Advertisement
ಕಳೆದ 8 ತಿಂಗಳ ಹಿಂದೆ ಮಾಗಡಿ ಬಳಿ ರಂಗನನ್ನು, ನೆಲಮಂಗಲದ ಬಳಿ ಐರಾವತನನ್ನು ಹಿಡಿದು ತಂದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಕ್ರಾಲ್ ನಲ್ಲಿ ಬಂಧಿಸಲಾಗಿತ್ತು. ಕ್ರಾಲ್‌ನಲ್ಲಿ ಬಂಧಿಸಿದ್ದರಿಂದ ಆರಂಭದಲ್ಲಿ ಸಾಕಷ್ಟು ರಂಪಾಟ ಮಾಡಿದ್ದ ಎರಡೂ ಆನೆಗಳು ಕಾಲಾಂತರದಲ್ಲಿ ಸೌಮ್ಯವಾಗಿದ್ದವು. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಎರಡೂ ಆನೆಗಳನ್ನು ಕ್ರಾಲ್‌ನಿಂದ ಹೊರ ತರಲಾಗಿತ್ತು. ಈ ನಡುವೆ ಎರಡೂ ಆನೆಗಳನ್ನು ಮತ್ತಷ್ಟು ತರಬೇತಿ ಹಾಗೂ ಪಳಗಿಸುವಿಕೆಗಾಗಿ ಹುಣಸೂರು ಸಮೀಪದ ಮತ್ತಿಗೋಡು ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
Related Articles
Advertisement
ಜಂಟಲ್ ರಂಗ: ಸುಮಾರು 35 ರಿಂದ 40 ವರ್ಷ ವಯಸ್ಸಿನ ರಂಗ, ಬನ್ನೇರುಘಟ್ಟ ಅಭಯಾರಣ್ಯ ವ್ಯಾಪ್ತಿಯ ಕಾಡಾನೆ. ತನ್ನ ಸುತ್ತಲೂ ತಂಡ ಕಟ್ಟಿಕೊಂಡಿರುತ್ತಿದ್ದ ರಂಗ ವರ್ಷದ ಕೆಲ ತಿಂಗಳು ಬನ್ನೇರುಘಟ್ಟ ಅರಣ್ಯದಲ್ಲಿ ವಾಸವಾಗಿದ್ದರೆ ಇನ್ನು ಒಂದಷ್ಟು ತಿಂಗಳು ಮಾಗಡಿ, ನೆಲಮಂಗಲ , ಸಾವನದುರ್ಗ, ತುಮಕೂರು ಅರಣ್ಯ ಪ್ರದೇಶದ ಕಾಡಿನಲ್ಲಿ ಸಂಚರಿಸುತ್ತಿದ್ದ. ರಾತ್ರಿಯಾಗುತ್ತಿದಂತೆ ಕಾಡಂಚಿನ ಹಳ್ಳಿಗಳತ್ತ ಆಹಾರಕ್ಕೆ ಹೋಗಿ ಬರುವ ವಾಡಿಕೆ ರೂಢಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದ. ಬನ್ನೇರುಘಟ್ಟ ವ್ಯಾಪ್ತಿಯಲ್ಲಂತೂ ಹಾಡಾಗಲೆ ಎಲ್ಲೆಂದರಲ್ಲಿ ಅಡ್ಡಾಡುವ ಪ್ರವೃತ್ತಿ ಹೊಂದಿದ್ದ.
ಕಳೆದ ಎರಡು ವರ್ಷಗಳಿಂದ ಬನ್ನೇರುಘಟ್ಟ ಅರಣ್ಯದಿಂದ ಹೊರಗಿದ್ದ ರಂಗ ಸಾವನದುರ್ಗ, ಮಾಗಡಿ, ನೆಲಮಂಗಲ, ತುಮಕೂರುಗಳಲ್ಲಿ ರೈತರ ಬೆಳೆ ಹಾನಿ ಮಾಡಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ. ಹೀಗಿರುವಾಗಲೇ ನೆಲಮಂಗಲ, ಮಾಗಡಿಯಲ್ಲಿ ಇಬ್ಬರು ರೈತರನ್ನು ಈ ರಂಗ ಕೊಂದಿದ್ದ. ಇದು ದೊಡ್ಡ ಸುದ್ದಿಯಾಗಿ ಒತ್ತಡಕ್ಕೆ ಮಣಿದ ಅರಣ್ಯ ಇಲಾಖೆಯು ರಂಗನನ್ನು ಹಿಡಿದು ತರಬೇತಿ ನೀಡಿದ್ದಾರೆ.
ಐರಾವತ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಆನೆಗಳ ತಂಡದಲ್ಲಿದ್ದ ಐರಾವತ ಕಳೆದ 7 ವರ್ಷಗಳಿಂದ ತುಮಕೂರು, ಮಾಗಡಿ, ನೆಲಮಂಗಲ ಭಾಗದಲ್ಲೆ ವಾಸಿಸತೊಡಗಿದ್ದ. ಸುಮಾರು 25 ರಿಂದ 30 ವರ್ಷ ವಯಸ್ಸಿನ ಐರಾವತನ ಒಂದು ದಂತ ಚಿಕ್ಕದಿದ್ದರೆ ಮತ್ತೂಂದು ಉದ್ದವಿದೆ. ಎಡಗಣ್ಣು ಪೂರ್ತಿ ಮಂಕಾಗಿದೆ. ಉಳಿದಂತೆ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಆನೆ ಕ್ರಾಲ್‌ನಲ್ಲಿ ಹಾಕಿದಾಗ ಐರಾವತ ಅವಾಂತರ ಸೃಷ್ಟಿಸಿದ್ದ. ಕ್ರಾಲ್ ಅನ್ನೇ ಮುರಿದು ಹಾಕುವ ಪ್ರಯತ್ನ ಮಾಡಿದ್ದ. ನಂತರ ಹರಸಾಹಸಪಟ್ಟು ಅರಣ್ಯ ಇಲಾಖೆ ಸಿಬ್ಬಂದಿ ಐರಾವತನನ್ನು ಪಳಗಿಸಿದ್ದರು.