Advertisement

ಮನಪಾ ಸಾಮಾನ್ಯ ಸಭೆ: ಕಾಂಗ್ರೆಸ್‌-ಬಿಜೆಪಿ ಮಾತಿನ ಚಕಮಕಿ

01:20 PM Feb 01, 2018 | |

ಮಹಾನಗರ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ನೀರಿನ ಸಂಪರ್ಕ ಕಡಿತ ಮಾಡುವಂತೆ, ಸ್ಕಿಲ್‌ ಗೇಮ್‌ ಸಹಿತ ಕಾನೂನು ಬಾಹಿರ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರೂ, ಅವರು ಈ ಬಗ್ಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೀಗಾಗಿ ಎಲ್ಲ ಕೆಲಸವನ್ನು ಮೇಯರ್‌
ಅವರೇ ಮಾಡುವ ಪರಿಸ್ಥಿತಿ ಬಂದಿದೆ ಎಂದು ಮಂಗಳೂರು ಮೇಯರ್‌ ಕವಿತಾ ಸನಿಲ್‌ ಅಧಿಕಾರಿಗಳ ವಿರುದ್ಧವೇ
ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಮಹಾನಗರ ಪಾಲಿಕೆಯಲ್ಲಿ ಬುಧವಾರ ನಡೆದ ಮನಪಾ ಸಾಮಾನ್ಯ ಸಭೆಯಲ್ಲಿ ವಿಪಕ್ಷದ ಆರೋಪಗಳಿಗೆ ಪ್ರತಿಕ್ರಿಯಿಸುತ್ತ ಮಾತನಾಡಿದ ಅವರು, ಮೇಯರ್‌ ಹುದ್ದೆಯಲ್ಲಿದ್ದ ನಾನು ಏನಿದ್ದರೂ ಸೂಚನೆ ನೀಡಬಹುದು. ಆದರೆ ಅದನ್ನು ಜಾರಿಗೊಳಿಸಬೇಕಾದದ್ದು ಅಧಿಕಾರಿಗಳು. ಕುಡಿಯುವ ನೀರಿನ ತೆರಿಗೆ, ಆಸ್ತಿ ತೆರಿಗೆ ಸಮರ್ಪಕವಾಗಿ ಕಟ್ಟಬೇಕು ಇಲ್ಲದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದರೂ ಕೂಡ ಅನುಷ್ಠಾನ ಆಗುತ್ತಿಲ್ಲ. ಹಾಗಾದರೆ, ಅಧಿಕಾರಿಗಳು ಏನು ಮಾಡುತ್ತಿದ್ದೀರಿ? ನೀರಿನ ಸಂಪರ್ಕ ಕಟ್‌ ಮಾಡಲು ಮೇಯರೇ ಬರಬೇಕಾ? ಪಾರ್ಕಿಂಗ್‌ ಜಾಗ ತೆರವುಗೊಳಿಸಲು ಕೂಡ ನಾನೇ ಬರಬೇಕಾ? ಎಂದು ಅಧಿಕಾರಿಗಳನ್ನೇ ಪ್ರಶ್ನಿಸಿದರು.

26 ಕೋಟಿ ರೂ. ಬಿಲ್‌ ಬಾಕಿ
ಗುತ್ತಿಗೆದಾರರಿಗೆ ಸರಿಯಾದ ಸಮಯದಲ್ಲಿ ಬಿಲ್‌ ಪಾವತಿಯಾಗದ ಹಿನ್ನೆಲೆಯಲ್ಲಿ ಪಾಲಿಕೆಯ ಟೆಂಡರ್‌ ವಹಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬಿಜೆಪಿ ಸದಸ್ಯರು ದೂರಿದರು. ಮೇಯರ್‌ ಪ್ರತಿಕ್ರಿಯಿಸಿ, ಪಾಲಿಕೆಯಲ್ಲಿ ನೀರಿನ ಹಾಗೂ ಆಸ್ತಿ ತೆರಿಗೆ ಸರಿಯಾಗಿ ಸಂಗ್ರಹವಾಗುತ್ತಿಲ್ಲ. ಪಾಲಿಕೆಗೆ ಆಸ್ತಿ ತೆರಿಗೆ ಸೇರಿದಂತೆ 70 ಕೋಟಿ ರೂ. ಸಂಗ್ರಹವಾಗಬೇಕಿದೆ. ಇದರಲ್ಲಿ ಕುಡಿಯುವ ನೀರಿನ ಬಿಲ್‌ ಈ ವರ್ಷ ಸುಮಾರು 26 ಕೋಟಿ ರೂ.ಗಳಷ್ಟು ಬಾಕಿಯಿದೆ. ಪಾಲಿಕೆ ಅಧಿಕಾರಿಗಳು ಬಡವರ 5,001 ಸಾವಿರ ರೂ. ಬಿಲ್‌ ಸಂಗ್ರಹಿಸುತ್ತಿದ್ದಾರೆಯೇ ಹೊರತು ದೊಡ್ಡ ದೊಡ್ಡ ಕುಳಗಳನ್ನು ಬಿಡುತ್ತಿದ್ದಾರೆ. ನಾನೊಬ್ಬಳು ಏನು ಮಾಡುವುದು? ಎಂದು ಪ್ರಶ್ನಿಸಿದರು.

ಅಧಿಕಾರಿಗಳನ್ನು ಅಮಾನತು ಮಾಡಿ
ಬಿಜೆಪಿ ಸದಸ್ಯರು ಮಾತನಾಡಿ, ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ ಎಂದಾದರೆ ಅದಕ್ಕೆ ಪಾಲಿಕೆಯ ಆಡಳಿತ ವೈಫ‌ಲ್ಯ ಕಾರಣ ಎಂದು ದೂರಿದರು. ಜೆಡಿಎಸ್‌ ಸದಸ್ಯ ಅಬ್ದುಲ್‌ ಅಜೀಜ್‌ ಮಾತನಾಡಿ, ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಿ. ಮೇಯರ್‌ ಯಾಕೆ ಅಧಿಕಾರಿಗಳು ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು. ಮೇಯರ್‌ ಕವಿತಾ ಸನಿಲ್‌ ಮಾತನಾಡಿ, ಮಾರ್ಚ್‌ ಅಂತ್ಯದೊಳಗೆ ನೀರಿನ ಬಿಲ್‌ ಮತ್ತು ಆಸ್ತಿ ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಡಿಬಿ ಮೊದಲ ಕಾಮಗಾರಿಯ ಪೂರ್ಣ ದಾಖಲೆ ಕೊಡಿ
ಮೊದಲ ಹಂತದ ಎಡಿಬಿ ಯೋಜನೆ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಕುರಿತು ಈಗಾಗಲೇ ನಾವು
ಪ್ರಸ್ತಾವಿಸಿದ್ದೇವೆ. ಎಡಿಬಿ ಯೋಜನೆಯ ಕುರಿತು ಹಸ್ತಾಂತರವಾದ ದಾಖಲೆಗಳ ವಿವರ ಕೊಡಿ ಎಂದು ಕಳೆದ ಸಭೆಯಲ್ಲಿ ಆಗ್ರಹಿಸಿದರೆ, ಕಡತ ಸಂಖ್ಯೆಗಳನ್ನು ಮಾತ್ರ ಈ ಬಾರಿಯ ಸಭೆಯಲ್ಲಿ ನೀಡಿದ್ದೀರಿ ಎಂದು ಮನಪಾ ವಿಪಕ್ಷ ನಾಯಕ ಗಣೇಶ್‌ ಹೊಸಬೆಟ್ಟು, ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್‌ ಶೆಟ್ಟಿ ಕಣ್ಣೂರು, ವಿಜಯ ಕುಮಾರ್‌ ಅವರು ಆಕ್ಷೇಪಿಸಿದರು.

Advertisement

ವೆಟ್‌ವೆಲ್‌ ನಂಬರ್‌ 7ರಲ್ಲಿ ನಾಲ್ಕು ಪಂಪ್‌ಗ್ಳಿದ್ದು, ಅದರಲ್ಲಿ ಮೂರು ಪಂಪ್‌ ಗಳು ಹಾಳಾಗಿ ಆರು ತಿಂಗಳುಗಳೇ ಕಳೆದಿವೆ. ಡ್ರೈನೇಜ್‌ ನೀರು ಮನೆಗಳಿಗೆ ನುಗ್ಗುತ್ತಿವೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ನ ಅಪ್ಪಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಅಧಿಕಾರಿ, ಪಂಪ್‌ ರಿಪೇರಿಗೆ ಮೈಸೂರು ಕಂಪನಿಯೊಂದರ ಸಿಬಂದಿ ಆಗಮಿಸಿದ್ದಾರೆ. 15 ದಿನಗಳಲ್ಲಿ ದುರಸ್ತಿ ಮಾಡಲಾಗುವುದು ಎಂದು ಉತ್ತರಿಸಿದರು.

ಬಿಜೆಪಿಯ ಪ್ರೇಮಾನಂದ ಶೆಟ್ಟಿ ಮಾತನಾಡಿ, ಪಾಲಿಕೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕಡತಗಳು ಆಯಕ್ತರ ಕೊಠಡಿಯಲ್ಲೇ ಕೊಳೆಯುತ್ತಿದೆ. ಗುತ್ತಿಗೆದಾರರಿಗೂ ಹಣ ಪಾವತಿಯಾಗುತ್ತಿಲ್ಲ. ಅಧಿಕಾರಿಗಳನ್ನು ಪ್ರಶ್ನಿಸಿದರೆ ಹಣದ ಕೊರತೆ ಇದೆ ಎನ್ನುತ್ತಾರೆ. ಪಾಲಿಕೆಯಲ್ಲಿ ಕೃತಕ ಆರ್ಥಿಕ ಅಭಾವ ಉಂಟಾಗಿದೆ ಎಂದು ದೂರಿದರು. ಕಾಂಗ್ರೆಸ್‌ ನ ಎ.ಸಿ.ವಿನಯ್‌ರಾಜ್‌ ಮಾತನಾಡಿ, ಬಂಟ್ಸ್‌ ಹಾಸ್ಟೆಲ್‌ ರಸ್ತೆ ಅಭಿವೃದ್ಧಿ ಕಾಮಗಾರಿ ಏಳು ತಿಂಗಳಾದರೂ ಆರಂಭವಾಗಿಲ್ಲ. ಪಾಲಿಕೆಯ 43 ಕಾಮಗಾರಿಗಳ ಪೈಕಿ 7 ಕಾಮಗಾರಿ ಮಾತ್ರ ಪ್ರಗತಿಯಲ್ಲಿದೆ ಎಂದರು. ಸುಧೀರ್‌ ಶೆಟ್ಟಿ ಮಾತನಾಡಿ, ಕ್ರೀಡಾ ಚಟುವಟಿಕೆಗೆ ಮಂಜೂರಾದ ಹಣ ಕೂಡ ಪಾವತಿಯಾಗಿಲ್ಲ ಎಂದರು.

ಉಪಮೇಯರ್‌ ರಜನೀಶ್‌, ಸ್ಥಾಯೀ ಸಮಿತಿ ಅಧ್ಯಕ್ಷರಾದ ಅಬ್ದುಲ್‌ ರವೂಫ್‌, ನಾಗವೇಣಿ, ಸಬಿತಾ ಮಿಸ್ಕಿತ್‌ ಉಪಸ್ಥಿತರಿದ್ದರು. ಸುಮಾರು 10 ಸೆಂಟ್ಸ್‌ ವರೆಗೆ ಏಕನಿವೇಶನ ಮಂಜೂರಾತಿ ನೀಡುವ ಅಧಿಕಾರವನ್ನು
ಮಂಗಳೂರು ಮಹಾನಗರಪಾಲಿಕೆಯೇ ಹೊಂದಿದೆ. 5-10 ಸೆಂಟ್ಸ್‌ ಜಾಗದಲ್ಲಿ ಮನೆ ಕಟ್ಟುವವರು ಮೂಡಾ
ಕಚೇರಿಗೆ ಅಲೆಡಾಡುವ ಅಗತ್ಯವಿಲ್ಲ. ಪಾಲಿಕೆಯಿಂದಲೇ ಒಪ್ಪಿಗೆ ಪಡೆಯಬಹುದು ಎಂದು ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌ ತಿಳಿಸಿದರು.

ಮನಪಾ; 60 ವಾರ್ಡ್‌ಗಳಿಗೆ 79.14 ಕೋ.ರೂ.
ತನ್ನ ವಾರ್ಡ್‌ನ ಅಭಿವೃದ್ಧಿಯಲ್ಲಿ ಪಾಲಿಕೆ ಆಡಳಿತ ನಿರ್ಲಕ್ಷಿಸುತ್ತಿದೆ ಎಂಬ ಬಿಜೆಪಿಯ ಸುಮಿತ್ರಾ ಕರಿಯ ಅವರ ಆಕ್ಷೇಪಕ್ಕೆ ಉತ್ತರಿಸಿದ ಮನಪಾ ಆಯುಕ್ತ ಮೊಹಮ್ಮದ್‌ ನಝೀರ್‌, ಮಹಾನಗರಪಾಲಿಕೆಯ ಎಲ್ಲ 60 ವಾರ್ಡ್‌ಗಳ ವಿವಿಧ ಅಭಿವೃದ್ಧಿ ಕಾಮಗಾರಿಗೆ ಒಟ್ಟು 79.14 ಕೋಟಿ ರೂ. ಮಂಜೂರಾಗಿದೆ. ಪಾಲಿಕೆಯ ಎಲ್ಲ ಸದಸ್ಯರಿಗೆ ತಮ್ಮ ವಾರ್ಡ್‌ ವಿವಿಧ ಕಾಮಗಾರಿಗೆ ವರ್ಷಕ್ಕೆ 50 ಲಕ್ಷ ರೂ. ಸದಸ್ಯ ನಿಧಿ ಒದಗಿಸಲಾಗುತ್ತಿದೆ. ಇದಲ್ಲದೆ ಎಲ್ಲ 60 ವಾರ್ಡ್‌ಗಳಿಗೆ 79.14 ಕೋಟಿ ರೂ. ಲಭ್ಯವಾಗಲಿದೆ ಎಂದರು. 

ಫಲ್ಗುಣಿ ಮಾಲಿನ್ಯ; ಪ್ರತಿಧ್ವನಿ
ಸಿಪಿಎಂನ ದಯಾನಂದ ಶೆಟ್ಟಿ ಮಾತನಾಡಿ, ಫಲ್ಗುಣಿ ನದಿ ನೀರು ಮತ್ತೆ ಕಲುಷಿತವಾಗುತ್ತಿದೆ. ಆಡಳಿತ ವ್ಯವಸ್ಥೆ
ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ಆಯುಕ್ತರು ಉತ್ತರಿಸಿ, ಫಲ್ಗುಣಿ ನದಿ ನೀರು ಮಾಲಿನ್ಯ ಕುರಿತು
ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಮಾಲಿನ್ಯದಲ್ಲಿ ಪಾಲಿಕೆಯ ಪಾಲು ಕೂಡ ಇದೆ ಎಂಬ ಬಗ್ಗೆ
ಹೇಳಲಾಗುತ್ತಿದೆ. ಡ್ರೈನೇಜ್‌ ವ್ಯವಸ್ಥೆ ಇಲ್ಲದ ಕಡೆಯ ಜೈವಿಕ ತ್ಯಾಜ್ಯಗಳು ನಾಳದ ಮೂಲಕ ಫಲ್ಗುಣಿ ನದಿ ಸೇರುತ್ತಿದೆ. ಹೊಸ ಡ್ಯಾಮ್‌ ನಿರ್ಮಿಸಿದ ಬಳಿಕ ಸಮಸ್ಯೆ ಆರಂಭವಾಗಿದೆ. ಬೃಹತ್‌ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿದೆ. ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಉಪ್ಪಿನ ಅಂಶ ಜಾಸ್ತಿಯಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next