ರಾಯಚೂರು: ಯಾವುದೇ ಜ್ವರ ಬಂದರೂ ಕೂಡಲೇ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಸೂಕ್ತ ಚಿಕಿತ್ಸೆ ಪಡೆಯಬೇಕು. ಇದರಿಂದ ಡೆಂಘೀ ಹರಡುವುದನ್ನು ತಪ್ಪಿಸಬಹುದು ಎಂದು ರಾಯಚೂರು ತಾಲೂಕು ಆರೋಗ್ಯಾಧಿಕಾರಿ ಡಾ| ಶಕೀರ್ ತಿಳಿಸಿದರು.
ನಗರದ ಜಹೀರಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡೆಂಘೀ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಡೆಂಘೀ ರಕ್ತ ಪರೀಕ್ಷೆ ಮತ್ತು ಚಿಕಿತ್ಸೆ ಉಚಿತವಾಗಿ ಮಾಡಲಾಗುತ್ತದೆ. ಸೂಕ್ತ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವ ಮೂಲಕ ಡೆಂಘೀ ರೋಗ ನಿಯಂತ್ರಿಸಬಹುದು ಎಂದರು.
ಸೊಳ್ಳೆಗಳ ನಿಯಂತ್ರಣದಿಂದ ಡೆಂಘೀ ರೋಗದ ಹತೋಟಿ ಮಾಡಬಹುದು. ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲು ಚಪ್ಪಡಿಯಿಂದ ನಿರ್ಮಿಸಿದ ತೊಟ್ಟಿ, ಡ್ರಮ್ (ಬ್ಯಾರಲ್), ಮಣ್ಣಿನ ಮಡಿಕೆ, ಉಪಯೋಗಿಸದ ಒರಳು ಕಲ್ಲು ಮುಂತಾದ ಕಡೆ ಸಂಗ್ರಹವಾಗುವ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಡೆಂಘೀ ಹರಡುತ್ತದೆ ಎಂದರು.
ವೈದ್ಯಾಧಿ ಕಾರಿ ಡಾ| ಕಾವ್ಯಶ್ರೀ ಮಾತನಾಡಿ, ಡೆಂಘೀ ಬಂದಲ್ಲಿ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಈ ರೋಗದ ಲಕ್ಷಣಗಳು ಎಂದು ವಿವರಿಸಿದರು.
ಜಾಥಾವು ನಗರದ ಜಹೀರಾಬಾದ್ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಂಗಾರ ಬಜಾರ, ತೀನ ಕಂದಿಲ್ ಮಾರ್ಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯವರೆಗೂ ಮಾಡಲಾಯಿತು. ಮಲೇರಿಯಾ ತಾಂತ್ರಿಕ ಮೇಲ್ವಿಚಾರಕಿ ಸಂಧ್ಯಾ ಸೇರಿದಂತೆ ಆರೋಗ್ಯ ಕೇಂದ್ರದ ಸುರûಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಿಬ್ಬಂದಿ ವರ್ಗ, ಆಶಾ ಕಾರ್ಯಕರ್ತೆಯರು ಹಾಗೂ ಉಪ ಜಿಲ್ಲಾ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.