ರಾಯಚೂರು: ಈ ಭಾಗದಲ್ಲಿ ಗುಣಮಟ್ಟದ ಶಿಕ್ಷಣದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಬೇಕಾದ ತರಬೇತಿ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳು ಆ ದಿಸೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಶಾಸಕ ಡಾ| ಶಿವರಾಜ್ ಪಾಟೀಲ್ ಸಲಹೆ ನೀಡಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎಂ.ಪಿ ಪ್ರಕಾಶ್ ಸ್ವತಂತ್ರ ಪದವಿ ಪೂರ್ವ ಕಾಲೇಜು, ಪಿಸಿಪಿಬಿ ಪದವಿ ಮಹಾವಿದ್ಯಾಲಯ, ಎಸ್‌ಇಸಿಟಿ ಸ್ನಾತಕೋತ್ತರ ಮಹಾವಿದ್ಯಾಲಯದ 20ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಮ್ಮ ಜಿಲ್ಲೆಯಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ದೂರದ ಜಿಲ್ಲೆಗಳಿಗೆ ಹೊಗುತ್ತಿದ್ದಾರೆ. ಅದಕ್ಕೆ ಕಾರಣ ನಮ್ಮಲ್ಲಿ ಗುಣಮಟ್ಟದ ತರಬೇತಿ ಸಿಗುವುದಿಲ್ಲ ಎನ್ನುವುದು. ಜಿಲ್ಲೆಯಲ್ಲಿಯೇ ಸ್ಪರ್ಧಾತ್ಮಕ ತರಬೇತಿ ನೀಡುವ ಕೆಲಸ ಮಾಡಿದರೆ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ. ಈ ಭಾಗದ ಮಕ್ಕಳಿಗೂ ಸರ್ಕಾರಿ ನೌಕರಿ ಪಡೆಯಲು ಅನುಕೂಲವಾಗುತ್ತದೆ ಎಂದರು.
ಸೇವಾ ಸಂಸ್ಥೆಯ ಎಂ.ಪಿ. ಪ್ರಕಾಶ ಪದವಿ ಪೂರ್ವ ಕಾಲೇಜು ಆರಂಭಿಸುವ ಮೂಲಕ ದೊಡ್ಡ ಶೈಕ್ಷಣಿಕ ಕೊಡುಗೆ ನೀಡುತ್ತಿದೆ. ಕಾಲೇಜಿನಲ್ಲಿ ಅತ್ಯಾಧುನಿಕ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್‌ಗಳನ್ನು ಉದ್ಘಾಟಿಸಲಾಗಿದೆ. ಈ ಕಾಲಕ್ಕೆ ತಕ್ಕಂತೆ ಶೈಕ್ಷಣಿಕ ಸಂಸ್ಥೆಗಳು ಒಗ್ಗಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಅನೇಕ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಅವರ ಸಾಧನೆ ಇಲ್ಲಿಗೆ ನಿಲ್ಲದೇ ಇನ್ನೂ ಎತ್ತರಕ್ಕೆ ಬೆಳೆಯಬೇಕು. ಸಂಸ್ಥೆ ಅನೇಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿದ್ದು, ಈ ಕಾರ್ಯ ಇನ್ನೂ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದರು.
ಸಾನ್ನಿಧ್ಯ ವಹಿಸಿದ್ದ ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಚಿತ್ರನಟಿ ಪೂಜಾ ರಮೇಶ ಮಾತನಾಡಿದರು. ಈ ವೇಳೆ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಾಯಚೂರು ವಿವಿ ಸಿಂಡಿಕೇಟ್ ಸದಸ್ಯ ಶಿವಬಸಪ್ಪ ಮಾಲಿಪಾಟೀಲ್, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ರಂಗಣ್ಣ ಪಾಟೀಲ್, ಹಿರಿಯ ಪತ್ರಕರ್ತ ಶಿವಮೂರ್ತಿ ಹಿರೇಮಠ, ಆರ್‌ಡಿಎ ಮಾಜಿ ಅಧ್ಯಕ್ಷ ಆಂಜನೇಯ ಕಡಗೋಲು, ವೈ.ಗೋಪಾಲರೆಡ್ಡಿ, ಸಂಸ್ಥೆಯ ಮುಖ್ಯಸ್ಥ ಶರಣಬಸವ ಜೋಳದಹೆಡಗಿ, ನಗರಸಭೆ ಸದಸ್ಯ ಈ.ಶಶಿರಾಜ, ಉಪನ್ಯಾಸಕ ರಮೇಶ್ ಬಾಬು ಯಾಳಗಿ, ಲಿಂಗಾರೆಡ್ಡಿ ವಕೀಲ, ಹರೀಶ್ ನಾಡಗೌಡ, ಬಸವರಾಜ ಎಲಿ, ಜನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸದಾನಂದ ಪೂಜಾರಿ, ಪಿಸಿಪಿಬಿ ಕಾಲೇಜಿನ ಪ್ರಾಚಾರ್ಯ ಎಂ.ಜಿ. ಮಾರುತಿ, ಕಲಾ ಸಂಕುಲ ಸಂಸ್ಥೆ ಮಾರುತಿ ಬಡಿಗೇರ ಸೇರಿ ಇತರರು ಇದ್ದರು.