Advertisement

ಜಿಯೋ- ಫೇಸ್‌ಬುಕ್‌: ಭಾಯಿ ಭಾಯಿ

01:06 PM Apr 27, 2020 | mahesh |

ಟೆಲಿಕಾಂ ಕ್ಷೇತ್ರದ ದೈತ್ಯ ಎಂದೇ ಹೆಸರಾದ ಜಿಯೋ ಮತ್ತು ಸಾಮಾಜಿಕ ಜಾಲತಾಣದ ದೊರೆಯಾಗಿರುವ ಫೇಸ್‌ಬುಕ್‌ ಇದೀಗ ಒಂದಾಗಿವೆ. ಇದರಿಂದ ಉದ್ಯಮ ಲೋಕದಲ್ಲಿ ಹಲವು ಬದಲಾವಣೆಗಳು ಆಗಲಿವೆ ಎಂಬುದು ಹಲವರ ಲೆಕ್ಕಾಚಾರದ ಮಾತು…

Advertisement

ಜಿಯೊ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿಯೆಬ್ಬಿಸಿದ್ದ ರಿಲಯನ್ಸ್, ಈಗ ರೀಟೇಲ್‌ ಮತ್ತು ಡಿಜಿಟಲ್‌ ಪೇಮೆಂಟ್‌ ಕ್ಷೇತ್ರದಲ್ಲಿ ಅಂಥದ್ದೇ ಸಂಚಲನ ಸೃಷ್ಟಿಸುವ ಸೂಚನೆಯನ್ನು ನೀಡಿದೆ. ಅದಕ್ಕೆ ಕಾರಣವಾಗಿರುವುದು, ಜಿಯೊ ಮತ್ತು ಫೇಸ್‌ಬುಕ್‌ ಸಂಸ್ಥೆಯ ನಡುವೆ ಏರ್ಪಟ್ಟಿರುವ ಒಪ್ಪಂದ. ಜಿಯೊ ಸಂಸ್ಥೆಯ ಶೇ.10ರಷ್ಟು ಷೇರನ್ನು, ಬರೋಬ್ಬರಿ 43,574 ಕೋಟಿ ರೂ ತೆತ್ತು, ಫೇಸ್‌ಬುಕ್‌ ಖರೀದಿಸಿದೆ.

ರಿಲಯನ್ಸ್ ಲೆಕ್ಕಾಚಾರ ಜಿಯೊ ಎನ್ನುವುದು ಮೂಲವಾಗಿ
ಟೆಲಿಕಾಂ ಸಂಸ್ಥೆ ನಿಜ. ಆದರೆ, ಅದರಡಿ ಜಿಯೊ ಪ್ಲಾಟ್‌ ಫಾರ್ಮ್ ಕೂಡಾ ಬರುತ್ತದೆ. ಈ ಜಿಯೊ ಪ್ಲಾಟ್‌ ಫಾರ್ಮಿನಲ್ಲಿ ಜಿಯೊ ಮಾರ್ಟ್‌, ಜಿಯೊ ಸಾವನ್‌ ಮತ್ತು ಜಿಯೊ ಸಿನೆಮಾ- ಇವೆಲ್ಲಾ ಸೇವೆಗಳು ಬರುತ್ತವೆ. ಜಿಯೊ- ಫೇಸ್‌ಬುಕ್‌ ಒಪ್ಪಂದದ ನೇರ ಪರಿಣಾಮ, ಜಿಯೊ ಮಾರ್ಟ್‌ ಮೇಲಾಗುತ್ತದೆ. ಸದ್ಯ, ಜಿಯೊ ಮಾರ್ಟ್‌ ಆಯ್ದ ಸ್ಥಳಗಳಲ್ಲಿ ಸುತ್ತಮುತ್ತ ಮಾತ್ರ ಕಾರ್ಯಾಚರಿಸುತ್ತಿದೆ. ಇದು, ಗ್ರಾಹಕರ ಮನೆ ಬಾಗಿಲಿಗೇ ದಿನಸಿಯನ್ನು ತಲುಪಿಸುವ ಸೇವೆ. ಉಚಿತ ಹೋಂ ಡೆಲಿವರಿ. ಈಗ, ಫೇಸ್‌ಬುಕ್‌ ಜೊತೆಗಿನ ಒಪ್ಪಂದದ ನೆರವಿನಿಂದ, ರೀಟೇಲ್‌ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ರಿಲಯನ್ಸ್ ಮುಂದಾಗಲಿದೆ.

ವಾಟ್ಸ್‌ಆ್ಯಪ್‌ ಪೇಗೆ ಮರುಜೀವ
ರಿಲಯನ್ಸ್ ನಂತೆಯೇ, ಫೇಸ್‌ ಬುಕ್‌ಗೆ ಕೂಡ ಒಂದು ಉದ್ದೇಶವಿದೆ. ಈ ಒಪ್ಪಂದದ ಮೂಲಕ ತನ್ನ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ “ವಾಟ್ಸ್‌ ಆ್ಯಪ್‌ ಪೇ’ ಎಂಬ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಗೆ ಮರುಜೀವ ಕೊಡುವ ಸಾಧ್ಯತೆ ಇದೆ. ಪೇಟಿಎಂ, ಗೂಗಲ್‌ ಪೇ ರೀತಿ, ತಾನೂ ಒಂದು ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವುದು ಫೇಸ್‌ ಬುಕ್‌ನ ಕನಸಾಗಿತ್ತು. ಅದಕ್ಕಾಗಿಯೇ ವಾಟ್ಸ್‌ ಆ್ಯಪ್‌ನ ಸಂಪನ್ಮೂಲಗಳನ್ನು ಬಳಸಿಕೊಂಡು “ವಾಟ್ಸ್‌ ಆ್ಯಪ್‌ ಪೇ’ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಸರ್ಕಾರದ “ಡಾಟಾ ಲೋಕಲೈಸೇಷನ್‌’ ಷರತ್ತಿಗೆ ಫೇಸ್‌ಬುಕ್‌ ಒಪ್ಪದೇ ಇದ್ದುದರಿಂದ ಆ ಯೋಜನೆ ಅನುಷ್ಠಾನಕ್ಕೆ ಬರಲೇ ಇಲ್ಲ. ಡಾಟಾ ಲೋಕಲೈಸೇಷನ್‌ ಎಂದರೆ, ದೇಶದ ನಾಗರಿಕರ ಮಾಹಿತಿಯನ್ನು. ದೇಶದೊಳಗಡೆಯೇ ಸರ್ವರ್‌ ಸ್ಥಾಪಿಸಿ ಸಂಗ್ರಹಿಸಿಡುವುದು, ಮಾಹಿತಿ ಸಂಸ್ಕರಿಸುವುದು. ಈಗ ಜಿಯೊ ಜೊತೆ ಒಪ್ಪಂದವಾಗಿರುವುದರಿಂದ “ಡಾಟಾ ಲೋಕಲೈಸೇಷನ…’ ಷರತ್ತಿಗೆ ಫೇಸ್‌ಬುಕ್‌ ಸಮ್ಮತಿಸಿದೆ.

ಜಂಟಿ ಕಾರ್ಯಾಚರಣೆ
ಫೇಸ್‌ಬುಕ್‌ ಅಧೀನದ ಮೆಸೇಜಿಂಗ್‌ ಸಂಸ್ಥೆ ವಾಟ್ಸ್‌ಆ್ಯಪ್‌ ಹಾಗೂ ಟೆಲಿಕಾಂ ಆಪರೇರ್ಟ ಜಿಯೊ, ದೇಶಾದ್ಯಂತ ಸುಮಾರು 3 ಕೋಟಿ ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು, ಸುತ್ತಮುತ್ತಲ ಜನರು ಅಲ್ಲಿ ಡಿಜಿಟಲ್‌ ವ್ಯವಹಾರ ನಡೆಸುವಂತೆ ಪೋ›ತ್ಸಾಹ ನೀಡಲಿವೆ. ಇಲ್ಲಿ ಡಿಜಿಟಲ್‌ ವ್ಯವಹಾರ, ವಾಟ್ಸ್‌ ಆ್ಯಪ್‌ ಪೇ ಮುಖಾಂತರ ನಡೆಯಲಿದೆ. ನಂತರ ಈ ಡಿಜಿಟಲ್‌ ಪೇಮೆಂಟ್‌ ಸೇವೆಯನ್ನು ಕೃಷಿ, ಶಿಕ್ಷಣ ಮತ್ತಿತರ ಕ್ಷೇತ್ರಗಳಗೂ ವಿಸ್ತರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಈ ಒಂದು ನಡೆಯಿಂದಾಗಿ, ವಾಟ್ಸ್‌ ಆ್ಯಪ್‌ ಪೇಟಿಎಂ,
ಗೂಗಲ್‌ ಪೇ, ಫೋನ್‌ ಪೆ ಡಿಜಿಟಲ್‌ ಪೇಮೆಂಟ್‌ ಸಂಸ್ಥೆಗಳ ಮೇಲೆ ನೇರ ಪರಿಣಾಮ ಉಂಟಾಗಿದೆ. ಇವು ಮೂರು, ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಡಿಜಿಟಲ್‌ ಪೇಮೆಂಟ್‌ ಆ್ಯಪ್‌ ಗಳಲ್ಲಿ ಮುಖ್ಯವಾದವು.ವಾಟ್ಸ್‌ಆ್ಯಪ್‌ ಭಾರತದಲ್ಲಿನ ತನ್ನ ಮುಂದಿನ ಯೋಜನೆಗಳಿಗಾಗಿ ಇಲ್ಲಿ ತಾನು ಹೊಂದಿರುವ 40 ಕೋಟಿಯಷ್ಟು ಬಳಕೆದಾರರ ಸಹಕಾರವನ್ನು ಬಳಸಿಕೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next