Advertisement

ವಿಪತ್ತು ನಿರ್ವಹಣೆಗೆ ಸಿದ್ಧರಾಗಿ

11:10 AM Apr 27, 2022 | Team Udayavani |

ಕಾರವಾರ: ಬರುವ ಮಳೆಗಾಲದ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮುಂಜಾಗೃತಾ ಕ್ರಮವಾಗಿ ಅಗತ್ಯ ಸಂಪನ್ಮೂಲಗಳ ಕ್ರೋಢಿಕರಣ, ಬೇಡಿಕೆ ಹಾಗೂ ಕಾರ್ಯನಿರ್ವಹಣೆ ಕುರಿತು ಸದಾ ಸಿದ್ಧವಾಗಿರಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಹೇಳಿದರು.

Advertisement

ಡಿಸಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಮುಂಗಾರು ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಹಿತದೃಷ್ಠಿಯಿಂದ ಪ್ರತಿಯೊಂದು ಇಲಾಖೆ ಖಚಿತ ಮಾಹಿತಿಯೊಂದಿಗೆ ಜನರಿಗೆ ಬೇಕಾದ ಮಾಹಿತಿ ಮತ್ತು ಅಗತ್ಯ ಸೌಲಭ್ಯ ನೀಡಿ ಜನರ ಸುರಕ್ಷತೆಗೆ ಹೆಚ್ಚು ಗಮನ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ಜಲಾಶಯಗಳ ನಿರ್ವಹಣೆ ಕುರಿತು, ಮಳೆಗಾಲದ ಆರಂಭದಲ್ಲಿ ಜಲಾಶಯಗಳ ಒಳಹರಿವು ಆಧರಿಸಿ ನೀರಿನ ಮಟ್ಟವನ್ನು ಜನರ ಸುರಕ್ಷತೆ ದೃಷ್ಠಿಯಿಂದ ಹೆಚ್ಚಾಗದಂತೆ ನೋಡಿಕೊಳ್ಳಲು ತಿಳಿಸಿದರು.

ಮುಂಜಾಗ್ರತಾ ಕ್ರಮವಾಗಿ ಜನರಿಗೆ ಜಲಾಶಯದ ನೀರಿನ ಮಟ್ಟದ ಕುರಿತು, ನೀರು ಹೊರಬಿಡುತ್ತಿರುವ ಕುರಿತು ಅಗತ್ಯ ಮಾಹಿತಿ ತಲುಪಿಸುವುದು, ಅಗತ್ಯ ಸುರಕ್ಷತಾ ಕಾರ್ಯ ಮಾಡಬೇಕೆಂದು ಹಾಗೂ ಮೇ 10 ರೊಳಗೆ ಈ ಕುರಿತು ಸಭೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಕರಾವಳಿಗೆ ಹೊಂದಿಕೊಂಡ ತಾಲೂಕು ಸೇರಿದಂತೆ ಜಿಲ್ಲೆಯ ಎಲ್ಲ ತಾಲೂಕಿನ ವಿವಿಧ ಗ್ರಾಮಗಳಿಗೆ ಮಳೆಯಿಂದಾಗಿ ಸಂಭವಿಸಬಹುದಾದ ರಸ್ತೆ, ಸೇತುವೆ ಮುಳುಗಡೆ ಸಮಸ್ಯೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಸಂವಹನ ಮಾದ್ಯಮ ಬಳಸಿಕೊಂಡು ಜನರಿಗೆ ಬೇಕಾದ ಅಗತ್ಯ ಮಾಹಿತಿ ಒದಗಿಸುವುದು. ಭೂಕುಸಿತ ಸಂಭವಿಸುವ ಪ್ರದೇಶಗಳನ್ನು ಗುರುತಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದರು.

Advertisement

ಪ್ರವಾಹ ಸಂದರ್ಭದಲ್ಲಿ ಮುಳುಗಡೆಯಾಗುವ, ಹಾನಿಗೊಳಗಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡುವುದು. ವಿಪತ್ತು ನಿರ್ವಹಣೆಗಾಗಿ ಅಗತ್ಯ ಸಂಪನ್ಮೂಲಗಳ ಕ್ರೋಢಿಕರಣ, ಈಜುಗಾರರು, ದೋಣಿ, ಜೆಸಿಬಿ, ಕ್ರೇನ್‌, ಇಟಾಚಿ, ಜನಸಾಗಣೆ ವಾಹನ, ಎನ್‌ಜಿಓ ಇತ್ಯಾದಿ ಬಳಸಿಕೊಂಡು ವಿಪತ್ತು ನಿರ್ವಹಣೆ ಕಾರ್ಯ ಕೈಗೊಳ್ಳುವುದು ಹಾಗೂ ಈ ಕುರಿತು 1 ವಾರದಲ್ಲಿ ಪಂಚಾಯತ್‌ ಮಟ್ಟದಲ್ಲಿ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವ ಕುರಿತು ಯೋಜನೆ ವರದಿ ತಯಾರಿಸಿ ಸಲ್ಲಿಸಿಬೇಕು ಎಂದರು.

ಪಿಡಬ್ಲೂಡಿ, ಕೆಪಿಟಿಸಿಎಲ್‌, ಇಲಾಖೆಗಳ ಕಾಮಗಾರಿಗಳ ಕುರಿತು ಮುತುವರ್ಜಿ ವಹಿಸಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು, ಅದಕ್ಕಾಗಿ ಸ್ಕೆಡೂಲ್‌ ಮಾಡಿಕೊಂಡು ದಾಖಲೆ ಸಹಿತ ಫೋಟೊಗ್ರಾಫ್‌ ಲಗತ್ತಿಸಿ ವರದಿ ಸಲ್ಲಿಸಬೇಕೆಂದು ಈ ಎರಡೂ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಿಇಒ ಪ್ರಿಯಾಂಕಾ ಎಂ. ಎಸ್ಪಿ ಡಾ| ಸುಮನ್‌ ಪೆನ್ನೇಕರ್‌, ಎಡಿಸಿ ರಾಜು ಮೊಗವೀರ, ಎಸಿ ಜಯಲಕ್ಷ್ಮೀ ರಾಯಕೋಡ್‌ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next