ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಮೂವರು ಸಚಿವರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ವಿಧಾನಸೌಧ ಮತ್ತು ವಿಕಾಸ ಸೌಧದಲ್ಲಿ ಕಚೇರಿ ನಡೆಸಲು ಕೊಠಡಿಗಳನ್ನು ನೀಡಿದೆ.
ಸಾರಿಗೆ ಸಚಿವ ಎಚ್.ಎಂ.ರೇವಣ್ಣಗೆ ವಿಕಾಸಸೌಧದ ಮೂರನೇ ಮಹಡಿಯಲ್ಲಿರುವ ರೂಂ ನಂ.342 ಮತ್ತು 343 ಕೊಠಡಿಗಳನ್ನು ನೀಡಲಾಗಿದೆ. ಈ ಹಿಂದೆ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂಗೆ ಈ ಕೊಠಡಿ ನೀಡಲಾಗಿತ್ತು. ಅವರ ರಾಜೀನಾಮೆಯಿಂದ ಕೊಠಡಿ ತೆರವಾಗಿತ್ತು.
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರಿಗೆ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ 343 ಮತ್ತು 343ಎ ಕೊಠಡಿಗಳನ್ನು ನೀಡಲಾಗಿದೆ. ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ವಿಕಾಸ ಸೌಧಕ್ಕೆ ತಮ್ಮ ಕಚೇರಿಯನ್ನು ಸ್ಥಳಾಂತರಿಸಿದ್ದರಿಂದ ಈ ಕೊಠಡಿಗಳು ಖಾಲಿಯಾಗಿದ್ದವು.
ಇನ್ನು ಗೀತಾ ಮಹದೇವ ಪ್ರಸಾದ್ ಅವರಿಗೆ ವಿಧಾನ ಸೌಧದ ಮೂರನೇ ಮಹಡಿಯಲ್ಲಿರುವ 328 ಮತ್ತು 328ಎ ಕೊಠಡಿಗಳನ್ನು ನೀಡಲಾಗಿದೆ. ಈ ಹಿಂದೆ ಮಹದೇವ ಪ್ರಸಾದ್ ಅವರಿಗೆ ಇದೇ ಕೊಠಡಿಗಳನ್ನು ನೀಡಲಾಗಿತ್ತು. ಈಗ ಅವರ ಪತ್ನಿ ಗೀತಾ ಮಹದೇವ ಪ್ರಸಾದ್ ಅವರಿಗೂ ಅದೇ ಕೊಠಡಿಯನ್ನು ನೀಡಲಾಗಿದೆ.
ಗೀತಾ ಮಹದೇವ ಪ್ರಸಾದ ಅವರು ಮಹದೇವ ಪ್ರಸಾದ್ ಬಳಸುತ್ತಿದ್ದ ಕಾರು ಮತ್ತು ಅವರಿಗೆ ಸೆವೆನ್ ಮಿನಿಸ್ಟರ್ ಕ್ವಾಟರ್ನಲ್ಲಿ ನೀಡಿದ್ದ ಬಂಗಲೆಯನ್ನೇ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.