Advertisement
ಶಿವಮ್ಮ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಬೆಳಗ್ಗೆ 11 ಗಂಟೆಗೆ ಜಿಪಂ ಸಭಾಂಗಣದಲ್ಲಿ ಜಿಪಂ ಸಾಮಾನ್ಯ ಸಭೆ ಆರಂಭವಾಯಿತು. ಅಧ್ಯಕ್ಷೆ ಶಿವಮ್ಮ, ಪ್ರತಿಪಕ್ಷದ ಬಿಜೆಪಿಯ ಸದಸ್ಯರು, ಸಿಇಒ ಬಿ.ಎಚ್. ನಾರಾಯಣರಾವ್ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಗೆ ಹಾಜರಾಗಿದ್ದರು.
ಈಗ ಪಕ್ಷ ನಿಷ್ಠೆ ತೋರುತ್ತಿಲ್ಲ: ಶಿವಮ್ಮ ಅವರು ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷರಾದರು. ಈಗ ಪಕ್ಷ ನಿಷ್ಠೆ ತೋರುತ್ತಿಲ್ಲ. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷ ಹಾಗೂ ಜಿಪಂ ಬಗ್ಗೆ ಗೌರವವಿದ್ದರೆ ಕೂಡಲೇ ರಾಜೀನಾಮೆ ನೀಡಬೇಕು. ಶಿವಮ್ಮ ಅವರು ವೈಯಕ್ತಿಕ ಕೆಲಸಕ್ಕೆ ಸರ್ಕಾರಿ ಕಾರನ್ನು ಬಳಕೆ ಮಾಡಿದ್ದಾಗ ಅದು ಅಪಘಾತಕ್ಕೆ ಈಡಾಗಿ ಜಖಂಗೊಂಡಿದೆ. 18 ತಿಂಗಳಿನಿಂದ ಕಾರು ಗ್ಯಾರೇಜಿನಲ್ಲಿ ನಿಂತಿದ್ದು, ದುರಸ್ತಿ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು. ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.
Related Articles
Advertisement
3 ತಿಂಗಳಿಂದ ರಾಜೀನಾಮೆಗೆ ಒತ್ತಾಯ: ತಮ್ಮ ಕಚೇರಿಯತ್ತ ತೆರಳಿದ ಅಧ್ಯಕ್ಷರ ವಿರುದ್ಧ ಸದಸ್ಯರು ಘೋಷಣೆಗಳನ್ನು ಕೂಗುತ್ತ ಅವರನ್ನು ಹಿಂಬಾಲಿಸಿದರು. ಶಿವಮ್ಮ ನಂತರ ಆಧ್ಯಕ್ಷೆಯಾಗಬೇಕಿದ್ದ ತೆರಕಣಾಂಬಿ ಸದಸ್ಯೆ ಅಶ್ವಿನಿ ಅವರು ತೀವ್ರ ಆಕ್ರೋಶಭರಿತರಾಗಿ ಥೂ, ಥೂ ಎಂದು ಛೀಮಾರಿ ಹಾಕಿದ ಪ್ರಸಂಗವೂ ನಡೆಯಿತು. ಅಧ್ಯಕ್ಷರು ತಮ್ಮ ಕಚೇರಿಯೊಳಗೆ ಪ್ರವೇಶಿಸುತ್ತಿಂತೆ ಬಾಗಿಲು ಹಾಕಿ ದಿಗ್ಬಂಧನ ವಿಧಿಸಿ ಸದಸ್ಯರು ಧರಣಿ ಕುಳಿತರು.
ರಾಜೀನಾಮೆ ನೀಡುವಂತೆ 3 ತಿಂಗಳಿಂದಲೂ ಒತ್ತಾಯ ಮಾಡುತ್ತಿರೂ ಸುಮ್ಮನಿದ್ದಾರೆ. ಈಚೆಗೆ ಜಿಪಂಗೆ ಸರ್ಕಾರ ಒಂದು ಕೋಟಿ ರೂ. ಅನುದಾನ ಬಂದಿದೆ. ತಮ್ಮ ವಿವೇಚನಾಧಿಕಾರ ಬಳಸಿ ತಮ್ಮ ಕ್ಷೇತ್ರಕ್ಕೆ 65 ಲಕ್ಷ ರೂ. ಬಳಸಲು ಮುಂದಾಗಿದ್ದಾರೆ. ಇದು ಸರಿಯಾದ ನಡೆಯಲ್ಲ ಎಂದು ಕಿಡಿಕಾರಿದರು.
ಕಾರಿನ ದುರಸ್ತಿ ವೆಚ್ಚ ವಸೂಲಿ ಮಾಡಿ: ಜಿಲ್ಲಾ ಪಂಚಾಯ್ತಿ ಇತಿಹಾಸದಲ್ಲೇ ಇಂತಹ ಅಧ್ಯಕ್ಷರನ್ನು ಕಾಂಗ್ರೆಸ್ ಕಂಡಿಲ್ಲ. ಕಾರು ಅಪಘಾತದ ಹಿನ್ನೆಲೆಯಲ್ಲಿ ತಡೆಹಿಡಿದ ಗೌರವಧನ, ಭತ್ಯೆ ಬಾಬ್ತು 6.45 ಲಕ್ಷ ರೂ. ಬಿಡುಗಡೆ ಆಗಿದೆ. ಅಪಘಾತಕ್ಕೆ ಈಡಾದ ಕಾರಿನ ದುರಸ್ತಿ ವೆಚ್ಚವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಪಟ್ಟು ಹಿಡಿದು ಧರಣಿ ಮುಂದುವರಿಸಿದರು.
ವರದಿ ಸರ್ಕಾರಕ್ಕೆ ಸಲ್ಲಿಸಿ: ಸ್ಥಳಕ್ಕೆ ಆಗಮಿಸಿದ ಸಿಇಒ ಬಿ.ಎಚ್. ನಾರಾಯಣರಾವ್ ಅವರನ್ನು ಉದ್ದೇಶಿಸಿ ಮಾತನಾಡಿದ ಸದಸ್ಯರು, ಈ ಎಲ್ಲ ಘಟನಾವಳಿಗಳ ಬಗ್ಗೆ ವರದಿಯನ್ನು ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು. ಸ್ಥಾಯಿ ಸಮಿತಿ ಸದಸ್ಯರ ಗಮನಕ್ಕೆ ತಂದು ಮುಂದಿನ ಸಭೆ ನಡೆಸಬೇಕು ಎಂದು ತಿಳಿಸಿದರು. ಇದಕ್ಕೆ ಸಿಇಒ ಅವರು ಒಪ್ಪಿದ ನಂತರ ಸದಸ್ಯರ ಧರಣಿ ಅಂತ್ಯಗೊಳಿಸಿದರು. ಧರಣಿಯಲ್ಲಿ ಜಿಪಂ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಸದಸ್ಯರಾದ ಬರಗಿ ಚೆನ್ನಪ್ಪ, ಬೊಮ್ಮಯ್ಯ, ರಮೇಶ್, ಕೆರೆಹಳ್ಳಿ ನವೀನ್, ಬಸವರಾಜು, ಶಶಿಕಲಾ, ಉಮಾವತಿ, ಲೇಖಾ, ಮರಗತಮಣಿ ಪಾಲ್ಗೊಂಡಿದ್ದರು.