಿಂದ ಶನಿವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

Advertisement

ಗ್ರಾಮಾಂತರ ಪ್ರದೇಶಗಳಿಂದ ಬಂದಂತಹ ವಿದ್ಯಾರ್ಥಿಗಳಲ್ಲಿ ಅಳುಕು, ಕೀಳರಿಮೆ ಇರುವುದು ಸಾಮಾನ್ಯ. ಉಪನ್ಯಾಸಕ ವರ್ಗ ಮಕ್ಕಳಲ್ಲಿರುವ ಕೊರತೆ, ದೌರ್ಬಲ್ಯಗಳನ್ನು ಗಮನಿಸಿ ಸರಿಪಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ಷಮತೆ: ದೇಶದ ಭವಿಷ್ಯವನ್ನು ರೂಪಿಸುವ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಬೇಕು. ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬ ಜೀವಿಗೂ ಕಟ್ಟುಪಾಡುಗಳಿರಬೇಕು. ಸರ್ಕಾರ ತನ್ನ ಕಾರ್ಯಕ್ಷಮತೆ ಮಾಡಲು ಸಮತೋಲನವಿರಬೇಕು, ಇಲ್ಲದಿದ್ದಲ್ಲಿ ಅರಾಜಕತೆ ಉಂಟಾಗುತ್ತದೆ ಎಂದು ತಿಳಿಸಿದರು.

ವಿವೇಕ ಚಿಂತನೆ: ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂದೆಂದಿಗೂ ಅಜರಾಮರ. ಹಣ ಮುಖ್ಯವಲ್ಲ, ಸಮಾಜಕ್ಕೆ ಬಂದ ಮೇಲೆ ಸಮಾಜಕ್ಕೆ ಋಣಿಯಾಗಿ ಕೆಲಸ ಮಾಡಬೇಕು ಎಂದ ಅವರು ಸಂಸ್ಕಾರ, ಶಿಕ್ಷಣ, ಶ್ರದ್ಧೆ, ಧೈರ್ಯ, ಶ್ರಮ, ಆತ್ಮವಿಶ್ವಾಸದ್ದಲ್ಲಿ ಯಶಸ್ಸನ್ನು ಸಾಧಿಸಬಹುದು.

ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಸರ್ಕಾರ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟರು. ಮೂಲಭೂತ ಹಕ್ಕುಗಳನ್ನು ನೀಡಿದರು. ನಿರ್ದೇಶಕ ತತ್ವಗಳನ್ನು ಅಳವಡಿಸಿಕೊಂಡು ಸಂವಿಧಾನದ ಆಶೋತ್ತರಗಳಿಗೆ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

Advertisement

ಇದೇ ವೇಳೆ ಶಾರದಾ ವಿಲಾಸ ವಿದ್ಯಾಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾದ ಕಿರಿಯ ಶ್ರೇಣಿ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಡಿ.ರೋಹಿಣಿ, ಗೋಪಾಲಕೃಷ್ಣ ಹಾಗೂ ಪ್ರತಾಪ್‌ಕುಮಾರ್‌ ಅವರನ್ನು ಗೌರವಿಸಲಾಯಿತು.

ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸುರೇಶ್‌ ಲಕ್ಷ್ಮಣ್‌ ಕೃಷ್ಣಪ್ಪ ಒಂಟಿಗೋಡಿ, ಮಂಡ್ಯದ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯದ ಅಭಿಯೋಜಕ ಎಚ್‌.ಇ.ಚಿಣ್ಣಪ್ಪ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಸ್‌.ಆನಂದಕುಮಾರ್‌, ಶಾರದಾ ವಿಲಾಸ ವಿದ್ಯಾಸಂಸ್ಥೆಗಳ ಅಧ್ಯಕ್ಷ ಬಿ.ಎಸ್‌.ಪಾರ್ಥಸಾರಥಿ,

ಗೌರವ ಕಾರ್ಯದರ್ಶಿ ಎಚ್‌.ಕೆ.ಶ್ರೀನಾಥ್‌, ಆಡಳಿತ ಮಂಡಳಿ ಸದಸ್ಯರಾದ ವೈ.ಕೆ.ಭಾಸ್ಕರ್‌, ಕೃಷ್ಣ, ನಾಗರಾಜ್‌, ವಕೀಲರುಗಳಾದ ಎಸ್‌.ಲೋಕೇಶ್‌, ಆರ್‌.ಗಂಗಾಧರ್‌, ಕನ್ನಡ ಪ್ರಾಧ್ಯಾಪಕ ಹಾಗೂ ಸಮಾಜ ಸೇವಕ ರಾಜೇಂದ್ರ ಪ್ರಸಾದ್‌ ಹೊನ್ನಲಗೆರೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next