Advertisement

Election commission: ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆ- 7 ಹಂತದಲ್ಲಿ ಮತದಾನ

06:38 PM Mar 16, 2024 | Team Udayavani |

ನವದೆಹಲಿ: ತೀವ್ರ ಕುತೂಹಲ ಕೆರಳಿಸಿರುವ 2024ರ 543 ಲೋಕಸಭಾ ಚುನಾವಣೆಯ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶನಿವಾರ (ಮಾರ್ಚ್‌ 16) ಘೋಷಿಸಿದೆ. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಲೋಕಸಭಾ ಚುನಾವಣೆ ನಡೆಸಲು ಆಯೋಗ ಸಿದ್ಧವಾಗಿದೆ ಎಂದು ತಿಳಿಸಿದೆ.

Advertisement

ದೇಶಾದ್ಯಂತ 7 ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ ಎಂದು ರಾಜೀವ್‌ ಕುಮಾರ್‌ ತಿಳಿಸಿದರು.

ಇದನ್ನೂ ಓದಿ: “ದೊಡ್ಡ ಸೌತ್‌ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್‌ ಜೊತೆ ಬೇಬೋ ನಟಿಸೋದು ಪಕ್ಕಾ?

ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ ಲೋಕಸಭಾ ಚುನಾವಣಾ ದಿನಾಂಕದ ವಿವರವನ್ನು ತಿಳಿಸಿದರು.

ಪ್ರಸ್ತುತ ಲೋಕಸಭೆಯ ಅವಧಿ ಜೂನ್‌ 16ರಂದು ಕೊನೆಗೊಳ್ಳಲಿದ್ದು, ಅದಕ್ಕೂ ಮೊದಲು ಕೇಂದ್ರದ ನೂತನ ಸರ್ಕಾರ ರಚನೆಯಾಗಬೇಕಾಗಿದೆ. ಈ ಸಂದರ್ಭದಲ್ಲಿ ಆಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಒಡಿಶಾ ವಿಧಾನಸಭೆಯ ಅವಧಿ ಕೂಡಾ ಮುಕ್ತಾಯಗೊಳ್ಳಲಿದ್ದು, ಇದರ ಚುನಾವಣೆ ಕೂಡಾ ಲೋಕಸಭೆ ಚುನಾವಣೆ ಜತೆಗೆ ನಡೆಯಲಿದೆ.

Advertisement

ದಿನಾಂಕ ಘೋಷಣೆ:

ಏಪ್ರಿಲ್‌ 19ರಂದು ಮೊದಲ ಹಂತದ ಮತದಾನ. ಏಪ್ರಿಲ್‌ 26 ಮತ್ತು ಮೇ 7ರಂದು ಕರ್ನಾಟಕದಲ್ಲಿ  ಮತದಾನ, ಮೇ 7ರಂದು ಮೂರನೇ ಹಂತ, ಮೇ 13 4ನೇ ಹಂತದ ಮತದಾನ, ಮೇ 20 5ನೇ ಹಂತ, ಮೇ 25 6ನೇ ಹಂತ, ಜೂನ್‌ 1 7ನೇ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಘೋಷಣೆ.

ಕರ್ನಾಟಕದ 14 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ಮತದಾನ (ಏಪ್ರಿಲ್‌ 26). ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದೆ.

ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶ, ಅಂಡಮಾನ್‌ ನಿಕೋಬಾರ್‌, ಆಂಧ್ರಪ್ರದೇಶ, ಚಂಡೀಗಢ್‌, ದಾದ್ರ ಹವೇಲಿ, ದೆಹಲಿ, ಗೋವಾ, ಗುಜರಾತ್‌, ಹಿಮಾಚಲ ಪ್ರದೇಶ, ಹರ್ಯಾಣ, ಕೇರಳ, ಲಕ್ಷದ್ವೀಪ, ಲಡಾಖ್‌, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್‌, ಪಾಂಡಿಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್‌, ತೆಲಂಗಾಣ, ಉತ್ತರಾಖಂಡ್‌ ನಲ್ಲಿ ಮತದಾನ ನಡೆಯಲಿದೆ.

ಕರ್ನಾಟಕ, ರಾಜಸ್ಥಾನ, ತ್ರಿಪುರಾ, ಮಣಿಪುರದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಚತ್ತೀಸ್‌ ಗಢ್, ಅಸ್ಸಾಂನಲ್ಲಿ ಮೂರು ಹಂತದಲ್ಲಿ ಮತದಾನ ನಡೆಯಲಿದೆ. ಒಡಿಶಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ ನಲ್ಲಿ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮಬಂಗಾಳದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

ಉಪ ಚುನಾವಣೆ ದಿನಾಂಕ ಘೋಷಣೆ

26 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಆಯೋಗ ದಿನಾಂಕ ಘೋಷಿಸಿದೆ. ಏಪ್ರಿಲ್‌ 19ರಂದು ಸಿಕ್ಕಿಂ ಉಪ ಚುನಾವಣೆ. ಮೇ 13 ಆಂಧ್ರಪ್ರದೇಶ ಉಪ ಚುನಾವಣೆ. ಏಪ್ರಿಲ್‌ 19 ಅರುಣಾಚಲ ಪ್ರದೇಶ ಉಪಚುನಾವಣೆ. ಮೇ 25ರಂದು ಒಡಿಶಾ ವಿಧಾನಸಭಾ ಚುನಾವಣೆ.

ಮುಖ್ಯಾಂಶಗಳು:

*ದೇಶಾದ್ಯಂತ ಈವರೆಗೆ 400 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿದೆ.

*ದೇಶಾದ್ಯಂತ 10.5 ಲಕ್ಷ ಮತಗಟ್ಟೆಗಳ ಸ್ಥಾಪನೆ

*ದೇಶದಲ್ಲಿ ಒಟ್ಟು 97 ಕೋಟಿ ಮತದಾರರಿದ್ದಾರೆ.

*ಈ ಬಾರಿ 1.82 ಕೋಟಿ ಜನರು ಮೊದಲ ಬಾರಿ ಮತ ಚಲಾಯಿಸಲಿದ್ದಾರೆ.

*1.5 ಕೋಟಿ ಭದ್ರತಾ ಸಿಬಂದಿ, ಅಧಿಕಾರಿಗಳ ನೇಮಕ

*ಮತದಾನಕ್ಕೆ ಒಟ್ಟು 55 ಲಕ್ಷ ಇವಿಎಂಗಳ ಬಳಕೆ

*49.7 ಕೋಟಿ ಪುರುಷ ಮತದಾರರಿದ್ದಾರೆ

*47.1 ಕೋಟಿ ಮಹಿಳಾ ಮತದಾರರಿದ್ದಾರೆ.

*85 ವರ್ಷ ಮೇಲ್ಪಟ್ಟ 82 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ.

*20ರಿಂದ 29 ವರ್ಷದೊಳಗಿನ 19.74 ಕೋಟಿ ಯುವ ಮತದಾರರು ಮತ ಚಲಾಯಿಸಲಿದ್ದಾರೆ.

*12 ರಾಜ್ಯಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚು

*48 ಸಾವಿರ ತೃತೀಯ ಲಿಂಗಿ ಮತದಾರರು ಮತ ಚಲಾಯಿಸಲಿದ್ದಾರೆ.

*ಮತಗಟ್ಟೆಗಳಲ್ಲಿ ಹೆಲ್ಫ್‌ ಡೆಸ್ಕ್‌, ವ್ಹೀಲ್‌ ಚೇರ್‌ ವ್ಯವಸ್ಥೆ.

*ಈ ಬಾರಿ 2.18 ಲಕ್ಷ ಶತಾಯುಷಿ ಮತದಾರರು ಮತ ಚಲಾಯಿಸಲಿದ್ದಾರೆ.

*ಬಾರ್ಡರ್‌ ಗಳಲ್ಲಿ ಡ್ರೋನ್‌ ಮೂಲಕ ಕಣ್ಗಾವಲು

*ಪ್ರತಿ ಜಿಲ್ಲೆಯಲ್ಲಿ ಕಂಟ್ರೋಲ್‌ ರೂಂ

*ಅಕ್ರಮವಾಗಿ ಹಣ ಸಾಗಿಸಿದರೆ ಕಠಿನ ಕ್ರಮ

*ಕುಕ್ಕರ್‌, ಮದ್ಯ, ಹಣ ಹಂಚುವಂತಿಲ್ಲ.

*ಚುನಾವಣಾ ಪ್ರಚಾರದ ವೇಳೆ ಹಲವಾರು ಷರತ್ತು ವಿಧಿಸಲಾಗುವುದು

*ವೈಯಕ್ತಿಕವಾಗಿ ಟೀಕೆ ಮಾಡುವಂತಿಲ್ಲ

*ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವಂತಿಲ್ಲ

* ಅಭ್ಯರ್ಥಿಗಳು ಮತದಾರರನ್ನು ಪ್ರಚೋದಿಸುವಂತಿಲ್ಲ.

*ದೇಶದ 26 ರಾಜ್ಯಗಳಲ್ಲಿ ವಿಧಾನಸಭೆಯ ಉಪ  ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next