Advertisement

ಕೌಶಲ್ಯ ತರಬೇತಿಗೆ ಜರ್ಮನ್‌ ಟೆಕ್ನಾಲಜಿ

10:02 AM Feb 03, 2018 | |

ಬೆಂಗಳೂರು: ಕನಿಷ್ಠ ಶೈಕ್ಷಣಿಕ ಅರ್ಹತೆ ಇದ್ದರೂ ಕೌಶಲ್ಯ ಮತ್ತು ನೈಪುಣ್ಯತೆಯ ಕೊರತೆ ಎದುರಿಸುತ್ತಿರುವ ನಿರುದ್ಯೋಗಿ ಯುವಕ-
ಯುವತಿಯರಿಗೆ ಅತ್ಯಾಧುನಿಕ ಶೈಲಿಯ ತರಬೇತಿ ನೀಡಲು ರಾಜ್ಯದಲ್ಲಿ ಐದು ಹೊಸ “ಕರ್ನಾಟಕ ಜರ್ಮನ್‌ ತಾಂತ್ರಿಕ ತರಬೇತಿ ಸಂಸ್ಥೆ’ಯ ಕೇಂದ್ರಗಳು ಸ್ಥಾಪನೆಯಾಗಲಿವೆ.

Advertisement

ರಾಜ್ಯದಲ್ಲಿ 5 ಕಡೆ ಹೊಸದಾಗಿ ಈ ಕೇಂದ್ರಗಳನ್ನು (ಕೆಜಿಟಿಟಿಐ) ಸ್ಥಾಪಿಸುವ ಕೌಶಲ್ಯಾಭಿವೃದ್ಧಿ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರಿಸಿದ್ದು, 2018-19ನೇ ಸಾಲಿನ ಬಜೆಟ್‌ನಲ್ಲಿ 
ಘೋಷಣೆಯಾಗುವ ಸಾಧ್ಯತೆಯಿದೆ. ಸದ್ಯ ಕರ್ನಾಟಕದಲ್ಲಿ ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಕೆಜಿಟಿಟಿಐ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ 12 ಕೇಂದ್ರಗಳ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ತಲಾ 25 ಎಕರೆ ಪ್ರದೇಶದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 5 ಕೇಂದ್ರಗಳ ಸ್ಥಾಪನೆಗೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟಿದೆ. ಅದರಂತೆ ಮೈಸೂರು, ತುಮಕೂರು, ಬಳ್ಳಾರಿ, ಗದಗ ಸೇರಿದಂತೆ ಐದು ಕಡೆ ಹೊಸ ಕೇಂದ್ರಗಳು ಅಸ್ತಿತ್ವಕ್ಕೆ
ಬರಲಿದ್ದು, 2018-19ನೇ ಸಾಲಿನ ಬಜೆಟ್‌ನಲ್ಲಿ ಅವುಗಳ ಘೋಷಣೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಸಹಾಯ ಮಾಡಲು ಸರ್ಕಾರ ಜರ್ಮನಿ ದೇಶದ “ಜರ್ಮನ್‌ ಇಂಟರ್‌ನ್ಯಾಷನಲ್‌ ಸರ್ವೀಸಸ್‌’ ಜೊತೆಗೆ ನೇರ ಒಪ್ಪಂದ ಮಾಡಿಕೊಂಡಿದೆ. ಕೇಂದ್ರ ಸ್ಥಾಪನೆಗೆ ತಂತ್ರಜ್ಞಾನ ಮತ್ತು ಉಪಕರಣಗಳ ನೆರವು ಜರ್ಮನಿ ದೇಶ ಕೊಟ್ಟರೆ, ಕಟ್ಟಡ, ಸಿಬ್ಬಂದಿ ಮತ್ತು ಮೂಲಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸುತ್ತದೆ.

ಈಗ ಕಾರ್ಯನಿರ್ವಹಿಸುತ್ತಿರುವ 5 ಕೇಂದ್ರಗಳಲ್ಲಿ ಒಂದೊಂದು ಕೇಂದ್ರದಲ್ಲಿ ಕನಿಷ್ಠ 250 ರಿಂದ ಸಾವಿರ ಅಭ್ಯರ್ಥಿಗಳು ಇದ್ದಾರೆ. ಬೇಡಿಕೆ ಹೆಚ್ಚಿದ್ದು, ಪ್ರತಿ ಜಿಲ್ಲಾ ಕೇಂದ್ರದಲ್ಲಿ ಒಂದೊಂದು ಕೆಜಿಟಿಟಿಐ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬ ಉದ್ದೇಶವಿದೆ. ಈಗ 5 ಕೇಂದ್ರಗಳಿದ್ದು, ಇನ್ನೂ 25 ಕಡೆ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಆದ್ಯತೆ ಮೇಲೆ ಜಮೀನು ಒದಗಿಸಲು ಮುಂದೆ ಬಂದಿದ್ದ 12 ಜಿಲ್ಲೆಗಳ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆರ್ಥಿಕ ಇಲಾಖೆ 5 ಕೇಂದ್ರಗಳಿಗೆ ಅನುಮೋದನೆ ಕೊಟ್ಟಿದೆ. ಮುಂದೆ ಹಂತ-ಹಂತವಾಗಿ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೌಶಲ್ಯ ಅಭಿವೃದ್ಧಿ ನಿಗ ಮದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಹೇಗಿರುತ್ತೆ ತರಬೇತಿ?: ಕೆಜಿಟಿಟಿಐ ಕೇಂದ್ರದ ಕಂಪ್ಯೂಟರ್‌ ವಿಭಾಗದಲ್ಲಿ ಮಲ್ಟಿಮೀಡಿಯಾ, ಅನಿಮೇಷನ್‌, ಗ್ರಾಫಿಕ್ಸ್‌, ವೆಬ್‌ಡಿಸೈನ್‌. ಎಲೆಕ್ಟ್ರಾನಿಕ್‌ ವಿಭಾಗದಲ್ಲಿ ಎಂಬೆಡೆಡ್‌ ಡಿಸೈನಿಂಗ್‌. ಮೆಕ್ಯಾನಿಕಲ್‌  ವಿಭಾಗದಲ್ಲಿ ಸಿಎಡಿ, ಸಿಎಎಂ, ಸಿಎನ್‌ಸಿ ಹಾಗೂ
ಅಟೋಮೊಬೈಲ್‌ ವಿಭಾಗದಲ್ಲಿ ಟೊಯೋಟಾ, ವೋಲ್ವೋ, ಹೋಂಡಾ ಸಂಸ್ಥೆಗಳು ತರಬೇತಿ ನೀಡಲಿವೆ. ಕನಿಷ್ಠ 10ನೇ ತರಗತಿ ಪಾಸಾದ ಅಥವಾ ಪಿಯುಸಿ, ಡಿಪ್ಲೋಮಾ ಕೋರ್ಸ್‌ ಕಲಿತ  ಅಭ್ಯರ್ಥಿಗಳು ತರಬೇತಿಗೆ ಸೇರಿಕೊಳ್ಳಬಹುದು. ಕನಿಷ್ಠ 1 ರಿಂದ 3 ತಿಂಗಳು ಪೂರ್ಣಾವಧಿ ತರಬೇತಿ ನೀಡಲಾಗುತ್ತದೆ ಎಂದು ಕೌಶಲ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎಂಬುದು ಸರ್ಕಾರದ ಉದ್ದೇಶ. ಅದಕ್ಕೆ ಪೂರಕವಾದ ಕೌಶಲ್ಯ ತರಬೇತಿ ಒದಗಿಸಬೇಕು. ನಿರುದ್ಯೋಗಿಗಳಿಗೆ ಅಥವಾ ಸ್ವಯಂ ಉದ್ಯೋಗಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಐದು ಹೊಸ ಕೆಜಿಟಿಟಿಐ ಕೇಂದ್ರಗಳ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 
 ●ಮರುಳೀಧರ ಹಾಲಪ್ಪ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ

Advertisement

ರಫಿಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next