Advertisement

ಜರ್ಮನಿಯ ಕತೆ: ಪ್ರಾಣಿಗಳು ತಂದ ನಿಧಿ

06:00 AM Sep 30, 2018 | Team Udayavani |

ಒಬ್ಬ ಅಗಸನ ಬಳಿ ಇದ್ದ ಕತ್ತೆ ಜೀವಮಾನವಿಡೀ ಅದು ಅವನ ಸೇವೆಯಲ್ಲೇ ಕಳೆಯಿತು. ಒಂದು ದಿನ ರಾತ್ರೆ ಕತ್ತೆಗೆ ಮನೆಯೊಳಗಿದ್ದ ಅಗಸ ತನ್ನ ಹೆಂಡತಿಗೆ ಹೇಳುತ್ತಿದ್ದ ಮಾತುಗಳು ಕೇಳಿಸಿದವು. “”ನಮ್ಮ ಕತ್ತೆಗೆ ವಯಸ್ಸಾಯಿತು, ದುಡಿಯಲು ಕಷ್ಟವಾಗುತ್ತಿದೆ. ನಾಳೆ ಕಟುಕನಿಗೆ ಅದನ್ನು ಮಾಂಸಕ್ಕಾಗಿ ಕಡಿಯಲು ಕೊಡಬೇಕು. ದುಡಿಯಲಾಗದ ಜೀವಿಯನ್ನು ವ್ಯರ್ಥ ಸಾಕುವುದೇಕೆ?” ಎಂದು ಅವನು ಹೇಳುತ್ತಿದ್ದ.

Advertisement

ಇಷ್ಟು ಕಾಲ ದುಡಿದ ತನಗೆ ನಾಳೆ ಬೆಳಗಾದರೆ ಸಾವು ಕಾದಿದೆ ಎಂದು ತಿಳಿದಾಗ ಕತ್ತೆಗೆ ದುಃಖವಾಯಿತು. ಕಟುಕನ ಕತ್ತಿಗೆ ಬಲಿಯಾಗಲು ಅದಕ್ಕೆ ಇಷ್ಟವಿರಲಿಲ್ಲ. ಪಟ್ಟಣಕ್ಕೆ ಹೋದರೆ ಸಂಗೀತಗಾರರಿಗೆ ಒಳ್ಳೆಯ ಬೇಡಿಕೆ ಇದೆ ಎಂದು ಅದಕ್ಕೆ ತನ್ನ ಅಜ್ಜ ಹೇಳಿದ ಮಾತು ನೆನಪಿಗೆ ಬಂತು. ಎಂದೋ ಕಲಿತಿದ್ದ ಸಂಗೀತ ಕಲೆಯಿಂದ ಜೀವನ ನಡೆಸಲು ಪ್ರತ್ನಿಸಬೇಕು ಎಂದು ಅದು ನಿರ್ಧರಿಸಿತು. ಹುಲ್ಲಿನ ಮೆದೆಯಲ್ಲಿ ಅಡಗಿಸಿಕೊಂಡಿದ್ದ ತನ್ನ ವಾಲಗವನ್ನು ಎತ್ತಿಕೊಂಡು ಹೊರಟೇಬಿಟ್ಟಿತು.

ಕತ್ತೆ ಸ್ವಲ್ಪ ಮುಂದೆ ಹೋದಾಗ ಒಂದು ಮುದಿನಾಯಿ ಎದುರಿಗೆ ಬಂದಿತು. “”ಕತ್ತೆಯಣ್ಣ! ಎಲ್ಲಿಗೆ ಒಬ್ಬನೇ ಹೊರಟಿದ್ದೀ?” ಕೇಳಿತು. “”ವೃದ್ಧನಾದೆ. ನಾನಿನ್ನು ದುಡಿಯಲು ಅಶಕ್ತನೆಂಬುದು ತಿಳಿದುಕೊಂಡ ಯಜಮಾನ ನಾಳೆ ನನ್ನನ್ನು ಕಟುಕನಿಗೆ ಕೊಡುತ್ತಿದ್ದಾನೆ. ಹಾಗೆಲ್ಲ ಸಾಯಲು ಇಚ್ಛೆಯಿಲ್ಲ. ಎಂದೋ ಸಂಗೀತ ಕಲಿತಿದ್ದೇನೆ. ಅದರ ಸಹಾಯದಿಂದ ಬದುಕಲು ಹೊರಟಿದ್ದೇನೆ. ಅದಿರಲಿ, ಮನೆ ಕಾಯುವುದು ಬಿಟ್ಟು ನೀನೆಲ್ಲಿಗೆ ಸವಾರಿ ಹೊರಟದ್ದು?” ಕತ್ತೆ ವಿಚಾರಿಸಿತು.

“”ನನ್ನದೂ ಅದೇ ಕತೆ. ಅನ್ನ ಹಾಕಿದ ಒಡೆಯನಿಗೆ ನಿಷ್ಠೆಯಿಂದಲೇ ಇದ್ದೆ. ಅವನು ಮಲಗಿ ಗೊರಕೆ ಹೊಡೆಯುವಾಗ ನಾನು ನಿದ್ರೆಗೆಟ್ಟು ಕಳ್ಳರು ಬಾರದಂತೆ ಕಾಯುತ್ತಿದ್ದೆ. ಬೇಟೆಗೆ ಹೋಗುವಾಗ ಹಿಂಬಾಲಿಸಿ ಪ್ರಾಣಿಗಳನ್ನು ಹಿಡಿದು ಕೊಡುತ್ತಿದ್ದೆ. ಆದರೆ ನನಗೀಗ ವಯಸ್ಸಾಗಿದೆ. ಹಲ್ಲು ಹೋಗಿದೆ, ಉಗುರು ಸವೆದಿದೆ. ನಾನು ನಿಷ್ಪ್ರಯೋಜಕನೆಂದು ತಿಳಿದು ನಾಳೆ ನನ್ನನ್ನು ಕೊಲ್ಲಿಸಲು ತೀರ್ಮಾನಿಸಿದ್ದಾನೆ ಒಡೆಯ. ಹಾಗೆ ಸಾಯಬಾರದು. ನನಗೆ ಅಲ್ಪಸ್ವಲ್ಪ$ ಸಂಗೀತ ಗೊತ್ತಿದೆ. ಅದೃಷ್ಟ ಪರೀಕ್ಷೆಗೆ ಪಟ್ಟಣದ ಹಾದಿ ಹಿಡಿದಿದ್ದೇನೆ. ನೀನೂ ನನ್ನ ಹಾಗೆಯೇ ಮನೆಯಿಂದ ಹೊರಟವನು, ಜೊತೆಯಾಗಿ ಹೋಗಿ ಸಾಧನೆ ಮಾಡೋಣವೆ?” ನಾಯಿ ಕೇಳಿತು.

“”ಒಬ್ಬನೇ ಹೋಗಬೇಕಲ್ಲ ಎಂದುಕೊಂಡಿದ್ದೆ. ನೀನು ಜೊತೆಗೆ ಬರುವುದಾದರೆ ಒಳ್ಳೆಯದಾಯಿತು. ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಜೀವನ ಕಳೆಯೋಣ” ಎಂದು ಕತ್ತೆ ಅದನ್ನು ಕರೆದುಕೊಂಡು ಮುಂದೆ ಸಾಗಿತು. ಆಗ ಒಂದು ಬೆಕ್ಕು ಹಿಂದಿನಿಂದ ಓಡೋಡಿ ಬಂತು. “”ಸ್ವಲ್ಪ$ ನಿಲ್ಲಿ, ನಿಮ್ಮೊಂದಿಗೆ ಮಾತನಾಡಲಿಕ್ಕಿದೆ” ಎಂದು ಕೂಗಿತು. ಕತ್ತೆ ಮತ್ತೆ ನಾಯಿ ಬೆಕ್ಕನ್ನು ನೋಡಿದವು. “”ಕತ್ತಲಲ್ಲಿ ಯಾಕೆ ಮನೆಯಿಂದ ಬಂದೆ? ಬೆಣ್ಣೆ, ತುಪ್ಪ ತಿಂದುಕೊಂಡು ಮನೆಯಲ್ಲೇ ಇರಬಹುದಿತ್ತಲ್ಲವೆ?” ಕೇಳಿದವು.

Advertisement

“”ಕೇವಲ ತಿಂದು ಸುಮ್ಮಗಿರುತ್ತಿದ್ದರೆ ಯಾರು ನನ್ನನ್ನು ಸಾಕುತ್ತಿ ದ್ದರು? ದಿನವೂ ಇಲಿಗಳನ್ನು ಕೊಂದು ಮಾಲಕನ ಕಣಜವನ್ನು ರಕ್ಷಿಸುತ್ತಿದ್ದೆ. ಆದರೆ ವಯಸ್ಸಾಯಿತು, ಇನ್ನು ನಿನಗೆ ಇಲಿ ಹಿಡಿಯಲು ಸಾಮರ್ಥ್ಯವಿಲ್ಲವೆಂದು ಮನೆಯಿಂದ ಓಡಿಸಿಬಿಟ್ಟ. ನನಗೆ ಯಾವಾಗಲೋ ಸಂಗೀತ ಕಲಿತ ನೆನಪಿದೆ. ಅದರಿಂದ ಜೀವನ ಮಾಡಲು ನಿರ್ಧರಿಸಿ ಪಟ್ಟಣದ ಹಾದಿ ಹಿಡಿದಿದ್ದೇನೆ” ಎಂದಿತು ಬೆಕ್ಕು. “”ಓಹೋ, ನಿನಗೆ ಸಂಗೀತ ಗೊತ್ತಿದೆಯೆ? ನಾವು ಕಛೇರಿ ಮಾಡುತ್ತ ಜೀವನ ಸಾಗಿಸುವ ನಿರ್ಧಾರ ಮಾಡಿ ಹೊರಟವರು. ನೀನು ಇಷ್ಟವಿದ್ದರೆ ನಮ್ಮೊಂದಿಗೆ ಬರಬಹುದು” ಎಂದಿತು ಕತ್ತೆ. ಬೆಕ್ಕು ಅದಕ್ಕೊಪ್ಪಿ ಹಿಂದೆಯೇ ಬಂದಿತು.

ಮೂರು ಪ್ರಾಣಿಗಳು ಮುಂದುವರೆದಾಗ ಒಂದು ಹುಂಜ ಅಳುವುದು ಕಂಡುಬಂತು. ಕಾರಣ ಕೇಳಿದಾಗ ಹುಂಜವು, “”ರೈತನೊಬ್ಬ ಪ್ರೀತಿಯಿಂದಲೇ ನನ್ನನ್ನು ಸಾಕಿದ. ದಿನವೂ ಬೆಳಗಾಗುವಾಗ ನಾನು ಕೂಗಿ ಕರೆದು ಅವನಿಗೆ ಹೊಲಕ್ಕೆ ಹೋಗಲು ನೆರವಾಗುತ್ತಿದ್ದೆ. ಮನುಷ್ಯರಿಗೆ ಕೃತಜ್ಞತೆ ಇದ್ದರೆ ತಾನೆ? ನನ್ನನ್ನು ನೋಡಿ ಬಲಿಷ್ಠವಾಗಿದೆ, ನಾಳೆ ಇದಕ್ಕೆ ಚೂರಿ ಹಾಕಿ ಮಾಂಸವನ್ನು ಔತಣದೂಟಕ್ಕೆ ಬಳಸಬೇಕು ಎಂದು ಹೇಳುತ್ತಿದ್ದ. ನನಗೆ ಸಾಯಲು ಇಚ್ಛೆಯಿಲ್ಲ. ಉದಯರಾಗದ ಸಂಗೀತ ಕಲಿತಿದ್ದೇನೆ. ಪಟ್ಟಣಕ್ಕೆ ಹೋಗಿ ಜೀವಿಸಬಹುದೆಂಬ ಯೋಚನೆಯಲ್ಲಿ ಆ ಕಡೆಗೆ ಹೊರಟಿದ್ದೆ. ಆದರೆ ದಾರಿ ತಿಳಿಯದೆ ಅಳುತ್ತ ಕುಳಿತಿದ್ದೇನೆ” ಎಂದಿತು ಹುಂಜ.

“”ನಾವೂ ನಿನ್ನ ಹಾಗೆಯೇ ದುಃಖೀಗಳು. ಪಟ್ಟಣಕ್ಕೆ ಹೋಗಿ ಸಂಗೀತ ಪ್ರದರ್ಶಿಸುವ ಆಸೆಯಿಂದ ಹೊರಟವರು. ನಮ್ಮ ಜೊತೆಗೆ ಬಾ. ಒಟ್ಟಾಗಿ ಜೀವನ ಮಾಡೋಣ” ಎಂದು ಉಳಿದ ಪ್ರಾಣಿಗಳು ಕರೆದವು. ಹುಂಜ ಜೊತೆಗೆ ಹೊರಟಿತು. ಅವು ಒಂದು ಕಾಡಿನ ದಾರಿಯಲ್ಲಿ ಮುಂದೆ ಸಾಗತೊಡಗಿದವು.
ಮಧ್ಯರಾತ್ರೆಯ ಹೊತ್ತಾಗಿತ್ತು. ಎಲ್ಲ ಪ್ರಾಣಿಗಳಿಗೂ ಹಸಿವು ಮತ್ತು ಬಾಯಾರಿಕೆಯಾಗಿತ್ತು. “”ಇಲ್ಲಿ ಎಲ್ಲಾದರೂ ಮನೆಗಳಿರಬಹುದೆ? ರಾತ್ರೆಯ ಹೊತ್ತು. ಎಲ್ಲರೂ ಮಲಗಿರುತ್ತಾರೆ. ಮೆಲ್ಲಗೆ ಹೋಗಿ ಸೌತೆಕಾಯಿ ಯೋ ಕಬ್ಬೊà ಸಿಗುವುದಾದರೆ ತಿನ್ನಬಹುದಿತ್ತು” ಎಂದಿತು ಕತ್ತೆ. ಬೆಕ್ಕು, “”ಒಣಹುಲ್ಲಿನ ಮೆದೆಯಲ್ಲಿ ಇಲಿಗಳಿದ್ದರೂ ಇರಬಹುದು” ಎಂದು ನಾಲಿಗೆ ಚಪ್ಪರಿಸಿತು. ನಾಯಿ, “”ತಿಪ್ಪೆಗೆ ಎಸೆದ ಅನ್ನ ಸಿಕ್ಕಿದರೂ ಸಾಕಾಗುತ್ತಿತ್ತು” ಎಂದು ಹೇಳಿತು. ಹುಂಜವೂ, “”ಹೌದು, ಹುಲ್ಲಿನ ಮೆದೆಯ ಬಳಿ ಕಾಳುಗಳೂ ಇರಬಹುದು. ನಾನು ದೊಡ್ಡ ಮರದ ಮೇಲೆ ಹತ್ತಿ ಯಾವು ದಾದರೂ ಮನೆಯಿಂದ ಬೆಳಕು ಕಾಣುತ್ತದೋ ನೋಡುತ್ತೇನೆ” ಎಂದು ಹೇಳಿ ಒಂದು ಮರವೇರಿ ಸುತ್ತಲೂ ನೋಡಿತು. ಆಗ ಒಂದು ಮನೆಯಿಂದ ಬೆಳಕು ಕಾಣಿಸಿತು.

ಪ್ರಾಣಿಗಳು ಬೆಳಕಿನ ದಾರಿ ಹುಡುಕುತ್ತ ಮುಂದೆ ಹೋಗಿ ಆ ಮನೆಯ ಬಳಿಗೆ ಬಂದವು. ಮುಚ್ಚಿದ್ದ ಬಾಗಿಲಿನ ಎಡೆಯಿಂದ ಬೆಳಕು ಹೊರಗೆ ಬರುತ್ತ ಇತ್ತು. ಕತ್ತೆಯ ಬೆನ್ನ ಮೇಲೆ ನಾಯಿ ನಿಂತಿತು. ಅದರ ಬೆನ್ನಿನ ಮೇಲೆ ಬೆಕ್ಕು ನಿಂತು ಹುಂಜನನ್ನು ಬೆನ್ನಿನ ಮೇಲೇರಿಸಿಕೊಂಡಿತು. ಒಳಗೆ ಯಾರಿದ್ದಾರೆ ಎಂಬುದನ್ನು ಛಾವಣಿಯ ಸಂದಿಯಿಂದ ನೋಡಿದ ಹುಂಜವು, “”ಒಳಗೆ ತುಂಬ ಮಂದಿ ಅಲ್ಲಲ್ಲಿ ಮಲಗಿದ್ದಾರೆ. ಊಟದ ತಟ್ಟೆಗಳ ತುಂಬ ವಿಧವಿಧದ ಪಕ್ವಾನ್ನಗಳನ್ನು ಬಡಿಸಿಟ್ಟಿರುವ ದೃಶ್ಯ ಕಾಣಿಸುತ್ತಿದೆ” ಎಂದು ಹೇಳಿತು. ಪಕ್ವಾನ್ನಗಳ ಹೆಸರು ಕೇಳಿ ಎಲ್ಲ ಪ್ರಾಣಿಗಳಿಗೂ ಹಸಿವು ಹೆಚ್ಚಾಯಿತು.

“”ಎಲ್ಲರೂ ಅವರವರ ವಾದ್ಯಗಳನ್ನು ಎತ್ತಿಕೊಂಡು ಒಳ್ಳೆಯ ಸಂಗೀತ ನುಡಿಸಲು ಆರಂಭಿಸಿ. ಅದರ ಧ್ವನಿಗೆ ಹೆದರಿ ಒಳಗಿರುವವರು ಎದ್ದು ಬಾಗಿಲು ತೆರೆದು ಹೊರಗೆ ಓಡುತ್ತಾರೆ. ಆಗ ಬೇಕಾದಷ್ಟು ಊಟ ಮಾಡಬಹುದು” ಎಂದಿತು ಕತ್ತೆ. ಎಲ್ಲವೂ ಜೊತೆಗೂಡಿ ತಮ್ಮಲ್ಲಿರುವ ವಾದ್ಯಗಳನ್ನು ನುಡಿಸಲು ಆರಂಭಿಸಿದ ತಕ್ಷಣ ಮಲಗಿದ್ದವರು ಎಚ್ಚರ ಗೊಂಡರು. “”ದೆವ್ವ, ದೆವ್ವ!” ಎಂದು ಭಯಭೀತರಾಗಿ ಕೂಗುತ್ತ ಬಾಗಿಲು ತೆಗೆದು ಹೊರಗೆ ಬಂದು ದಿಕ್ಕು ಸಿಕ್ಕತ್ತ ಓಡಿಹೋದರು.

ಪ್ರಾಣಿಗಳು ಮನೆಯೊಳಗೆ ಬಂದವು. ಬಡಿಸಿಟ್ಟ ಭಕ್ಷ್ಯಗಳನ್ನು ಮನದಣಿಯೆ ತಿಂದವು. ಆಗ ಮನೆಯೊಳಗೆ ರಾಶಿ ಹಾಕಿದ್ದ ಬಂಗಾರದ ಒಡವೆಗಳು, ಮುತ್ತು ರತ್ನಗಳು ಕಾಣಿಸಿದವು. ನಾಯಿ, “”ಇದು ಕಳ್ಳರ ಮನೆ. ಕಳವು ಮಾಡಿದ ವಸ್ತುಗಳೆಲ್ಲವೂ ಇಲ್ಲಿವೆ. ಪಾಪ, ನನಗೆ ಆಶ್ರಯ ನೀಡಿದ ಯಜಮಾನ ತುಂಬ ಕಷ್ಟದಲ್ಲಿದ್ದಾನೆ. ಈ ನಿಧಿಯನ್ನು ನಾಲ್ಕು ಭಾಗ ಮಾಡಿದರೆ ಒಂದು ಪಾಲನ್ನು ಅವನಿಗೆ ಕೊಟ್ಟು ಬರುತ್ತಿದ್ದೆ” ಎಂದು ಸಾಕಿದವನನ್ನು ನೆನೆಸಿಕೊಂಡಿತು. ಉಳಿದ ಪ್ರಾಣಿಗಳಿಗೂ ತಮ್ಮ ಯಜಮಾನನ ನೆನಪು ಬಂದಿತು. ಅವು ಸಂಪತ್ತನ್ನು ಭಾಗ ಮಾಡಿದವು. ಒಂದೊಂದು ಭಾಗವನ್ನು ಹೊತ್ತುಕೊಂಡು ಬೆಳಗಾಗುವಾಗ ಮನೆಗೆ ತಲುಪಿದವು.

ಎಲ್ಲ ಪ್ರಾಣಿಗಳ ಯಜಮಾನರಿಗೂ ಅವು ತಂದ ನಿಧಿ ಕಂಡು ಸಂತೋಷವಾಯಿತು. “”ಎಷ್ಟು ಒಳ್ಳೆಯ ಗುಣ ಇವುಗಳದ್ದು. ಎಷ್ಟು ಸಂಪತ್ತು ತಂದಿವೆ. ಎಂದಿಗೂ ಇವುಗಳನ್ನು ಕೊಲ್ಲದೆ ಪ್ರೀತಿಯಿಂದ ಜೀವನವಿಡೀ ನೋಡಿಕೊಳ್ಳಬೇಕು” ಎಂದು ಅವರು ನಿರ್ಧರಿಸಿದರು. ಪ್ರಾಣಿಗಳು ಪಟ್ಟಣಕ್ಕೆ ಹೋಗುವ ಯೋಚನೆ ಬಿಟ್ಟು ಸಾಕಿದವನ ಬಳಿಯಲ್ಲಿ ನೆಮ್ಮದಿಯಿಂದ ಇದ್ದವು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next