Advertisement

ಬಸವಣ್ಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಹೊರಟ್ಟಿ

11:37 AM Jul 11, 2017 | Team Udayavani |

ಕೆ.ಆರ್‌.ನಗರ: ಯುವಜನತೆ ಬಸವಣ್ಣರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬಸವಜಯಂತಿ ಆಚರಣೆಯನ್ನು ಅರ್ಥ ಪೂರ್ಣವಾಗಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

Advertisement

ಪಟ್ಟಣದ ರೇಡಿಯೋ ಮೈದಾನದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಸಮಾಜದ ಸಂಘಟನೆಗಳ ಒಕ್ಕೂಟ ಸೋಮವಾರ ಆಯೋಜಿಸಿದ್ದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಗಳ 110ನೇ ಜನ್ಮದಿನೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣರು ಜಾತ್ಯತೀತ ನೆಲಗಟ್ಟಿನಲ್ಲಿ ದೇಶದ ಮುನ್ನಡೆಯನ್ನು ಕಾಣಬೇಕೆಂದಿದ್ದರು. ಇಡೀ ಜಗತ್ತಿಗೆ ಅನುಭವ ಮಂಟಪದ ಮೂಲಕ ಮೊಟ್ಟ ಮೊದಲ ಪಾರ್ಲಿಮೆಂಟ್‌ ತಂದವರು. ಇಲ್ಲಿ ಎಲ್ಲಾ ಜಾತಿ ಧರ್ಮದವರನ್ನು ಸರಿಸಮಾನತೆಯಲ್ಲಿ ಕಂಡವರು. ಮಹಿಳೆಯರಿಗೆ 12ನೇ ಶತಮಾನದಲ್ಲೇ ಮೀಸಲಾತಿಯನ್ನು ಕಲ್ಪಿಸಿದವರು ಎಂದರು.

ಆದರೆ ಈಗ ನಮ್ಮಲ್ಲಿ ಜಾತಿ ಬಿಟ್ಟು ಬದುಕುವುದಕ್ಕೆ ಆಗುವುದಿಲ್ಲ ಎಂಬ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ. ದೇಶದಲ್ಲಿ ಪ್ರತಿಯೊಂದು ಹಂತದಲ್ಲೂ ಜಾತಿವ್ಯವಸ್ಥೆ ಇದ್ದು, ವಿದ್ಯಾವಂತರು ಹೆಚ್ಚಿದಷ್ಟೂ ಜಾತಿಯತೆ ಹೆಚ್ಚಾಗಿದೆ ಎಂದು ವಿಷಾದಿಸಿದರು.

ಇಂದು ರಾಜಕಾರಣಿಗಳು ದೇಶದಲ್ಲಿ ಜಾತೀಯತೆಯ ಮೂಲಕ ಒಡೆದು ಆಳುವ ನೀತಿ ತೋರುತಿದ್ದಾರೆ. ಸಮಾಜಸೇವೆಯ ಮುಖವಾಡ ಹಾಕಿಕೊಂಡು ವೈಯಕ್ತಿಕವಾದ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುತಿದ್ದೇವೆ. ಬಸವ ತತ್ವಗಳನ್ನು ಅನುಸರಿಸಿದಾಗ ಮಾತ್ರ ಈ ದೇಶದ ಉದ್ಧಾರ ಕಾಣಲು ಸಾಧ್ಯ ಎಂದರು.

Advertisement

ಮಾಜಿ ಸಂಸದ ಹೆಚ್‌.ವಿಶ್ವನಾಥ್‌ ಮಾತನಾಡಿ, ಬಸವಜಯಂತಿ ಆಚರಣೆ ಮಾನವಧರ್ಮದ ಉತ್ಸವವವಾಗಲಿ. ಸಂಸತ್‌ ಮತ್ತು ಸಂವಿಧಾನವನ್ನು ಬಸವಣ್ಣರು 850 ವರ್ಷಗಳ ಹಿಂದೆಯೇ ವಿಶ್ವಕ್ಕೆ ಮೊಟ್ಟಮೊದಲಿಗೆ ಪರಿಚಯಿಸಿದವರು. ಜಾತೀಯತೆ ತೊಲಗಿಸಿ ಸಮಾಜದಲ್ಲಿ ಸಮಾನತೆ ಕಂಡು ಕೊಂಡವರು. ಮಹಾ ಮಾನವತಾವಾದಿಯಾಗಿದ್ದರು. ಬಸವಣ್ಣರು ಮನುಕುಲದ ಆಸ್ತಿ ಎಂದು ಬಣ್ಣಿಸಿದರು.

ಶಾಸಕರಾದ ಸಾ.ರಾ.ಮಹೇಶ್‌, ಗೀತಾಮಹದೇವಪ್ರಸಾದ್‌, ಕಾಂಗ್ರೆಸ್‌ ಮುಖಂಡ ದೊಡ್ಡಸ್ವಾಮೇಗೌಡ, ವೀರಶೈವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಎಸ್‌.ಮಲ್ಲಪ್ಪ, ಸಾಹಿತಿ ರಂಜಾನ್‌ ದರ್ಗಾ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಸಾಧಕರನ್ನು ಪುರಸ್ಕರಿಸಲಾಯಿತು.

ಸಮಾರಂಭಕ್ಕೆ ಮುನ್ನ ಬಸವಣ್ಣರ ಪ್ರತಿಮೆಯನ್ನು ವಿವಿಧ ಕಲಾತಂಡ ಗಳೊಂದಿಗೆ ಪಟ್ಟಣದ  ಪ್ರಮುಖ ರಸ್ತೆಗಳಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ಸಮಾರಂಭದ ಅಂಗಳಕ್ಕೆ ತರಲಾಯಿತು. ಗಾವಡಗೆರೆ ಗುರುಲಿಂಗಜಂಗಮ ಮಠದ ನಟರಾಜಸ್ವಾಮೀಜಿ, ಕರ್ಪೂರವಳ್ಳಿ ಜಂಗಮ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಪುರಸಭಾಧ್ಯಕ್ಷೆ ಕವಿತಾವಿಜಯಕುಮಾರ್‌, ತಾಪಂ ಅಧ್ಯಕ್ಷ ಹೆಚ್‌.ಟಿ.ಮಂಜುನಾಥ್‌, ವಿಧಾನ ಪರಿಷತ್‌ ಮಾಜಿ ಸದಸ್ಯರಾದ ಪುಟ್ಟಸಿದ್ದಶೆಟ್ಟಿ, ತೋಂಟದಾರ್ಯ, ವೀರಶೈವ ಸಮಾಜದ ಮುಖಂಡರಾದ ತಾ. ಜೆಡಿಎಸ್‌ ಅಧ್ಯಕ್ಷ ಚಂದ್ರಶೇಕರ್‌, ಎ.ಎಸ್‌.ಚನ್ನಬಸಪ್ಪ, ಹಾಡ್ಯ ಮಹದೇವಸ್ವಾಮಿ, ಕೆ.ಪಿ.ಪ್ರಭುಶಂಕರ್‌, ಸಾಹಿತಿ ತೇ.ಸಿ.ವಿಶ್ವೇಶ್ವರಯ್ಯ, ಚಂದ್ರಶೇಕರ್‌, ಗಂಗಾಧರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next