ಮಂಗಳೂರು ಬಿಜೈ ಮೂಲದ ಯುವಕನೊಬ್ಬ ರಾಷ್ಟ್ರರಾಜಕಾರಣದಲ್ಲಿ ಮಿಂಚಿ ಮರೆಯಾಗಿದ್ದು ಇದೀಗ ಇತಿಹಾಸವಾಗಿದೆ. ಅಪ್ರತಿಮ ಕಾರ್ಮಿಕ ಹೋರಾಟಗಾರರಾಗಿ, ತುರ್ತು ಪರಿಸ್ಥಿತಿ ವೇಳೆ ಭೂಗತರಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿ ವಿರುದ್ಧ ಹೋರಾಟ ನಡೆಸಿದ್ದ ಜಾರ್ಜ್ ಫರ್ನಾಂಡಿಸ್ ಅತ್ಯುತ್ತಮ ವಾಗ್ಮಿಯಾಗಿದ್ದರು. ಧೀಮಂತ ರಾಜಕಾರಣಿಯಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಕಳೆದ ಕೆಲವು ವರ್ಷಗಳಿಂದ ಅಲ್ಜೈಮರ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದು, ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಿಹಾರ್ ಜೈಲಿನಿಂದಲೇ ಬಿಹಾರದ ಮುಜಾಫರ್ ನಗರದಿಂದ ಸ್ಪರ್ಧಿಸಿ ಗೆದ್ದ ಜಾರ್ಜ್ ಫರ್ನಾಂಡಿಸ್ ಅಪ್ರತಿಮ ಜನನಾಯಕರಾಗಿ ಬೆಳೆದಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೊಂಕಣ್ ರೈಲ್ವೆ, ಕಾರವಾರದ ಸೀ ಬರ್ಡ್ ಸೇರಿದಂತೆ ಹಲವು ಮಹತ್ವದ ಯೋಜನೆಗಳ ರೂವಾರಿ ಜಾರ್ಜ್ ಫರ್ನಾಂಡಿಸ್. ನನಗೆ ಮತ್ತೊಂದು ಜನ್ಮವಿದ್ದರೆ ನಾನು ವಿಯೆಟ್ನಾಮೀಸ್ ಆಗಿ ಹುಟ್ಟಬೇಕು ಎಂದು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದರು. ವಿಯೆಟ್ನಾಂ ಜನರಲ್ಲಿ ಶಿಸ್ತಿದೆ, ಹಿಡಿದ ಕೆಲಸ ಮಾಡಬೇಕೆಂಬ ಛಲ ಅವರಲ್ಲಿದೆ ಎಂದಿದ್ದರು. ಕೊಂಕಣಿ, ತುಳು, ಹಿಂದಿ, ಇಂಗ್ಲೀಷ್, ಮರಾಠಿ, ತಮಿಳು, ಉರ್ದು, ಲ್ಯಾಟಿನ್ ಭಾಷೆಯಲ್ಲಿ ಪರಿಣತರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರು ಬಂಗಾಳಿ ಕವಿ, ಕಾದಂಬರಿಕಾರ, ಮಾಜಿ ಕೇಂದ್ರ ಸಚಿವ ಕಬೀರ್ ಅವರ ಪುತ್ರಿ ಲೈಲಾ ಕಬೀರ್ ಅವರನ್ನು ವಿವಾಹವಾಗಿದ್ದರು. ಜಾರ್ಜ್, ಲೈಲಾ ದಂಪತಿಗೆ ಸಿಯಾನ್ ಫರ್ನಾಂಡಿಸ್ ಎಂಬ ಪುತ್ರ ಜನಿಸಿದ್ದ. 1984ರಲ್ಲಿ ಲೈಲಾ ಅವರಿಂದ ವಿಚ್ಛೇದನ ಪಡೆದಿದ್ದ ಜಾರ್ಜ್ ಫರ್ನಾಂಡಿಸ್ ಅವರು ಜಯಾ ಜೇಟ್ಲಿ ಅವರೊಂದಿಗೆ ವಾಸ್ತವ್ಯ ಹೂಡಿದ್ದರು.