ಕೋಲ್ಕತಾ: ಅಯ್ಯೋ ಇಂಗ್ಲಿಷ್ ಗೊತ್ತಿಲ್ಲ, ಇಂಟರ್ನೆಟ್ ಬಳಕೆ ಮಾಡಲಾಗುತ್ತಿಲ್ಲ ಎಂಬ ಆತಂಕವಿರುವವರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಸದ್ಯದಲ್ಲೇ ಕನ್ನಡವೂ ಸೇರಿದಂತೆ ಭಾರತದ 9 ಭಾಷೆಗಳಲ್ಲಿ ಡೊಮೈನ್ ನೇಮ್ ನೀಡಲು ತಯಾರಿ ನಡೆಯುತ್ತಿದೆ!
ದಿ ಇಂಟರ್ನೆಟ್ ಕಾರ್ಪೋರೇಶನ್ ಫಾರ್ ಅಸೈನ್x ನೇಮ್ಸ್ ಆ್ಯಂಡ್ ನಂಬರ್ಸ್(ಐಸಿಎಎನ್‌ಎನ್) ಎಂಬ ಲಾಭರಹಿತ ಸಂಸ್ಥೆ ಸ್ಥಳೀಯ ಭಾಷೆಗಳಲ್ಲಿ ಡೊಮೈನ್ ಮಾಡಿ ಕೊಡುವ ಜವಾಬ್ದಾರಿ ಹೊತ್ತಿದೆ. ಈಗಾಗಲೇ ಗುರುತಿಸಿರುವ 9 ಲಿಪಿಗಳನ್ನೂ ಸೇರಿದಂತೆ ದೇಶದ 22 ಭಾಷೆಗಳಲ್ಲಿ ಡೊಮೈನ್ ನೇಮ್ ನೀಡಲು ಇದು ಸಿದ್ಧತೆ ನಡೆಸುತ್ತಿದೆ. ಈ ಸಂಸ್ಥೆಯೇ ಜಗತ್ತಿನ ಉದ್ದಗಲಕ್ಕೂ ಇಂಟರ್ನೆಟ್ ಡೊಮೈನ್ ನೇಮ್ ವ್ಯವಸ್ಥೆ (ಡಿಎನ್‌ಎಸ್) ಯನ್ನೂ ನೋಡಿಕೊಳ್ಳುತ್ತಿದೆ.
ಭಾರತದ ಯಾವ ಭಾಷೆಗಳಲ್ಲಿ ಡೊಮೈನ್?: ಕನ್ನಡ, ಬೆಂಗಾಲಿ, ದೇವನಾಗರಿ, ಗುಜರಾತ್, ಗುರ್ಮುಖೀ, ಮಲಯಾಳಂ, ಒಡಿಯಾ, ತಮಿಳು ಮತ್ತು ತೆಲುಗು. ಈ ಲಿಪಿಗಳು ದೇಶದ ಹೆಚ್ಚು ಕಡಿಮೆ ಎಲ್ಲ ಭಾಷೆಗಳನ್ನೂ ಒಳಗೊಂಡಿವೆ. ಉದಾಹರಣೆಗೆ ಕನ್ನಡದಲ್ಲೇ ಡೊಮೈನ್ ಆಗಿ “ಉದಯವಾಣಿ. ಭಾರತ್’ ಅನ್ನು ಬಳಕೆ ಮಾಡಿಕೊಳ್ಳಬಹುದು. ಅಂದರೆ, ಸದ್ಯ ಬಳಕೆಯಲ್ಲಿರುವ com, .in, .net, .info, .news ರೀತಿಯಲ್ಲೇ .ಭಾರತ್, .ಪತ್ರಿಕೆ,.ಸುದ್ದಿ ಉಪಯೋಗಿಸಿಕೊಳ್ಳಬಹುದು.
ಯಾಕೆ ಈ ಯೋಜನೆ?: ಸದ್ಯ ಜಗತ್ತಿನಾದ್ಯಂತ ಶೇ.52 ರಷ್ಟು ಮಂದಿ ಮಾತ್ರ ಇಂಟರ್ನೆಟ್ ಬಳಕೆ ಮಾಡುತ್ತಿದ್ದಾರೆ. ಇನ್ನೂ ಶೇ.48 ರಷ್ಟು ಮಂದಿ ಹೊರಗಿದ್ದಾರೆ. ಇವರಿಗೆ ಇರುವ ತೊಂದರೆ ಇಂಗ್ಲಿಷ್. ಈ ಭಾಷೆ ಗೊತ್ತಿಲ್ಲದ ಕಾರಣಕ್ಕಾಗಿ ಇಂಟರ್ನೆಟ್ ಬಳಕೆ ಮಾಡಲು ಆಗುತ್ತಿಲ್ಲ. ಹೀಗಾಗಿ ಸ್ಥಳೀಯ ಭಾಷೆಯಲ್ಲೇ ಡೊಮೈನ್ ನೀಡಿದರೆ ಇವರನ್ನೂ ಇಂಟರ್ನೆಟ್ ವ್ಯವಸ್ಥೆಗೆ ತರಬಹುದು ಎಂಬ ಲೆಕ್ಕಾಚಾರವಿದೆ.
ಹೇಗೆ ಕೆಲಸ ಮಾಡುತ್ತೆ?: ಸದ್ಯ ನೀವು ಕನ್ನಡದಲ್ಲೇ “ಬೆಂಗಳೂರು’ ಅಥವಾ “ಕರ್ನಾಟಕ’ ಎಂದು ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಟೈಪಿಸಿದರೆ ಇದಕ್ಕೆ ಸಂಬಂಧಿಸಿದ ಕನ್ನಡದ ಅಂಶಗಳೇ ಬರುತ್ತವೆ. ಹಾಗೆಯೇ ಕನ್ನಡದ ಡೊಮೈನ್ ಬಳಕೆ ಮಾಡಿದರೆ, ಸರ್ಚ್ ರಿಸಲ್ಟ್ ಕೂಡ ಕನ್ನಡದಲ್ಲೇ ಬರುತ್ತದೆ.
ತಂತ್ರಜ್ಞರ ತಂಡ
ಅರೆ ಬ್ರಾಹ್ಮಿ ಪೀಳಿಗೆಯ ಸಮಿತಿ (ನಿಯೋ-ಬ್ರಾಹ್ಮಿ ಜನರೇಶನ್ ಪ್ಯಾನಲ್) ಎಂದು ಕರೆಯಲಾಗುವ ತಂಡ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದರಲ್ಲಿ ಕನ್ನಡದ ಯು.ಬಿ.ಪವನಜ ಅವರು ಸೇರಿ ದಂತೆ ಒಟ್ಟು 60 ನುರಿತ ತಾಂತ್ರಿಕ ತಂತ್ರಜ್ಞರಿದ್ದಾರೆ. ಇದರಲ್ಲಿ ಭಾರತ, ಬಾಂಗ್ಲಾದೇಶ, ನೇಪಾಲ, ಶ್ರೀಲಂಕಾ ಮತ್ತು ಸಿಂಗಾಪುರದ ತಂತ್ರಜ್ಞರೂ ಇದ್ದಾರೆ. ಈಗಾಗಲೇ ಕನ್ನಡ, ದೇವನಾಗರಿ, ಗುಜರಾತಿ, ಗುರ್ಮುಖೀ, ಒಡಿಯಾ ಮತ್ತು ತೆಲುಗು ಭಾಷೆಗಳನ್ನು ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಬಿಡಲಾಗಿದೆ. ಬೇಕಾದಲ್ಲಿ ನೀವೂ ಅಭಿಪ್ರಾಯ ತಿಳಿಸಬಹುದು:
www.icann.org/idn