Advertisement

ಜರ್ಮನ್‌ ದೇಶದ ಕತೆ: ತೋಳ ಮತ್ತು ಹುಡುಗಿ

06:00 AM Nov 11, 2018 | Team Udayavani |

ಒಂದು ಹಳ್ಳಿಯಲ್ಲಿ ಜೇನ್‌ ಎಂಬ ಹುಡುಗಿ ಇದ್ದಳು. ಅವಳ ತಾಯಿ ದಿನವಿಡೀ ಚಹಾ ತೋಟದಲ್ಲಿ ದುಡಿಯಲು ಹೋಗುತ್ತಿದ್ದಳು. ಅದರಿಂದ ಬಂದ ವೇತನದಲ್ಲಿ ಮಗಳನ್ನು ಪ್ರೀತಿಯಿಂದ ಸಲಹಿಕೊಂಡಿದ್ದಳು. ಒಂದು ದಿನ ಜೇನ್‌ ತಾಯಿಯೊಂದಿಗೆ, “”ಅಮ್ಮ, ನಾನು ಹುಟ್ಟಿದ ಮೇಲೆ ನೀನು ದಿನನಿತ್ಯ ದುಡಿಯಲು ಹೋಗುವುದನ್ನು ಬಿಟ್ಟರೆ ಒಂದು ದಿನ ಕೂಡ ನೆಂಟರ ಮನೆಗೆ, ಸ್ನೇಹಿತರ ಮನೆಗೆ ಹೋಗುವುದನ್ನು ನೋಡಿಯೇ ಇಲ್ಲ. ನನ್ನ ಗೆಳತಿಯರಿಗೆ ಎಲ್ಲರಿಗೂ ಬಂಧು-ಮಿತ್ರರ ದೊಡ್ಡ ಬಳಗವೇ ಇದೆಯಂತೆ. ಆಗಾಗ ಅವರ ಮನೆಗಳಿಗೆ ಹೋಗುತ್ತಾರೆ. ಬಗೆಬಗೆಯ ತಿಂಡಿಗಳನ್ನು ತಿಂದು ಖುಷಿಯಿಂದ ಕೆಲವು ದಿನ ಅಲ್ಲಿದ್ದು ಮನೆಗೆ ಮರಳಿ ಬರುತ್ತಾರೆ. ತಾವು ಅಲ್ಲಿ ಸಂತೋಷವಾಗಿ ಇದ್ದ ಕತೆಗಳನ್ನು ನನಗೂ ಹೇಳುತ್ತಾರೆ. ನಮಗೆ ಹೀಗೆ ಹೋಗಿ ಬರಲು ಒಬ್ಬ ಬಂಧುವಿನ ಮನೆ ಕೂಡ ಇಲ್ಲವೇನಮ್ಮ?” ಎಂದು ಕೇಳಿದಳು.

Advertisement

ತಾಯಿ ಮಗಳ ತಲೆ ನೇವರಿಸಿದಳು. “”ನಮ್ಮ ಬಂಧುಗಳೆಲ್ಲರೂ ದೊಡ್ಡ ಪ್ರವಾಹಕ್ಕೆ ಸಿಲುಕಿ ಸತ್ತುಹೋದರು. ಆದರೆ, ದೂರದ ಹಳ್ಳಿಯಲ್ಲಿ ನನ್ನ ತಾಯಿ ಮಾತ್ರ ಇನ್ನೂ ಬದುಕಿದ್ದಾಳೆ. ನಿನ್ನ ಈ ಪ್ರೀತಿಯ ಅಜ್ಜಿಯನ್ನು ನಾನು ನೋಡದೆ ತುಂಬ ವರ್ಷಗಳಾದವು” ಎಂದು ಹೇಳಿದಳು. ಈ ಮಾತು ಕೇಳಿ ಜೇನ್‌ ಅಜ್ಜಿಯ ಮನೆಗೆ ಹೋಗಬೇಕು, ಅವಳ ಜೊತೆಗೆ ಕೆಲವು ದಿನ ಇದ್ದು ಬರಬೇಕು ಎಂದು ನಿರ್ಧರಿಸಿದಳು. “”ಅಮ್ಮ, ನನಗೆ ಅಜ್ಜಿಯನ್ನು ನೋಡಲು ಆಸೆಯಾಗಿದೆ. ಒಂದೆರಡು ದಿನ ಅಲ್ಲಿದ್ದು ಬರುತ್ತೇನೆ, ಕಳುಹಿಸಿಕೊಡು” ಎಂದು ಹಟ ಹಿಡಿದಳು.

“”ಅಜ್ಜಿಯ ಮನೆಗೆ ಹೋಗುವ ದಾರಿ ಸುಗಮವಾದುದಲ್ಲ. ಮಧ್ಯೆ ಒಂದು ಗೊಂಡಾರಣ್ಯವಿದೆ. ಅದರಲ್ಲಿ ಕ್ರೂರ ಮೃಗಗಳಿವೆ. ಅವು ನಿನ್ನನ್ನು ತೊಂದರೆಗೆ ಗುರಿ ಮಾಡಬಹುದು” ಎಂದು ತಾಯಿ ಹಲವು ಪರಿಯಿಂದ ಹೇಳಿದಳು. ಆದರೆ ಜೇನ್‌ ಹಿಡಿದ ಹಟ ಬಿಡಲಿಲ್ಲ. “”ನಾನು ಅಪಾಯಗಳನ್ನು ಎದುರಿಸಿ ಅಜ್ಜಿಯ ಮನೆಗೆ ತಲುಪಬಲ್ಲೆ, ಹೋಗುತ್ತೇನೆ” ಎಂದು ಹೊರಟು ನಿಂತಳು. ತಾಯಿ ವಿಧಿಯಿಲ್ಲದೆ ಅವಳ ಮಾತಿಗೆ ಒಪ್ಪಿದಳು. “”ಮಗೂ, ನಿನ್ನ ಕೈಗೆ ಒಂದು ತಾಯತವನ್ನು ಕಟ್ಟುತ್ತೇನೆ. ಯಾವುದೇ ಕಾರಣಕ್ಕೆ ಅದನ್ನು ಬಿಚ್ಚಬಾರದು. ಇದು ಕೈಯಲ್ಲಿದ್ದರೆ ಯಾರಿಂದಲೂ ಅಪಾಯ ಬರುವುದಿಲ್ಲ” ಎಂದು ಎಚ್ಚರಿಸಿದಳು. ಜೇನ್‌ ಅಜ್ಜಿಗಾಗಿ ಒಂದು ಶೀಸೆಯಲ್ಲಿ ದ್ರಾûಾರಸವನ್ನೂ ಬುತ್ತಿಯಲ್ಲಿ ಬ್ರೆಡ್ಡುಗಳನ್ನು ತೆಗೆದುಕೊಂಡು ಅಜ್ಜಿ ಮನೆಯ ಹಾದಿಯಲ್ಲಿ ಮುಂದೆ ಸಾಗಿದಳು.

ಜೇನ್‌ ಕಾಡುದಾರಿಯಲ್ಲಿ ಹೋಗುವಾಗ ಒಂದು ದೈತ್ಯ ತೋಳವು ಅವಳನ್ನು ನೋಡಿ ಬಾಯಿ ಚಪ್ಪರಿಸಿತು. “”ಎಷ್ಟು ಚೆನ್ನಾಗಿದ್ದಾಳೆ ಹುಡುಗಿ. ಜೇನಿನಂತೆ ಸಿಹಿಯಿದ್ದಾಳೆ. ಬಲು ಮೆತ್ತಗೆ ಕಾಣುತ್ತಾಳೆ. ಇವಳನ್ನು ತಿನ್ನಬೇಕು” ಎಂದುಕೊಂಡು ಬಳಿಗೆ ಬಂದಿತು. ಆದರೆ ಅವಳ ಕೈಯಲ್ಲಿದ್ದ ತಾಯತದ ಕಾರಣ ಏನು ಮಾಡಲೂ ಅದಕ್ಕೆ ಸಾಧ್ಯವಾಗಲಿಲ್ಲ. ಆದರೂ ಹುಡುಗಿಯನ್ನು ತಿನ್ನದೆ ಅದಕ್ಕೆ ಮನಸ್ಸು ಕೇಳಲಿಲ್ಲ. ಜೇನ್‌ಳನ್ನು ಸವಿ ಸವಿಯಾಗಿ ಮಾತನಾಡಿಸುತ್ತ ಎಲ್ಲಿಗೆ ಹೋಗುತ್ತಿದ್ದಾಳೆಂದು ಕೇಳಿ ತಿಳಿದು ಕೊಂಡಿತು. ಜೇನ್‌ ಅಜ್ಜಿಯನ್ನು ನೋಡಲು ಹೋಗುತ್ತಿರುವುದು ತಿಳಿದ ಕೂಡಲೇ ಅಲ್ಲಿ ನಿಲ್ಲದೆ ಮರಗಳ ಮರೆ ಸೇರಿಕೊಂಡಿತು. ಇವಳು ಅಜ್ಜಿ ಮನೆಗೆ ತಲುಪುವ ಮೊದಲೇ ತಾನು ಅಲ್ಲಿಗೆ ಹೋಗಿ ಉಪಾಯ ಮಾಡಿ ಇವಳನ್ನು ನುಂಗಬೇಕು ಎಂದು ನಿರ್ಧರಿಸಿತು.

ಜೇನ್‌ ದೂರದ ಹಾದಿಯಲ್ಲಿ ನಡೆಯುತ್ತ ಅಜ್ಜಿ ಮನೆಗೆ ತಲುಪುವ ಮೊದಲೇ ತೋಳ ಅಲ್ಲಿಗೆ ಹೋಯಿತು. ಒಂದೆಡೆ ಕುಳಿತು ಬಟ್ಟೆ ಹೊಲಿಯುತ್ತಿದ್ದ ಅಜ್ಜಿಯನ್ನು ಬೆಣ್ಣೆ ಮುದ್ದೆಯ ಹಾಗೆ ಗುಳಮ್ಮನೆ ನುಂಗಿತು. ಬೆಳಕು ಕಡಮೆಯಿರುವ ಸ್ಥಳದಲ್ಲಿ ಅಜ್ಜಿಯ ಮಂಚವನ್ನಿರಿಸಿ ಮೈತುಂಬ ಚಾದರ ಹೊದ್ದುಕೊಂಡು ಮಲಗಿತು. ಸ್ವಲ್ಪ ಹೊತ್ತಿನಲ್ಲಿ ಜೇನ್‌, “”ಅಜ್ಜಿ, ಅಜ್ಜಿ ಎಲ್ಲಿದ್ದೀ?” ಎಂದು ಕೇಳುತ್ತ ಒಳಗೆ ಬಂದಳು.

Advertisement

ಮಂಚದಲ್ಲಿ ಮಲಗಿದ್ದ ತೋಳವು ಕ್ಷೀಣ ವಾದ ದನಿಯಿಂದ, “”ತುಂಬ ನಿಃಶಕ್ತಳಾಗಿದ್ದೇನೆ ಮಗಳೇ. ಹಾಸಿಗೆಯಿಂದ ಏಳಲೂ ಆಗುವುದಿಲ್ಲ. ನೀನೇ ಬಳಿಗೆ ಬಾ” ಎಂದು ಕರೆಯಿತು. ಜೇನ್‌ ತೋಳದ ಬಳಿಗೆ ಹೋಗಿ, “”ಅಜ್ಜಿ, ನಿನಗೆ ಏನೆಲ್ಲ ತಂದಿದ್ದೇನೆ ನೋಡು” ಎಂದು ಬ್ರೆಡ್ಡು ಮತ್ತು ದ್ರಾಕ್ಷಾ ರಸವನ್ನು ಮುಂದಿಟ್ಟಳು. ತೋಳವು, “”ಅದೆಲ್ಲ ಹಾಗಿರಲಿ, ನಿನ್ನ ತೋಳಿನಲ್ಲಿ ಏನೋ ತಾಯತ ಕಟ್ಟಿಕೊಂಡಿದ್ದೀಯಲ್ಲ, ಅದನ್ನು ಬಿಚ್ಚಿ ಕೆಳಗಿಡು. ಇಲ್ಲಿ ನಿನಗೆ ಯಾವ ಅಪಾಯವೂ ಇಲ್ಲ ತಾನೆ? ಮತ್ತೇಕೆ ನನಗೆ ಭಯ ಹುಟ್ಟಿಸುವ ಅದನ್ನು ಕಟ್ಟಿಕೊಂಡಿದ್ದೀ?” ಎಂದು ಕೇಳಿತು. “”ಹಾಗೆಯೇ ಆಗಲಿ ಅಜ್ಜಿ” ಎಂದು ಜೇನ್‌ ತಾಯತವನ್ನು ಬಿಡಿಸಿ ಕೆಳಗಿಟ್ಟಳು. ತೋಳದ ಬಳಿಗೆ ಹೋದಳು. “”ಬಾ, ನನ್ನೊಂದಿಗೆ ಮಂಚದಲ್ಲಿ ಮಲಗು” ಎಂದು ತೋಳವು ಕರೆಯಿತು.

ಜೇನೆ ಮಂಚದಲ್ಲಿ ಮಲಗಿ ತೋಳದೆಡೆಗೆ ನೋಡಿದಳು. ಅವಳಿಗೆ ಏಕೋ ಅನುಮಾನವಾಯಿತು. “”ಅಜ್ಜೀ, ಇದೇನಿದು, ನಿನ್ನ ಕಿವಿಗಳು ಎಲ್ಲರ ಹಾಗೆ ಇಲ್ಲ. ತುಂಬ ಉದ್ದವಾಗಿವೆಯಲ್ಲ?” ಎಂದು ಕೇಳಿದಳು. “””ವಯಸ್ಸಾಯಿತಲ್ಲವೆ, ಮುದ್ದಿನ ಮೊಮ್ಮಗಳ ಸಕ್ಕರೆಯಂತಹ ಮಾತುಗಳ ನ್ನು ಕಿವಿ ತುಂಬ ಕೇಳಬೇಕಿದ್ದರೆ ಸಣ್ಣ ಕಿವಿಗಳು ಸಾಕಾಗುವುದಿಲ್ಲ, ದೊಡ್ಡ ಕಿವಿಗಳನ್ನಿರಿಸಿಕೊಂಡೆ” ಎಂದಿತು ತೋಳ. “”ಮತ್ತೆ ಕಣ್ಣುಗಳೂ ದೊಡ್ಡದೇ ಇವೆಯಲ್ಲ ಯಾಕೆ?” ಜೇನ್‌ ಸಂಶಯಪಟ್ಟಳು. “”ಇಷ್ಟು ಚಂದವಿರುವ ಮೊಮ್ಮಗಳ ಚೆಲುವನ್ನು ನೋಡಲು ಸಣ್ಣ ಕಣ್ಣುಗಳು ಸಾಲುವುದಿಲ್ಲ ತಾನೆ? ಹಾಗಾಗಿ ಈ ದೊಡ್ಡ ಕಣ್ಣುಗಳು” ಎಂದು ತೋಳ ಹೇಳಿತು.

ಜೇನ್‌ ತೋಳದ ಮೈಯನ್ನು ತಡವಿ ನೋಡಿದಳು. ಉದ್ದನೆಯ ಕೂದಲುಗಳು ತಗುಲಿದವು. ಕೈಗಳಲ್ಲಿ ಉಗುರುಗಳಿರುವುದು ಗೊತ್ತಾಯಿತು. “”ಮತ್ತೆ ಅಜ್ಜಿ, ನಿನ್ನ ಮೈತುಂಬ ಇಷ್ಟುದ್ದ ರೋಮಗಳೇಕೆ ಇವೆ? ಕೈಗಳು ಉದ್ದವಾಗಿವೆ, ಅದರಲ್ಲಿ ಉಗುರುಗಳೇಕೆ ಇವೆ?” ಎಂದು ಭಯದಿಂದಲೇ ಕೇಳಿದಳು. ತೋಳವು, “”ಇಷ್ಟುದ್ದದ ರೋಮಗಳಿಲ್ಲದಿದ್ದರೆ ಚಳಿಯನ್ನು ತಾಳಿಕೊಳ್ಳಬೇಕಲ್ಲವೆ? ಹಾಗೆಯೇ ಈ ಉದ್ದದ ಕೈಗಳು ಮೆತ್ತಗಿನ ಮೈಯ ಮೊಮ್ಮಗಳನ್ನು ಅಪ್ಪಿಕೊಳ್ಳಲು” ಎಂದು ಹೇಳಿ ಬಿಗಿಯಾಗಿ ಅವಳನ್ನು ಬಳಸಿಕೊಂಡಿತು. “”ನೋಡು, ನನಗೆ ದೊಡ್ಡ ಬಾಯಿಯೂ ಇದೆ. ಅದು ನಿನ್ನನ್ನು ನುಂಗಲು” ಎನ್ನುತ್ತ ಅಗಲವಾಗಿ ಬಾಯೆ¤ರೆಯಿತು.

ತೋಳವು ಮಾಡಿದ ಮೋಸವು ಜೇನ್‌ಳಿಗೆ ಅರ್ಥವಾಯಿತು. ಆದರೆ ಅವಳು ಧೈರ್ಯ ಕಳೆದುಕೊಳ್ಳಲಿಲ್ಲ. “”ಮೊದಲು ತಿಂಡಿ ತಿನ್ನು ಅಜ್ಜಿ” ಎನ್ನುತ್ತ ತೋಳದ ತೆರೆದ ಬಾಯಿಯೊಳಗೆ ತಾನು ತಂದ ಬ್ರೆಡ್ಡುಗಳ ಬುತ್ತಿಯನ್ನು ತುರುಕಿಬಿಟ್ಟಳು. ಬುತ್ತಿಯು ಗಂಟಲಿನಲ್ಲಿ ಸಿಲುಕಿ ಅದು ಪೇಚಾಡುತ್ತಿರುವಾಗ ಅದರ ಹಿಡಿತದಿಂದ ಪಾರಾಗಿ ಹಾಸಿಗೆಯಿಂದ ಕೆಳಗೆ ಹಾರಿದಳು. ತೋಳವು ಮೇಲೆದ್ದು ಬರುವ ಮೊದಲೇ ದ್ರಾಕ್ಷಾ ರಸದ ಶೀಸೆಯೊಂದಿಗೆ ಮನೆಯಿಂದ ಹೊರಗೆ ಬಂದಳು. ಅಲ್ಲಿ ನೀರು ತುಂಬಿದ ದೊಡ್ಡ ತೊಟ್ಟಿ ಇತ್ತು. ದ್ರಾಕ್ಷಾ ರಸವನ್ನು ನೀರಿಗೆ ಬೆರೆಸಿ ತಾನು ಮರೆಯಲ್ಲಿ ನಿಂತುಕೊಂಡಳು.

ತೋಳವು ಚಾದರ ಹೊದ್ದುಕೊಂಡು ಹೊರಗೆ ಬಂದಿತು. “”ಮುದ್ದಿನ ಮೊಮ್ಮಗಳೇ, ತಮಾಷೆಗಾಗಿ ಹೇಳಿದ ಮಾತನ್ನು ಕೇಳಿ ಭಯಪಟ್ಟೆಯಲ್ಲವೆ? ನಾನು ನಿನಗೆ ಏನೂ ಮಾಡುವುದಿಲ್ಲ. ಬಾ, ನನ್ನ ಬಳಿಗೆ” ಎಂದು ಕರೆಯಿತು. “”ನನಗೇಕೆ ಭಯ ಅಜ್ಜೀ, ನಾನೂ ಹೆದರಿದಂತೆ ನಾಟಕ ಮಾಡಿದೆ ಅಷ್ಟೇ. ನಿನಗಾಗಿ ಈ ತೊಟ್ಟಿಯಲ್ಲಿ ದ್ರಾಕ್ಷಾ ರಸ ತುಂಬಿಸಬೇಕೆಂದು ಪ್ರಯತ್ನಿಸಿದೆ. ಆದರೆ ಕಾಲುಜಾರಿ ಇದರೊಳಗೆ ಬಿದ್ದುಬಿಟ್ಟೆ. ನನ್ನನ್ನು ಮೇಲಕ್ಕೆತ್ತಿ ಬಿಡಜ್ಜಿ” ಎಂದು ಮರೆಯಲ್ಲಿ ಕುಳಿತು ಜೇನ್‌ ಹೇಳಿದಳು. ಅವಳ ಮಾತು ನಂಬಿ ತೋಳವು ತೊಟ್ಟಿಯ ಸನಿಹಕ್ಕೆ ಬಂದಿತು. ದ್ರಾಕ್ಷಾ ರಸದ ಪರಿಮಳ ಅದನ್ನು ತುಂಬ ಆಕರ್ಷಿಸಿತು. ತೊಟ್ಟಿಯಲ್ಲಿರುವ ದ್ರಾಕ್ಷಾ ರಸ ಬೆರೆತ ನೀರನ್ನು ಕುಡಿಯತೊಡಗಿತು. ಎಷ್ಟು ಕುಡಿದರೂ ಸಾಕು ಎನಿಸಲಿಲ್ಲ. ತೊಟ್ಟಿಯ ನೀರನ್ನೆಲ್ಲ ಕುಡಿದು ಉಸಿರಾಡಲಾಗದೆ ಬಾಯೆ¤ರೆದು ನೆಲದ ಮೇಲೆ ಬಿದ್ದುಕೊಂಡಿತು.

ಆಗ ತೋಳದ ಹೊಟ್ಟೆಯೊಳಗಿದ್ದ ಅಜ್ಜಿಯು ಅದರ ತೆರೆದ ಬಾಯಿಯಲ್ಲಿ ಹೊರಗೆ ಬಂದಳು. ಒಂದು ಬಡಿಗೆ ತಂದು ತೋಳವನ್ನು ಹೊಡೆದು ಹಾಕಿದಳು. ತನ್ನ ಪ್ರಾಣವನ್ನು ಜಾಣತನದಿಂದ ಉಳಿಸಿಕೊಂಡು ಅಜ್ಜಿಯನ್ನೂ ಕಾಪಾಡಿದ ಮೊಮ್ಮಗಳನ್ನು ಮಮತೆಯಿಂದ ಮುದ್ದಾಡಿದಳು. ಜೇನ್‌ ಕೆಲವು ದಿನಗಳ ಕಾಲ ಅಜ್ಜಿಯ ಜೊತೆಗಿದ್ದು ಅವಳು ತಯಾರಿಸಿದ ತಿಂಡಿಗಳನ್ನು ತಿಂದು ಖುಷಿಪಟ್ಟಳು. 

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next