ಜಿನೀವಾ: ಆಸ್ಟ್ರಾಜೆನಿಕಾ ಲಸಿಕೆ ಪಡೆದ ನಂತರ ರಕ್ತ ಹೆಪ್ಪುಗಟ್ಟುತ್ತದೆ ಎಂಬ ಭಯದ ಹಿನ್ನೆಲೆಯಲ್ಲಿ ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಆಸ್ಟ್ರಾಜೆನಿಕಾ ಲಸಿಕೆ ಪಡೆಯುವುದನ್ನು ನಿಲ್ಲಿಸಿದ್ದು, ಏತನ್ಮಧ್ಯೆ ಕೋವಿಡ್ ಗೆ ಆಸ್ಟ್ರಾಜೆನಿಕಾ ಸುರಕ್ಷಿತವಾಗಿ ಉಪಯೋಗಿಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಪೆಟ್ರೋಲ್, ಡಿಸೇಲ್ : GST ವ್ಯಾಪ್ತಿಗೆ ಇಲ್ಲ : ನಿರ್ಮಲಾ ಸೀತಾರಾಮನ್
ಕೋವಿಡ್ 19 ಸೋಂಕು ನಿವಾರಣೆಯ ಆಸ್ಟ್ರಾಜೆನಿಕಾ ಲಸಿಕೆ ಕುರಿತು ಪುನರ್ ಪರಿಶೀಲನೆ ನಡೆಸುವವರೆಗೆ ಲಸಿಕೆ ಉಪಯೋಗವನ್ನು ನಿಲ್ಲಿಸುವುದಾಗಿ ಕೆಲವು ದೇಶಗಳು ತಿಳಿಸಿದ ನಂತರ ವಿಶ್ವಸಂಸ್ಥೆ ಮತ್ತು ಯುರೋಪ್ ನ ಮೆಡಿಸಿನ್ ವಾಚ್ ಡಾಗ್ ವಿಶೇಷ ಸಭೆ ನಡೆಸಿತ್ತು.
ಕೋವಿಡ್ 19 ಸೋಂಕು ಈಗಾಗಲೇ 2.6 ಮಿಲಿಯನ್ ಜನರು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಸೋಂಕು ನಿವಾರಣೆಗಾಗಿ ಹಮ್ಮಿಕೊಂಡಿದ್ದ ಜಾಗತಿಕ ಸೋಂಕು ರಕ್ಷಣೆಯ ಪ್ರಚಾರಾಂದೋಲನಕ್ಕೆ ಆಸ್ಟ್ರಾಜೆನಿಕಾ ಲಸಿಕೆ ನೀಡುವಿಕೆ ರದ್ದುಗೊಳಿಸಿರುವುದು ದೊಡ್ಡ ಹಿನ್ನಡೆಯಾಗಿದೆ ಎಂದು ವರದಿ ತಿಳಿಸಿದೆ.
ಜಗತ್ತಿನ ಮೂರು ಅತೀ ದೊಡ್ಡ ಯುರೋಪಿಯನ್ ದೇಶಗಳಾದ ಜರ್ಮನಿ, ಇಟಲಿ ಮತ್ತು ಫ್ರಾನ್ಸ್ ಈಗಾಗಲೇ ಆಸ್ಟ್ರಾಜೆನಿಕಾ ಲಸಿಕೆ ನೀಡುವಿಕೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನಂತರ ಸ್ಪೇನ್, ಪೋರ್ಚುಗಲ್, ಸ್ಲೋವೇನಿಯಾ ಮತ್ತು ಲಾಟ್ವಿಯಾ ದೇಶಗಳು ಕೂಡಾ ಆಸ್ಟ್ರಾಜೆನಿಕಾ ಲಸಿಕೆ ನೀಡುವಿಕೆ ಸ್ಥಗಿತಗೊಳಿಸಿದೆ.
ಯುರೋಪ್ ದೇಶಗಳು ಮಾತ್ರ ಆಸ್ಟ್ರಾಜೆನಿಕಾ ಲಸಿಕೆ ನಿಲ್ಲಿಸುವುದಕ್ಕೆ ಸೀಮಿತವಾಗಿಲ್ಲ ಇಂಡೋನೇಷ್ಯಾ ಕೂಡಾ ಆಸ್ಟ್ರಾಜೆನಿಕಾ ವಿತರಣೆ ವಿಳಂಬ ಮಾಡುವುದಾಗಿ ತಿಳಿಸಿದ್ದು, ಕೋವಿಡ್ ಲಸಿಕೆ ಯಾವುದು ಕಡಿಮೆ ಬೆಲೆಗೆ ಲಭ್ಯವಾಗುತ್ತದೆಯೋ ಅದನ್ನು ಬಡ ದೇಶಗಳು ಆಯ್ಕೆ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ.
ಆದರೆ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಆಸ್ಟ್ರಾಜೆನಿಕಾ ಲಸಿಕೆಯನ್ನು ಉಪಯೋಗಿಸುವಂತೆ ಸಲಹೆ ನೀಡಿದೆ. ಲಸಿಕೆಯ ಸುರಕ್ಷತೆ ಬಗ್ಗೆ ತಜ್ಞರ ಜತೆ ಮಂಗಳವಾರ(ಮಾರ್ಚ್ 16) ಮಾತುಕತೆ ನಡೆಸುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.