Advertisement

ಗುರಿ ಆಧಾರಿತ ಶಿಕ್ಷಣದಿಂದ ಹೊರಬನ್ನಿ

09:22 AM Dec 23, 2018 | |

ಉಡುಪಿ: ಗುರಿ ಆಧಾರಿತ ಶಿಕ್ಷಣ ಕ್ರಮದಿಂದ ಹೊರಬರಬೇಕು ಎಂದು ಸುರತ್ಕಲ್‌ ಎನ್‌ಐಟಿಕೆ ನಿರ್ದೇಶಕ ಡಾ| ಕೆ. ಉಮಾಮಹೇಶ್ವರ ರಾವ್‌ ಕರೆ ನೀಡಿದರು.

Advertisement

ಶನಿವಾರ ಮಣಿಪಾಲದ ಹೊಟೇಲ್‌ ವ್ಯಾಲಿ ವ್ಯೂ ಸಭಾಂಗಣದಲ್ಲಿ ನಡೆದ ಮಾಹೆ ವಿಶ್ವವಿದ್ಯಾನಿಲಯದ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಿಕ್ಷಣ ಕ್ರಮವು ಈಗ ಕೇವಲ ಅಂಕ ಆಧಾರಿತವಾಗಿದೆ. ಶಿಕ್ಷಣದಿಂದ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಬೇಕು. ಶಿಕ್ಷಣ ವ್ಯಾಪಾರೀಕರಣಗೊಂಡಿರುವುದು ಕಳವಳಕಾರಿ ಎಂದರು.

ಗುರು-ಶಿಷ್ಯ ಪರಂಪರೆ ಕಣ್ಮರೆ
ಮಕ್ಕಳ ನಾಮಕರಣವಾಗುತ್ತಲೇ ತಾಯಿ ಯಾವ ಶಾಲೆ ಬೇಕು, ಯಾವ ಶಿಕ್ಷಣ ಬೇಕು ಎಂದು ನಿರ್ಧರಿಸುತ್ತಾಳೆ. ಎಂಜಿನಿಯರಿಂಗ್‌, ವೈದ್ಯಕೀಯ ಬಿಟ್ಟು ಬೇರೆ ಕ್ಷೇತ್ರಗಳ ಕನಸು ಕಾಣುತ್ತಿಲ್ಲ. ಈಗಿನ ಗುರಿ ಆಧಾರಿತ ಶಿಕ್ಷಣದಿಂದಾಗಿ ವಿದ್ಯಾರ್ಥಿಗಳಿಗೆ ಗುರುಗಳನ್ನು ಹೇಗೆ ಗೌರವಿಸಬೇಕೆಂಬುದು ಗೊತ್ತಿರುವುದಿಲ್ಲ. ಗುರು ಶಿಷ್ಯ ಪರಂಪರೆ ಈಗ ಕಣ್ಮರೆಯಾಗಿದೆ ಎಂದು ಡಾ| ರಾವ್‌ ಹೇಳಿದರು. 

ಉತ್ಪನ್ನ ಮಾರಾಟ ಕೌಶಲ
ನಾವು ಉತ್ಪನ್ನಗಳನ್ನು ಮಾರುವ ಮ್ಯಾನೇಜ್ಮೆಂಟ್ ಕೌಶಲದಲ್ಲಿದ್ದೇವೆ. “ಜರ್ಮನಿಯ ಎಂಜಿನಿಯರಿಂಗ್‌, ಭಾರತದ ವಿನ್ಯಾಸ, … ಇವರಿಂದ ಮಾರಾಟ’ ಎಂಬ ಜಾಹೀರಾತು ಫ‌ಲಕವನ್ನು ನೋಡಿದೆ. ಇದರಲ್ಲಿ ಜರ್ಮನಿಯ ಎಂಜಿನಿಯರಿಂಗ್‌ ಎನ್ನುವುದು ದೊಡ್ಡ ಅಕ್ಷರಗಳಲ್ಲಿ ರಾರಾಜಿಸುತ್ತಿತ್ತು. ನಾವೀಗ “ಮೇಡ್‌ ಇನ್‌ ಇಂಡಿಯ’, “ಮೇಕ್‌ ಇನ್‌ ಇಂಡಿಯ’ವನ್ನು ಸಾಕಾರಗೊಳಿಸಬೇಕಾಗಿದೆ ಎಂದು ಡಾ| ರಾವ್‌ ಹೇಳಿದರು.

ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬಲ್ಲಾಳ್‌ ಸ್ವಾಗತಿಸಿ, ಕುಲಸಚಿವ ಡಾ| ನಾರಾಯಣ ಸಭಾಹಿತ್‌ ವಂದಿಸಿದರು. ಕುಲಪತಿ ಡಾ| ಎಚ್‌. ವಿನೋದ ಭಟ್‌ ರಜತೋತ್ಸವದಲ್ಲಿ ನಡೆದ ಚಟುವಟಿಕೆಗಳನ್ನು ವಿವರಿಸಿದರು. ಮಾಹೆಯ ರಜತ ಮಹೋತ್ಸವದ ಅಂಗವಾಗಿ ಹೊರತಂದ ಪುಸ್ತಕದ ಕುರಿತು ಯುರೋಪಿಯನ್‌ ಸ್ಟಡೀಸ್‌ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ರಾಹುಲ್‌ ಪುಟ್ಟಿ ಮಾತನಾಡಿದರು. ಕುಲಸಚಿವ (ಮೌಲ್ಯಮಾಪನ) ಡಾ| ವಿನೋದ ಥಾಮಸ್‌ ಅತಿಥಿಗಳನ್ನು ಪರಿಚಯಿಸಿದರು. ಸಹಕುಲಪತಿಗಳಾದ ಡಾ| ಪಿ.ಎಲ್‌.ಎನ್‌.ಜಿ. ರಾವ್‌, ಡಾ| ವಿ. ಸುರೇಂದ್ರ ಶೆಟ್ಟಿ, ಡಾ| ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು. ಕುಲಸಚಿವರಾಗಿ ಸೇವೆ ಸಲ್ಲಿಸಿದ ಡಾ| ಪಿ.ಎಲ್‌.ಎನ್‌.ಜಿ. ರಾವ್‌, ಡಾ| ಎಂ.ಪಿ.ಎಂ. ಕುಟ್ಟಿ, ಡಾ| ಸುಧಾಕರ ನಾಯಕ್‌, ಡಾ| ಗುರುಮಧ್ವ ರಾವ್‌, ಡಾ| ವಿನೋದ ಭಟ್‌, ಡಾ| ಜಿ.ಕೆ. ಪ್ರಭು, ಡಾ| ನಾರಾಯಣ ಸಭಾಹಿತ್‌, ಮೌಲ್ಯಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿದ ಡಾ| ಎಸ್‌. ನಾರಾಯಣ ರಾವ್‌, ಡಾ| ಉದಯಶಂಕರ್‌ ಎಚ್‌.ಎನ್‌., ಡಾ|ಪಿ.ಎಲ್‌.ಎನ್‌. ರಾವ್‌, ಡಾ| ವಿನೋದ್‌ ಥಾಮಸ್‌ ಅವರನ್ನು ಅಭಿನಂದಿಸಲಾಯಿತು. ಫಾರ್ಮಸಿ ಕಾಲೇಜಿನ ಡಾ| ಅನೂಪ್‌ ನಾಹಾ ಕಾರ್ಯಕ್ರಮ ನಿರ್ವಹಿಸಿದರು. 

Advertisement

15 ಲಕ್ಷದಲ್ಲಿ ಶೇ. 15 ಉದ್ಯೋಗಾರ್ಹರು,  ಒಬ್ಬನಿಗೆ 1.5 ಕೋ.ರೂ. ವೇತನ ವೈಭವ
7.5 ಲಕ್ಷ ವಿದ್ಯಾರ್ಥಿಗಳು ಐಐಟಿ ಜೆಇಇ ಪ್ರವೇಶ ಪರೀಕ್ಷೆಗೆ ಹಾಜರಾದರೆ ಶೇ. 1ಕ್ಕಿಂತ ಕಡಿಮೆ ಮಂದಿ ಆಯ್ಕೆಯಾಗುತ್ತಾರೆ. 15 ಲಕ್ಷ ಎಂಜಿನಿಯರಿಂಗ್‌ ಪದವೀಧರರು ಪ್ರತಿ ವರ್ಷ ಹೊರಬರುತ್ತಾರೆ. ಇವರಲ್ಲಿ ಶೇ. 15 ಉದ್ಯೋಗಾರ್ಹರಾಗಿರುತ್ತಾರೆ. ಉಳಿದವರ ಪಾಡೇನು? ದೇಶಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಶೇ. 33 ಜನರು ಬಡತನದಲ್ಲಿದ್ದಾರೆ, ಶೇ. 50 ಮಹಿಳೆಯರಿಗೆ ಬಯಲು ಶೌಚ ಅನಿವಾರ್ಯವಾಗಿದೆ ಎಂಬ ವರದಿ ಇದೆ. ಮುಂಬಯಿ ಐಐಟಿಯ ಒಬ್ಬ ವಿದ್ಯಾರ್ಥಿ ವರ್ಷಕ್ಕೆ 1.5 ಕೋ.ರೂ. ಆದಾಯದ ಉದ್ಯೋಗ ಗಳಿಸಿದ್ದಾನೆಂದು ಮಾಧ್ಯಮಗಳು ವೈಭವೀಕರಿಸಿದವು. ದೇಶದ ಬಹು ಜನರ ಸಮಸ್ಯೆ ಅಗಾಧವಿರುವಾಗ ಈತನ ಆದಾಯದಿಂದೇನು ಪ್ರಯೋಜನ?
 ಡಾ| ಕೆ. ಉಮಾಮಹೇಶ್ವರ ರಾವ್‌, ನಿರ್ದೇಶಕರು, ಎನ್‌ಐಟಿಕೆ, ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next