Advertisement

ಪರಿಹಾರದಲ್ಲಿ ಲೋಪವಾಗದಂತೆ ಸೂಚನೆ

04:25 PM Jul 07, 2020 | Suhan S |

ಸವಣೂರು: ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಲೋಪವಾಗಿದ್ದೇ ಆದರೆ, ನೇರವಾಗಿ ಇಲಾಖೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ತಾಪಂ ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣವರ ತೋಟಗಾರಿಕೆ ಇಲಾಖೆ ಅಧಿಕಾರಿ ವಿನೋದ ಹಾಗೂ ಕೃಷಿ ಇಲಾಖೆ ಅಧಿಕಾರಿ ಬಿ.ಎಸ್‌.ಕಲಾಲ ಅವರನ್ನು ತರಾಟೆಗೆ ತೆಗೆದುಕೊಂಡರು.

Advertisement

ಪಟ್ಟಣದ ಹೊರವಲಯದ ತಾಪಂ ಸಭಾಂಗಣದಲ್ಲಿ ಶನಿವಾರ ಜರುಗಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು ಸಾಕಷ್ಟು ಹಣ ಖರ್ಚು ಮಾಡಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದ ಸಂದರ್ಭದಲ್ಲಿ ದೇಶದಲ್ಲಿ ಕೋವಿಡ್‌-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದ ರೈತರು ಸಾಕಷ್ಟು ತೊಂದರೆ ಅನುಭವಿಸಿದ ಹಿನ್ನೆಲೆಯಲ್ಲಿ ಸರ್ಕಾರ ತೋಟಗಾರಿಕೆ ಬೆಳೆಗಾರರಿಗೆ ಪರಿಹಾರ ಘೋಷಣೆ ಮಾಡಿದೆ. ಇಲಾಖೆ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸರ್ವೇ ಮಾಡಿ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದ್ದರೂ ಸಹ ಅವೈಜ್ಞಾನಿಕವಾಗಿ ಮನಬಂದಂತೆ ಮಾಹಿತಿ ತಯಾರಿಸಿದ್ದೀರಿ. ಹೀಗಾದರೆ, ತಾಲೂಕಿನ ರೈತರಿಗೆ ಸಮರ್ಪಕವಾದ ಪರಿಹಾರ ದೊರಕುವಲ್ಲಿ ಅನ್ಯಾಯವಾಗುತ್ತದೆ. ಆದ್ದರಿಂದ, ಇಲಾಖೆ ಅಧಿಕಾರಿಗಳು ಸರ್ವೇಯಿಂದ ಉಳಿದುಕೊಂಡ ರೈತರ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರ ದೊರಕುವಂತೆ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಪಂ ರಸ್ತೆ ಮತ್ತು ಒಳಚರಂಡಿ ಇಲಾಖೆ ಅಧಿಕಾರಿ ಹನುಮಂತಪ್ಪ ಸಭೆಗೆ ಮಾಹಿತಿ ನೀಡಲು ಮುಂದಾಗುತ್ತಿದ್ದಂತೆ, ತಾಪಂ ಅಧ್ಯಕ್ಷ ಮಾತನಾಡಿ, ಅತಿವೃಷ್ಟಿಯಿಂದ ತಾಲೂಕಿನಲ್ಲಿ ಸುಮಾರು 14 ಶಾಲೆಗಳು ಹಾನಿಗೊಳಗಾಗಿವೆ. ಈ ಶಾಲೆಗಳನ್ನು ದುರಸ್ತಿ ಮಾಡುವಂತೆ ಸರ್ಕಾರ ಅನುದಾನವನ್ನು ಬಿಡುಗಡೆ ಮಾಡಿದರೂ ಕೂಡ ಕಾಮಗಾರಿ ಪ್ರಾರಂಭಿಸಿಲ್ಲ. ತಕ್ಷಣ ಸೋಮವಾರದ ಒಳಗಾಗಿ ಕಾಮಗಾರಿ ಪ್ರಾರಂಭಿಸುವಂತೆ ಎಚ್ಚರಿಸಿದರು.

ಹತ್ತಿಮತ್ತೂರ ಮಂಟಗಣಿ ಮುಖ್ಯ ರಸ್ತೆಯಲ್ಲಿ ಸಿಡಿ ನಿರ್ಮಾಣದ ಕುರಿತು ತಾಪಂ ಸದಸ್ಯ ಫಕ್ಕೀರಗೌಡ ಕುಂದೂರ ಮಾಡಿದ ಪ್ರಸ್ತಾಪಕ್ಕೆ; ಅಧ್ಯಕ್ಷರು ಮಾತನಾಡಿ, ತಾಪಂ ಅನುದಾನದಲ್ಲಿ ಕಾಮಗಾರಿಯ ಕ್ರಿಯಾ ಯೋಜನೆ ತಯಾರಿಸಿ ಸಿಡಿ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಜಿಪಂ ರಸ್ತೆ ಮತ್ತು ಒಳಚರಂಡಿ ಇಲಾಖೆ ಅಧಿ ಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಬಿ.ಎಸ್‌. ಕಲಾಲ ಇಲಾಖೆ ಮಾಹಿತಿ ನೀಡಿ, ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಗೋವಿಜೋಳ ಬೆಳೆಗಾರರಿಗೆ 5 ಸಾವಿರ ರೂ. ಪರಿಹಾರ ಯೋಜನೆಗೆ ಸವಣೂರ ತಾಲೂಕಿನಲ್ಲಿ 11,159 ರೈತರು ನೀರಾವರಿ ಗೋವಿನಜೋಳ ಬೆಳೆಯನ್ನು ಬೆಳೆದಿದ್ದಾರೆ. ಅದರಲ್ಲಿ, 6517 ರೈತರ ಖಾತೆಗಳಿಗೆ ಪರಿಹಾರದ ಹಣ ಜಮೆ ಮಾಡಲಾಗಿದೆ. ಇನ್ನುಳಿದ ರೈತರ ಖಾತೆಗಳಲ್ಲಿ ತಾಂತ್ರಿಕ ತೊಂದರೆಯಿದೆ. ಅದನ್ನು ಸರಿಪಡಿಸಿ ಹಣ ಜಮೆ ಮಾಡಲಾಗುವದು ಎಂದರು.

Advertisement

ತಾಲೂಕಿನಲ್ಲಿ ಕೇವಲ 11,159 ರೈತರು ಮಾತ್ರ ನೀರಾವರಿ ಗೋವಿನಜೋಳ ಬೆಳೆ ಬೆಳೆದಿದ್ದಾರೆಯೇ? ಯಾವ ಆಧಾರದ ಮೇಲೆ ರೈತರನ್ನು ಗುರುತಿಸಿದ್ದೀರಿ. ಈ ಕುರಿತು ಸಮೀಕ್ಷೆಯ ಬಗ್ಗೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಸೂಚಿಸಿದ ಅಧ್ಯಕ್ಷರು, ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಬೆಳೆ ಸಮೀಕ್ಷೆ ಮಾಡಿದ ಖಾಸಗಿ ವ್ಯಕ್ತಿಗಳ ಬೇಜವಾಬ್ದಾರಿತನದಿಂದ ಗೋವಿನಜೋಳ ಬೆಳೆದ ಸಾವಿರಾರು ರೈತರು ಪರಿಹಾರದಿಂದ ವಂಚಿತರಾಗಿದ್ದಾರೆ ಎಂದು ಹರಿಹಾಯ್ದರು.

ಸಭೆಗೆ ಇನ್ನೂಳಿದ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ನಂತರ, ತಾಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮೀತಿ ಅಧ್ಯಕ್ಷರಾಗಿ ರತ್ನಾ ವಗ್ಗನವರ ಅವರು ಆಯ್ಕೆಯಾದರು. ಸಭೆಯಲ್ಲಿ ತಾಪಂ ಉಪಾದ್ಯಕ್ಷೆ ಜಯಶೀಲಾ ರೊಟ್ಟಿಗವಾಡ, ರತ್ನಾ ವಗ್ಗನವರ, ಸದಸ್ಯರಾದ ಬಸವರಾಜ ಕೋಳಿವಾಡ, ಬಸವರಾಜ ಕಳಸದ, ಸವಿತಾ ಬಿಜೂjರ, ಸಂಗೀತಾ ಪೂಜಾರ, ರೇಣವ್ವ ಬಾರ್ಕಿ, ಭಾರತಿ ಕುಂಭಾರ, ದುರ್ಗಪ್ಪ ಕಾಳೆ, ರೇಖಾ ಕಂಬಳಿ ಇಒ ಮುನಿಯಪ್ಪ ಪಿ., ಎಡಿ ಎಸ್‌.ಎಚ್‌.ಅಮರಾಪೂರ, ಮ್ಯಾನೇಜರ್‌ ಬಿ.ಎಸ್‌.ಚಿಕ್ಕಮಠ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next