Advertisement

ಕಡಿಮೆ ದರದಲ್ಲಿ ಟಿಕೆಟ್‌ ಪಡೆದು ಚಿತ್ರ ನೋಡಿ!

11:01 AM Mar 06, 2018 | Team Udayavani |

ಇದು ಅಪ್ಪ-ಮಗನ ಚಿತ್ರ ಅಂದರೆ ತಪ್ಪಿಲ್ಲ. ಕನ್ನಡದಲ್ಲಿ ಈಗಾಗಲೇ ಅಪ್ಪ, ಮಕ್ಕಳ ಕಾಂಬಿನೇಷನ್‌ನಲ್ಲಿ ಹಲವು ಚಿತ್ರಗಳು ಬಂದಿವೆ. ಆ ಸಾಲಿಗೆ “ಅನ್ನಂ ಪರಬ್ರಹ್ಮ ಸ್ವರೂಪಂ’ ಚಿತ್ರವೂ ಒಂದು. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯದಲ್ಲೇ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೆ ರಾಜ್‌ವೀರ್‌ ನಿರ್ದೇಶಕರು. ಅಷ್ಟೇ ಅಲ್ಲ, ನಿರ್ಮಾಣ ಮಾಡಿ, ತೆರೆಯ ಮೇಲೆ ಪ್ರಮುಖ ಪಾತ್ರವನ್ನೂ ನಿರ್ವಹಿಸಿದ್ದಾರೆ.

Advertisement

ಇವರ ಪುತ್ರ ಸೂರ್ಯರಾಜ್‌, ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಇದೊಂದೇ ಅಲ್ಲ, ಕ್ಯಾಮೆರಾ ಹಿಡಿದು, ಸಂಕಲನ ಮಾಡಿ, ವಿಎಫ್ಎಕ್ಸ್‌ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. ಅಲ್ಲಿಗೆ ಇದೊಂದು ಪಕ್ಕಾ ಅಪ್ಪ ಮಗನ ಸಿನಿಮಾ ಅಂತ ಕರೆಯಲು ಯಾವ ಅಡ್ಡಿ ಇಲ್ಲ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ರೈತಾಪಿ ವರ್ಗದ ನೋವು, ನಲಿವಿನ ಚಿತ್ರಣ. ರೈತರು ಹಾಗೂ ಅವರ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂಬ ಪರಿಕಲ್ಪನೆ ಇಟ್ಟುಕೊಂಡು ಚಿತ್ರ ಮಾಡಿದ್ದಾರೆ.

“ರೈತರ ವ್ಯವಸಾಯ ವಿಷಯ ಚಿತ್ರದ ಹೈಲೈಟ್‌. ರೈತನ ವಿದ್ಯಾವಂತ ಮಗ ಕೆಲಸಕ್ಕೆ ಹೋದಾಗ, ಅಧಿಕಾರಿಗಳು ಲಂಚ ಕೇಳುತ್ತಾರೆ. ಆ ವಿರುದ್ಧ ಹೋರಾಡಿ, ವ್ಯವಸಾಯ ಮಾಡುತ್ತಾನೆ. ದುಡಿಮೆಯೇ ದೇವರು ಎಂಬ ಸಂದೇಶ ಚಿತ್ರದಲ್ಲಿದೆ’ ಎನ್ನುತ್ತಾರೆ ನಿರ್ದೇಶಕರು. ನಿರ್ದೇಶಕರು ಸಿನಿಮಾ ಮಾಡುವುದರ ಜತೆಗೆ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಹೊಸ ಯೋಚನೆಯನ್ನೂ ಮಾಡಿದ್ದಾರೆ.

ಅದೇನೆಂದರೆ, ಅರ್ಧ ಟಿಕೆಟ್‌ ದರದಲ್ಲಿ ಸಿನಿಮಾ ತೋರಿಸುವ ಹೊಸ ಯೋಚನೆ ಅವರದು. 70 ರುಪಾಯಿಗೆ ಬಾಲ್ಕನಿ ಟಿಕೆಟ್‌, 50 ರುಪಾಯಿಗೆ ಸೆಕೆಂಡ್‌ ಕ್ಲಾಸ್‌ ಟಿಕೆಟ್‌ ಕೊಡುವ ಮೂಲಕ ಜನರನ್ನು ಚಿತ್ರಮಂದಿರಕ್ಕೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಎರಡುವರೆ ದಶಕದಿಂದಲೂ ಸಿನಿಮಾ ರಂಗದಲ್ಲಿ  ಫೈಟರ್‌ ಆಗಿ, ಸಹ ಕಲಾವಿದರಾಗಿ ದುಡಿದಿರುವ ರಾಜ್‌ವೀರ್‌,

ಸಿನಿಮಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡೇ ಜೊತೆಗೆ ಇರುವ ತಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ. ಈಗ ರೈತರ ಕುರಿತು ಒಂದು ಚಿತ್ರ ಮಾಡಿ ಅದನ್ನು ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದಾರೆ. ಇಲ್ಲಿ ಸಂತೋಷ್‌ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಯು’ ಪ್ರಮಾಣ ಪತ್ರ ನೀಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next