ಪುತ್ತೂರು: ಪಕ್ಷೇತರ ಅಭ್ಯರ್ಥಿಯು ಸಂಘದ ಚೌಕಟ್ಟು ಮೀರಿ ಕಣಕ್ಕಿಳಿದಿದ್ದು ಇದರಿಂದ ಹಿಂದುತ್ವದ ರಕ್ಷಣೆ ಸಾಧ್ಯವಿಲ್ಲ. ಇದು ಸಂಘಟನೆಯ ಚೌಕಟ್ಟಿನ ಆಶಯಕ್ಕೆ ವಿರುದ್ಧದ ನಡೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದುತ್ವದ ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅರುಣ್ ಕುಮಾರ್ ಪುತ್ತಿಲರ ಸ್ಪರ್ಧೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಈ ಮಟ್ಟಕ್ಕೆ ಬೆಳೆಯಲು ಕಾರಣವಾದ ಸಂಘಟನೆಗಳನ್ನು ಎಂದೂ ಮರೆಯುವಂತಿಲ್ಲ. ಒಂದು ವೇಳೆ ತಪ್ಪು ಆಗಿದ್ದರೆ ಆ ಬಗ್ಗೆ ರಸ್ತೆಯಲ್ಲಿ ನಿಂತು ಮಾತನಾಡುವುದಲ್ಲ ಎಂದರು.
ಬಿಜೆಪಿ ಹಿಂದುತ್ವದ ಪರ ಕೆಲಸ ಮಾಡುವ ಏಕೈಕ ಪಕ್ಷ. ಪುತ್ತಿಲ ವೈಯುಕ್ತಿಕ ನೆಲೆಯಲ್ಲಿ ಸಂಘಪರಿವಾರ ಮತ್ತು ಪಕ್ಷದಿಂದ ಹೊರ ಹೋದವರು. ಇವರಿಗೆ ಸೈದ್ಧಾಂತಿಕ ಭಿನ್ನತೆಯಿದೆ. ಹಾಗಾಗಿ ನಾವು ಅವರನ್ನು ಬೆಂಬಲಿಸುತ್ತಿಲ್ಲ ಎಂದರು.
ಬಿಜೆಪಿ ಸದಾ ಹಿಂದುಗಳ ಜತೆಗೆ ಇದೆ ಎಂಬುವುದನ್ನು ತೋರಿಸಿಕೊಟ್ಟಿದೆ. ರಾಜ್ಯದಲ್ಲಿ ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಜಾರಿಗೊಳಿಸಿದೆ. ದತ್ತಪೀಠವನ್ನು ಮತ್ತೆ ಹಿಂದುಗಳಿಗೆ ಒಪ್ಪಿಸಿ ಅಲ್ಲಿ ದತ್ತಜಯಂತಿ ಆಚರಣೆ, ತ್ರಿಕಾಲಪೂಜೆಗೆ ಆರ್ಚಕರ ನೇಮಕ ಹಾಗೂ ವ್ಯವಸ್ಥಾಪನಾ ಸಮಿತಿಯನ್ನು ರಚನೆ ಮಾಡಿದೆ. ಶೇ.4 ಪರ್ಸೆಂಟ್ ಮುಸ್ಲಿಂ ಮೀಸಲಾತಿಯನ್ನು ಹಿಂದಕ್ಕೆ ಪಡೆಯುವ ಮೂಲಕ ದಿಟ್ಟ ನಿರ್ಧಾರ ಕೈಗೊಂಡಿದೆ. ಈ ಸರಕಾರವನ್ನು ಮತ್ತೂಮ್ಮೆ ಅಧಿಕಾರಕ್ಕೆ ತರುವಲ್ಲಿ ಎಲ್ಲರ ಬೆಂಬಲ ಬೇಕಾಗಿದೆ. ಪುತ್ತೂರಿನಲ್ಲಿಯೂ ಬಿಜೆಪಿಯನ್ನು ಜನರು ಬೆಂಬಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಅವರು ಕೂಡಾ ಕೆಲವು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡಿ ಕಾಂಗ್ರೆಸ್‌ಗೆ ಹೋಗಿದ್ದಾರೆ. ಆದರೆ ಅವರು ನಾನು ಹಿಂದುತ್ವದ ಪರ ಕೆಲಸ ಮಾಡುತ್ತೇನೆಂದು ಹೇಳಿದರೆ ನಾವು ಬೆಂಬಲ ಕೊಡಲು ಆಗುವುದಿಲ್ಲ ಎಂದ ಅವರು ಪುತ್ತೂರಿನಲ್ಲಿ ಬಿಜೆಪಿಗೆ ಪಕ್ಷೇತರ ಅಭ್ಯರ್ಥಿ ಎದುರಾಳಿಯಲ್ಲ. ಕಾಂಗ್ರೆಸಿನ ಅಶೋಕ್ ಕುಮಾರ್ ರೈ ನೇರ ಎದುರಾಳಿ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ|ಕೃಷ್ಣಪ್ರಸನ್ನ, ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ದಿನೇಶ್, ಅಜಿತ್ ರೈ ಹೊಸಮನೆ, ಬಜರಂಗದಳದ ಜಿಲ್ಲಾ ಸದಸ್ಯ ಜಯಂತ ಕುಂಜೂರುಪಂಜ ಉಪಸ್ಥಿತರಿದ್ದರು.