Advertisement

ಸರ್ಜಾಪುರ ರಸ್ತೆ ವಿಸ್ತರಣೆ ಸಭೆಗೆ ಜಾರ್ಜ್‌ ಸೂಚನೆ

12:02 PM Jan 10, 2018 | Team Udayavani |

ಬೆಂಗಳೂರು: ಸರ್ಜಾಪುರ ರಸ್ತೆ ವಿಸ್ತರಣೆ ಸಂಬಂಧ ಸ್ಥಳೀಯರೊಂದಿಗೆ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವಂತೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಬಿಎಂಆರ್‌ಡಿಎನಲ್ಲಿ ಸೋಮವಾರ ಸರ್ಜಾಪುರ ರಸ್ತೆ ವಿಸ್ತರಣೆ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಯ ಪ್ರಗತಿ ಹಾಗೂ ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.

ಇದಕ್ಕೆ ಉತ್ತರಿಸಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ಸರ್ಜಾಪುರ ರಸ್ತೆಯನ್ನು ಹೊರವರ್ತುಲ ರಸ್ತೆಯಿಂದ ಇಬ್ಬಲೂರು ಜಂಕ್ಷನ್‌ವರಗೆ ಸರ್ವಿಸ್‌ ರಸ್ತೆಗಳನ್ನು ಒಳಗೊಂಡಂತೆ ಆರು ಪಥಗಳ ರಸ್ತೆಯಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದೆ. ರಸ್ತೆ ಅಗಲೀಕರಣಕ್ಕಾಗಿ 320 ಆಸ್ತಿಗಳ 2.05 ಎಕರೆ ಪ್ರದೇಶವನ್ನು ಭೂ ಸ್ವಾಧೀನ ಪಡಿಸಿಕೊಳ್ಳಬೇಕಿದೆ ಎಂದು ಮಾಹಿತಿ ನೀಡಿದರು.

ಭೂಸ್ವಾಧೀನ ಕಾಯ್ದೆಯಂತೆ ಟಿಡಿಆರ್‌ ನೀಡುವ ಸಂಬಂಧ 140 ಜನರಿಂದ ಆಕ್ಷೇಪಣೆಗಳು ಬಂದಿದ್ದು, ಬಹುತೇಕ ಭೂಮಿ ಮಾಲೀಕರು ಟಿಡಿಆರ್‌ ಬದಲಿಗೆ ಪರಿಹಾರ ನೀಡುವಂತೆ ಕೋರಿದ್ದಾರೆ. ಹೀಗಾಗಿ ಕಾಮಗಾರಿ ಕೈಗೊಳ್ಳಲು ವಿಳಂಬವಾಗಿದೆ ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರಾದ ರಾಮಚಂದ್ರರೆಡ್ಡಿ ಮಾತನಾಡಿ, ಪಾಲಿಕೆಯ ಅಧಿಕಾರಿಗಳು ಈವರೆಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿಲ್ಲ. ಜತೆಗೆ ರಸ್ತೆ ಅಗಲೀಕರಣದ ಕುರಿತು ಮಾಹಿತಿ ನೀಡುವ ಕೆಲಸವನ್ನು ಮಾಡಿಲ್ಲ ಎಂದು ದೂರಿದರು.

Advertisement

ಇದಕ್ಕೆ ಸ್ಪಂದಿಸಿದ ಜಾರ್ಜ್‌, ಕೂಡಲೇ ಸ್ಥಳೀಯರೊಂದಿಗೆ ಸಭೆ ನಡೆಸಿ ಟಿಡಿಆರ್‌ ಕುರಿತು ಅವರಿಗೆ ಮಾಹಿತಿ ನೀಡುವಂತೆ ಮತ್ತು ಸ್ಥಳೀಯರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲು ಮುಂದಾಗುವಂತೆ ಪಾಲಿಕೆಯ ವಿಶೇಷ ಆಯುಕ್ತ (ಆಸ್ತಿಗಳು) ವಿಜಯ್‌ಶಂಕರ್‌ ಅವರಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next