ಬರ್ಲಿನ್: “ಇವತ್ತು ಯಾಕೋ ಮೂಡಿಲ್ಲ. ಅದಕ್ಕಾಗಿ ಸಿನಿಮಾಕ್ಕೆ ಹೋಗ್ತೀನೆ’ ಎಂದು ಕೆಲವರು ಹೇಳ್ಳೋದನ್ನು ಕೇಳಿರುತ್ತೇವೆ. ಆದರೆ ಇಲ್ಲೊಬ್ಬನ ವಿಚಾರ ಮಾತ್ರ ಭಯಂಕರ. ಅವನು ಬೋರ್ ಹೊಡೆಯುತ್ತದೆ ಎಂದು ಕೊಲ್ಲುತ್ತಾನಂತೆ. ನಂಬಲು ಅಸಾಧ್ಯವಾದರೂ ಇದು ಸತ್ಯ. ಇದೇ ಕಾರಣಕ್ಕಾಗಿ ಆತ 106 ರೋಗಿಗಳನ್ನು ಕೊಂದಿದ್ದಾನೆ. ಅಂದ ಹಾಗೆ ಆತ ವೃತ್ತಿಯಲ್ಲಿ ಜೀವ ಉಳಿಸುವ ನರ್ಸ್.
ಜರ್ಮನಿಯ ಬರ್ಲಿನ್‌ನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ನೀಲ್ಸ್ ಹೋಜೆಲ್ (41) ಎಂಬ ವಿಕೃತ ಮನಸ್ಸಿನವನ ಕಥೆಯಿದು. ರೋಗಿಗಳಿಗೆ ವಿಷವನ್ನು ಇಂಜೆಕ್ಷನ್ ಮೂಲಕ ನೀಡಿ ಆತ ಕೊಲೆ ಮಾಡುತ್ತಿದ್ದ.
2015ರಲ್ಲಿಯೇ ಆತ ಸಿಕ್ಕಿಬಿದ್ದಿದ್ದು, ಇಂಥ ಎರಡು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿದೆ. ಮತ್ತೂಂದು ಪ್ರಕರಣದಲ್ಲಿ ಆತನ ವಿರುದ್ಧ ರೋಗಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಹೊರಿಸಲಾಗಿದೆ. ನರ್ಸ್‌ನ ಕುಕೃತ್ಯದ ಬಗ್ಗೆ ಪೊಲೀಸರು ಶೋಧ ನಡೆಸುತ್ತಾ ಹೋದಂತೆ ಅವರಿಗೆ ಅಚ್ಚರಿ ಕಾದಿತ್ತು. ವಿಚಾರಣೆ ವೇಳೆ ಆತ ಬೋರ್ ಆಗುತ್ತಿದ್ದುದರಿಂದ ಇಂಥ ಕೆಲಸ ಮಾಡು ತ್ತಿದ್ದು, ಒಟ್ಟು 106 ಮಂದಿಯ ಜೀವವನ್ನೇ ಆಪೋಷನ ತೆಗೆದುಕೊಂಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. 1995ರಿಂದ 2005ರಲ್ಲಿ ಎರಡು ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೋಗಿಗಳ ಜೀವಕ್ಕೆ ಎರವಾಗಿದ್ದ.
ನನಗೆ ರೋಗಿಗಳು ಗುಣಮುಖರಾಗದೇ ಇದ್ದುದು ನೋಡಿ ನಿರಾಸೆಯಾಗುತ್ತಿತ್ತು. ಅದಕ್ಕೆ ಅವರಿಗೆ ಡ್ರಗ್ ಇಂಜೆಕ್ಟ್ ಮಾಡುತ್ತಿದ್ದೆ. ಪರಿಣಾಮ ಹೃದಯ ವೈಫಲ್ಯ ಆಗಿ ಅವರು ಸಾಯುತ್ತಿದ್ದರು. ನನಗೆ ಬೋರ್ ಆದಾಗೆಲ್ಲ ಕೊಲೆ ಮಾಡುತ್ತಿದ್ದೆ ಎಂದಿದ್ದಾನೆ ಹೋಜೆಲ್. ಆತ ಮಾಡಿದ ಒಂದೊಂದೇ ಕೃತ್ಯಗಳು ಇದೀಗ ಬೆಳಕಿಗೆ ಬರುತ್ತಿದ್ದು, ಹೊಸ ಪ್ರಕರಣಗಳಿಗೆ ಸಂಬಂಧಿಸಿ ಮುಂದಿನ ವರ್ಷ ಆರೋಪಪಟ್ಟಿ ದಾಖಲಾಗುವ ಸಾಧ್ಯತೆಯಿದೆ.