Advertisement

ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬನ್ನಿ

09:11 PM Oct 30, 2019 | Lakshmi GovindaRaju |

ಶಿಡ್ಲಘಟ್ಟ: ಸಮಾಜದಲ್ಲಿ ಜಾತಿ ಮತ ಬೇಧ ಮರೆತು ಶಿಕ್ಷಣ ಪಡೆದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವೆಂದು ಪಿಎಸ್‌ಐ ವಿ.ಹರೀಶ್‌ ತಿಳಿಸಿದರು. ತಾಲೂಕಿನ ಮಳ್ಳೂರು ಗ್ರಾಮದ ದಲಿತ ಕಾಲೋನಿಯಲ್ಲಿ ಗ್ರಾಪಂ ಮಳ್ಳೂರು, ಪೊಲೀಸ್‌ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಚಿಂತನೆ ನಡೆಸಿ: ಜಾತಿ ವಿಚಾರದಲ್ಲಿ ಕೀಳರಿಮೆ ಇಟ್ಟುಕೊಳ್ಳಬೇಡಿ. ವೃತ್ತಿ ಆಧಾರಿತವಾಗಿ ಬಂದಿರುವ ಜಾತಿ ಪದ್ಧತಿಗೆ ಇಂದು ಹೆಚ್ಚಿನ ಮಹತ್ವ ಸಿಗುತ್ತಿಲ್ಲ. ನಾಗರಿಕ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವ ಕಡೆಗೆ ಎಲ್ಲರೂ ಚಿಂತನೆ ನಡೆಸಬೇಕೆಂದರು. ಸಮಾಜದಲ್ಲಿ ಹೇಗೆ ನಡೆದುಕೊಳ್ಳುತ್ತೀರೋ ಅದರ ಆಧಾರದಲ್ಲಿ ನಿಮಗೆ ಗೌರವ ಸಿಗುತ್ತದೆ. ಮೌಡ್ಯತೆ ಬಿಡಬೇಕು.

ಮದ್ಯವ್ಯಸನಿಗಳಾಗಿ ಬದುಕಿನಲ್ಲಿ ಸಂಕಷ್ಟ ತಂದುಕೊಳ್ಳುವ ಬದಲಿಗೆ ಉತ್ತಮ ಜೀವನ ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಂದುವರಿಯಬೇಕಿದ್ದು ಸರ್ಕಾರ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲಾ ವ್ಯವಸ್ಥೆ ಮಾಡಿದ್ದು ಸದುಪಯೋಗ ಮಾಡಿಕೊಳ್ಳಬೇಕೆಂದರು.

ಪ್ರೋತ್ಸಾಹ ನೀಡಿ: ಜಾಗೃತಿ ಕೊರತೆಯಿಂದಾಗಿ ಸಾಕಷ್ಟು ಮಂದಿ ತಮ್ಮ ಮಕ್ಕಳ ಶಿಕ್ಷಣವನ್ನು 10 ನೇ ತರಗತಿಗೆ ಸೀಮಿತಗೊಳಿಸುತ್ತಿದ್ದಾರೆ. ಅವರನ್ನು ಶೈಕ್ಷಣಿಕವಾಗಿ ಮುಂದುವರಿಯಲು ಸಂಘ ಸಂಸ್ಥೆಗಳು ಅಗತ್ಯ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕೆಂದರು.

ಹಳ್ಳಿಗಳಲ್ಲಿ ದ್ವೇಷ ಭಾವನೆ ಬಿಟ್ಟು ಐಕ್ಯತೆಯಿಂದ ಜೀವನ ಮಾಡಬೇಕು. ಸಾಮರಸ್ಯ ಕಾಪಾಡಿಕೊಂಡು ಹೋಗಬೇಕು. ಸಾರಿಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇನ್ನು ಅಕ್ರಮವಾಗಿ ಮದ್ಯಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

Advertisement

ಸ್ವಚ್ಛತೆ ಕಾಪಾಡಿಕೊಳ್ಳಿ: ಪಿಡಿಒ ಮಮತಾ ಮಾತನಾಡಿ, ಹಳ್ಳಿಗಳಲ್ಲಿ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರಲ್ಲಿ ಪರಿವರ್ತನೆ ಕಾಣಿಸುತ್ತಿಲ್ಲ. ಇದರಿಂದ ಜನರು ಆನಾರೋಗ್ಯಕ್ಕೆ ಒಳಗಾಗುವುದರ ಜೊತೆಗೆ ಇತರೆ ಜನರನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ.

ಪ್ರತಿಯೊಬ್ಬರೂ ಶೌಚಾಲಯಗಳನ್ನು ಉಪಯೋಗ ಮಾಡಬೇಕು. ಸರ್ಕಾರದ ಸೌವಲತ್ತುಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಹೇಳಿದರು. ಮಹಿಳೆಯರ ರಕ್ಷಣೆಗಾಗಿ ಕಾನೂನಿನಲ್ಲಿ ಮಾರ್ಗಗಳಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳಬೇಕು. ಮದ್ಯವ್ಯಸನಿಗಳಾಗಿ ನಿಮ್ಮ ಬದಕುನ್ನು ಅಂಧಕಾರಕ್ಕೆ ತಳ್ಳಬೇಡಿ ಎಂದು ಸಲಹೆ ನೀಡಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಸಿ.ಎಂ.ಮುನಿಯಪ್ಪ ಮಾತನಾಡಿ, ದಲಿತರ ಕಾಲೋನಿಗಳಲ್ಲಿ ಇಂತಹ ಸಭೆಗಳನ್ನು ನಡೆಸುವುದರಿಂದ ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣ ಕಡಿಮೆಯಾಗುವುದರ ಜೊತೆಗೆ ಅವರು ಪ್ರಜ್ಞಾವಂತರಾಗಲಿಕ್ಕೆ ಅವಕಾಶವಾಗಲಿದೆ ಎಂದರು.

ಸಂಕಷ್ಟ ಅನುಭವಿಸುತ್ತೀರಿ: ಮುಖಂಡ ಶಿವಣ್ಣ ಮಾತನಾಡಿ, ಜನರು ಆರೋಗ್ಯವಂತರಾಗಿರಬೇಕು. ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದು ಎಷ್ಟೇ ಜಾಗೃತಿ ಮೂಡಿಸುತ್ತಿದ್ದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಇಂತಹ ಸಭೆಗಳ ಮೂಲಕ ಕೊಡುವ ಮಾಹಿತಿ ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಗ್ರಾಪಂ ಸದಸ್ಯ ರವಿಕುಮಾರ್‌, ಎಎಸ್‌ಐ ನಾರಾಯಣಸ್ವಾಮಿ, ಶಿವಶಂಕರ್‌, ಕರವಸೂಲಿಗಾರ ನಾಗರಾಜ್‌, ಮುನಿಕೃಷ್ಣಪ್ಪ, ಅಶೋಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next