Advertisement

ರಿಯಲ್‌ನಲ್ಲೂ ಈಕೆ ಸಿಂಹಿಣಿ !

12:03 AM Aug 21, 2022 | Team Udayavani |

ಬಾಲಿವುಡ್‌ ನಟಿಯರಾದ ಐಶ್ವರ್ಯಾ ರೈ, ಕರೀನಾ ಕಪೂರ್‌, ಪರಿಣಿತಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್‌ ಮುಂತಾದವರು ಸಿನೆಮಾಗಳಲ್ಲಿ ಬೈಕ್‌, ಕಾರ್‌ ಚೇಸ್‌ ಮಾಡುವಾಗ, ಬಿಲ್ಡಿಂಗ್‌ನಿಂದ ಜಿಗಿಯುವಾಗ, ಫೈಟ್‌ ಮಾಡುವಾಗ ಬೆರಗಾಗಿ ನೋಡುತ್ತೇವೆ. ಸೂಪರ್‌ ಸ್ಟಂಟ್‌ ಎಂದು ಉದ್ಗರಿಸು ತ್ತೇವೆ. ವಾಸ್ತವ ಏನೆಂದರೆ- ಸ್ಟಂಟ್‌ ದೃಶ್ಯಗಳಲ್ಲಿ ನಾಯಕಿಯರು ಭಾಗವಹಿಸುವುದಿಲ್ಲ! ಅವರಿಗೆ ಡ್ಯೂಪ್‌ ಆಗಿ ಸಾಹಸ ಪ್ರದರ್ಶಿಸುವ ಗೀತಾ ಟಂಡನ್‌ ಎಂಬ ಹೆಣ್ಣುಮಗಳ ಯಶೋಗಾಥೆ ಇಲ್ಲಿದೆ.

Advertisement

ರೀಲ್‌ ಲೈಫ್ ನಲ್ಲಿ ಸಾಹಸ ಪ್ರದರ್ಶಿಸುವ ಈಕೆ, ರಿಯಲ್‌ ಲೈಫ್ನಲ್ಲಿ ಇನ್ನೂ ಹೆಚ್ಚಿನ ಸಾಹಸ ಪ್ರದರ್ಶಿಸಿದ್ದಾರೆ. ನಿಸ್ಸಂಶಯವಾಗಿ ಈಕೆ ಈ ಶತಮಾನದ ಮಾದರಿ ಹೆಣ್ಣು. ಕಲ್ಲು-ಮುಳ್ಳಿನ ಮಧ್ಯೆ ಅರಳಿದ ತಮ್ಮ ಬಾಳಕಥೆಯನ್ನು ಹೇಳಿಕೊಂಡದ್ದು ಹೀಗೆ:
****
“ನಮ್ಮಮ್ಮ ದಿಲ್ಲಿಯವರು. ಅಪ್ಪನದು ಪಂಜಾಬ್‌. ಮದುವೆಯ ಅನಂತರ ಅವರು ಮುಂಬಯಿಗೆ ಶಿಫ್ಟ್ ಆದರು. ದೇವಸ್ಥಾನಗಳಲ್ಲಿ ಭಜನೆ-ಭಕ್ತಿಗೀತೆ ಹಾಡು ವುದು ಅಪ್ಪನ ವೃತ್ತಿಯಾಗಿತ್ತು. ಅದರಿಂದ ಸಿಗುತ್ತಿದ್ದ ಪುಡಿಗಾಸಿನಲ್ಲೇ ಅಮ್ಮ ಸಂಸಾರ ನಿಭಾಯಿಸುತ್ತಿದ್ದಳು. ನಾವು ನಾಲ್ವರು ಮಕ್ಕಳು.

ನಾನು 7 ವರ್ಷದವಳಿದ್ದಾಗಲೇ ಅಮ್ಮ ಇದ್ದಕ್ಕಿದ್ದಂತೆ ಸತ್ತುಹೋದಳು.ಆ ಕ್ಷಣದಿಂದಲೇ ನಮಗೆ ಕಷ್ಟಗಳು ಜತೆಯಾದವು. ಮಕ್ಕಳನ್ನು ನೋಡಿಕೊಳ್ಳುವವರಿಲ್ಲ ಎಂದು ಅಪ್ಪ ಮತ್ತೆ ದಿಲ್ಲಿಗೆ ವಾಸ್ತವ್ಯ ಬದಲಿಸಿದರು. ನಮಗೆ ಉಳಿಯಲು ಮನೆಯಿರಲಿಲ್ಲ. ಬಂಧುಗಳ ಮನೆಯಲ್ಲಿ ದನ ಕಾಯುವ, ಹೊಲ ಗದ್ದೆ ಯಲ್ಲಿ ದುಡಿಯುವ ಕೆಲಸ ಮಾಡಿದೆವು. ಸ್ವಲ್ಪ ದಿನಗಳ ನಂತರ ಬಂಧುಗಳು- “ನೀವು ಬೇರೆಲ್ಲಾದ್ರೂ ಉಳಿಯಲು ವ್ಯವಸ್ಥೆ ಮಾಡ್ಕೊಳ್ಳಿ’ ಎಂದು ಅಪ್ಪನಿಗೆ ನೇರವಾಗಿ ಹೇಳುತ್ತಿದ್ದರು.

ಮುಂಬಯಿಯಲ್ಲಿ ನಮ್ಮ ಸೋದರತ್ತೆ ಇದ್ದರು. ಅಲ್ಲಿರೋಣ ಎಂದ ಅಪ್ಪ ಮತ್ತೆ ಮುಂಬಯಿಗೆ ಕರಕೊಂಡು ಬಂದರು.

ಹೆಣ್ಣಿಗೆ ಹೆಣ್ಣೇ ಶತ್ರು ಎಂಬ ಮಾತಿಗೆ ಸಾಕ್ಷಿಯಾದವರು ನಮ್ಮ ಸೋದರತ್ತೆ. ಆಕೆ ನಮ್ಮನ್ನು ಮನೆ ಕೆಲಸಕ್ಕೆ ಬಳಸಿಕೊಂಡರು. ನಮಗೆ ಸರಿಯಾಗಿ ಊಟವನ್ನೂ ಕೊಡುತ್ತಿರಲಿಲ್ಲ. ದೇವಸ್ಥಾನದಲ್ಲಿ ಹಾಡಿದಾಗ ಅಲ್ಲಿ ಸಿಗುತ್ತಿದ್ದ ಸಿಹಿಯನ್ನು ಅಪ್ಪ ಮನೆಗೆ ತರುತ್ತಿದ್ದರು. ಅದನ್ನೂ ಅತ್ತೆ ಕೊಡುತ್ತಿರಲಿಲ್ಲ. ಶುಗರ್‌ ಇದ್ದುದರಿಂದ ಆಕೆಯೂ ತಿನ್ನುವಂತಿರಲಿಲ್ಲ. ಬೂಸ್ಟ್ ಬರುವವರೆಗೂ ಹಾಗೇ ಇಟ್ಟಿರುತ್ತಿದ್ದರು. ನಾನು ಆ ಬೂಸ್ಟ್ ನ ತೆಗೆದು ಹಾಕಿ ಮಿಕ್ಕಿದ್ದನ್ನು ತಿನ್ನುತ್ತಿದ್ದೆ. ದಿಲ್ಲಿಯಲ್ಲಿ ಇದ್ದಾಗ ಕೆಲವೊಮ್ಮೆ ಹಸಿವು ತಡೆಯಲು ಆಗದೆ ನಮ್ಮ ಅಕ್ಕ-ಒಣಗಿಸಲು ಇಟ್ಟಿರುತ್ತಿದ್ದ ಹಪ್ಪಳ, ಸಂಡಿಗೆಯನ್ನು ಎತ್ತಿಕೊಂಡು ಬರುತ್ತಿದ್ದಳು. ಅದನ್ನು ಕಂಡವರು ಅವಳಿಗೆ ನಾಲ್ಕೇಟು ಹಾಕಿ, ಹಪ್ಪಳ ಕಿತ್ತುಕೊಂಡು ಕಳಿಸುತ್ತಿದ್ದರು. ಆ ಕಷ್ಟಗಳು ಮುಂಬಯಿ ಯಲ್ಲಿ ಇರೋದಿಲ್ಲ ಅನ್ನುವುದು ನಮ್ಮ ಅನಿಸಿಕೆ ಯಾಗಿತ್ತು. ಆದ್ರೆ ಇಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು.

Advertisement

ಹಸಿವು ತಡೆಯಲು ಆಗಲ್ಲ ಅನ್ನಿಸಿದಾಗ, ನೆರೆಹೊರೆ ಯವರಿಗೆ ಮೆಡಿಸಿನ್‌, ಹಾಲು, ರೇಷನ್‌ ತಂದುಕೊಡು ವುದು, ಡೆಕೋರೇಷನ್‌ ಮಾಡಲು ಹೋಗುವುದು ಮುಂತಾದ ಕೆಲಸ ಮಾಡ್ತಿದ್ದೆ. ಆಗ ಟಿಪ್ಸ್ ಥರ ಸಿಗುವ ಹಣದಿಂದ ಏನಾದ್ರೂ ತಿಂಡಿ ತಂದು ಎಲ್ಲಾರಿಗೂ ಕೊಡುತ್ತಿದ್ದೆ. ಹುಡುಗರ ಜತೆ ಹರಟುತ್ತಾ ಕೆಲಸ ಮಾಡ್ತಿದ್ದೆ. ಅದನ್ನು ಗಮನಿಸಿದ ಅತ್ತೆ- “ಇವಳು ಗಂಡುಬೀರಿ. ಬೀದಿಯ ಹುಡುಗರೆಲ್ಲ ಇವಳ ಫ್ರೆಂಡ್ಸ್. ಹೀಗೇ ಬಿಟ್ರೆ ಮನೆಗೆ ಕೆಟ್ಟ ಹೆಸರು ತರ್ತಾಳೆ. ಬೇಗ ಮದ್ವೆ ಮಾಡಿ ಕಳಿಸಿಬಿಡು’ ಎಂದು ಅಪ್ಪನ ಕಿವಿ ಕಚ್ಚಿದರು. ಆ ಮಾತನ್ನು ಅಪ್ಪ ಕಣ್ಮುಚ್ಚಿಕೊಂಡು ಪಾಲಿಸಿದರು! ಪರಿಣಾಮ, 15ನೇ ವಯಸ್ಸಿಗೇ, ನಮ್ಮ ಮನೆಗೆ ಹತ್ತಿರದಲ್ಲೇ ಇದ್ದ ವ್ಯಕ್ತಿಯೊಂದಿಗೆ ನನ್ನ ಮದುವೆಯಾಯಿತು.

ಆದ್ರೆ ನನ್ನ ಗಂಡ, ಹೆಂಡತಿಯನ್ನು ಭೋಗದ ವಸ್ತು ಅಂದುಕೊಂಡಿದ್ದ. ಅನುಮಾನದ ಪ್ರಾಣಿಯಾಗಿದ್ದ. ಯಾರಾದರೂ ಗಂಡಸರೊಂದಿಗೆ ಮಾತಾಡಿದರೆ- ಅವರೊಂದಿಗೆ ಏನು ಮಾತು? ಅವರಿಗೂ ನಿನಗೂ ಏನು ಸಂಬಂಧ ಎಂದು ಪ್ರಶ್ನೆ ಹಾಕುತ್ತಿದ್ದ. ಸಣ್ಣಪುಟ್ಟ ಕಾರಣಕ್ಕೆಲ್ಲ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದ. ಅತ್ತೆ, ನನ್ನನ್ನು ಬಿಡಿಸಿಕೊಳ್ಳುವ ಬದಲು-“ಅವಳಿಗೆ ಚೆನ್ನಾಗಿ ಬಾರ್ಸು, ಬುದ್ಧಿ ಬರ್ಲಿ’ ಅನ್ನುತ್ತಿದ್ದರು! ಈ ಮಧ್ಯೆ 18 ತುಂಬುವಷ್ಟರಲ್ಲಿ ನನಗಿಬ್ಬರು ಮಕ್ಕಳಾದರು. ಅನಂತರವಾದರೂ ಹಿಂಸೆ ಕಡಿಮೆಯಾಗಲಿಲ್ಲ. ಮತ್ತಷ್ಟು ಹೆಚ್ಚಿತು. ಅದರಿಂದ ಬೇಸತ್ತು ಸೋದರಿಯ ಮನೆಗೆ ಹೋದರೆ, ನನ್ನ ಗಂಡ ಅಲ್ಲಿಗೆ ಬಂದು ಕ್ಷಮೆ ಕೇಳುತ್ತಿದ್ದ. ವಾಪಸ್‌ ಮನೆಗೆ ಬಂದ ತತ್‌ಕ್ಷಣ- ನಮ್ಮ ಮನೆ ಸುದ್ದೀನ ಊರಿಗೆಲ್ಲಾ ಹೇಳ್ಕೊಂಡು ಬರ್ತೀಯ ಎಂದು ಹೊಡೆಯು ತ್ತಿದ್ದ. ಈ ಬಗೆಯ ಹಿಂಸೆ ಅತೀ ಅನ್ನಿಸಿದಾಗ ದಿಕ್ಕು ತೋಚದೆ ಪೊಲೀಸ್‌ ಠಾಣೆಗೆ ಹೋದೆ. “ಸಂಸಾರದ ಜಗಳ ಮನೆಯೊಳಗೇ ಬಗೆಹರಿಯಬೇಕು. ಅದನ್ನು ತಗೊಂಡು ಇಲ್ಲಿಗೆ ಬಂದಿದ್ದೀಯಾ, ಹೋಗ್‌ ಹೋಗು’ ಎಂದು ಪೊಲೀಸರು ಜೋರು ಮಾಡಿದರು. ಈ ಹಿಂಸೆ, ಕಷ್ಟ ಕೊನೆಯಾಗೋದಿಲ್ಲ ಅನ್ನಿಸಿದಾಗ, ನನಗೆ ನಾನೇ ಹೇಳಿಕೊಂಡೆ: “ಈ ಮನೆಯಿಂದ ತತ್‌ಕ್ಷಣ ಎದ್ದು ಹೋಗಬೇಕು. ನನ್ನ ಅನ್ನ ನಾನು ದುಡಿದು ಗೌರವದ ಬದುಕು ನಡೆಸ್ಬೇಕು. ಮಕ್ಕಳನ್ನು ಚೆನ್ನಾಗಿ ಓದಿಸ್ಬೇಕು’ಅವತ್ತಿನವರೆಗೂ ನಾನು ಒಂಟಿಯಾಗಿ ಪ್ರಯಾಣಿಸಿರಲಿಲ್ಲ.

ಈಗ 2 ಮಕ್ಕಳ ಜತೆ ರೈಲು ಹತ್ತಿ ಮುಂಬಯಿಯ ಇನ್ನೊಂದು ತುದಿಯಾಗಿದ್ದ ವಾಶಿಗೆ ಬಂದಿದ್ದೆ . ಹತ್ತಾರು ಮಂದಿಗೆ ಸಂಕೋಚ-ಸಂಕಟದಿಂದ ನನ್ನ ಕಥೆ ಹೇಳಿ ಕೊಂಡೆ. ಆಶ್ರಯ ಕೊಡಿ, ಕೆಲಸ ಕೊಡಿ ಎಂದು ಕೇಳಿ ಕೊಂಡೆ. ಮನೆಯಿಲ್ಲದ್ದರಿಂದ ಹಲವು ದಿನ ಗುರುದ್ವಾರದಲ್ಲೇ ಆಶ್ರಯ ಪಡೆದೆ. ಇದು 2006ರ ಮಾತು. ಆಗಲೇ, ದಿನಕ್ಕೆ 250 ರೊಟ್ಟಿ ಬೇಯಿಸಿದರೆ, ಮಾಸಿಕ 1200 ರೂ. ಸಂಬಳದ ಕೆಲಸ ಸಿಕ್ಕಿತು. ಕುಟುಂಬ ನಿರ್ವಹಣೆಗೆ ಈ ಹಣ ಸಾಲದು ಅನ್ನಿಸಿದಾಗ, ಸಿನೆಮಾಗಳಲ್ಲಿ ಡ್ಯಾನ್ಸ್ ಮಾಡುವ ತಂಡ ಸೇರಿಕೊಂಡೆ. ಅಲ್ಲಿ ಸಿಗುವ ಊಟವನ್ನು ಮನೆಗೂ ತರುತ್ತಿದ್ದೆ. ಈ ಮಧ್ಯೆ ಸ್ಪಾಗಳಲ್ಲಿ ಪಾದದ ಮಸಾಜ್‌ ಮಾಡುವ ಕೆಲಸಕ್ಕೂ ಹೋದೆ. ಜಾಸ್ತಿ ಸಂಪಾದನೆ ಮಾಡಿ ಒಳ್ಳೆಯ ಮನೆ ಮಾಡಬೇಕು, ಮಕ್ಕಳನ್ನು ಒಳ್ಳೆಯ ಸ್ಕೂಲ್‌ಗೆ ಸೇರಿಸ್ಬೇಕು ಅನ್ನುವ ಆಸೆ ನನ್ನದಿತ್ತು. ಹಾಗಾಗಿ ಎಲ್ಲ ಕೆಲಸ ಮಾಡಲು ರೆಡಿಯಿ¨ªೆ. ಮಸಾಜ್‌ ಪಾರ್ಲರ್‌ನಲ್ಲಿ ಅನೈತಿಕ ವ್ಯವಹಾರ ಕೂಡ ನಡೆಯುತ್ತೆ ಎಂದು ತಿಳಿದಾಗ ಅಲ್ಲಿಂದ ದೂರವಾದೆ. 2008ರಲ್ಲಿ ಅದೊಮ್ಮೆ, ಶೂಟಿಂಗ್‌ ನಲ್ಲಿ ಡ್ಯಾನ್ಸ್ ಮುಗಿದ ಅನಂತರ, ತನ್ನ ತಹತಹ ಗಮನಿಸಿದ ಮಹಿಳೆಯೊಬ್ಬರು ಕೇಳಿದರು: “ಸಿನೆಮಾದಲ್ಲಿ ಸ್ಟಂಟ್ಸ್‌ ಮಾಡುವ ಕೆಲಸ ಇದೆ. ಒಳ್ಳೆಯ ಸಂಬಳ ಕೊಡ್ತಾರೆ. ಮಾಡ್ತೀಯಾ?’ ನನಗೆ ಬೈಕ್‌ ಓಡಿಸಲು ಗೊತ್ತಿತ್ತು. ಕಾರ್‌ ಡ್ರೈವಿಂಗ್‌ ಗೊತ್ತಿರಲಿಲ್ಲ. ಕೈತುಂಬಾ ಕಾಸು ಸಿಗುತ್ತೆ ಎಂಬ ಆಸೆಗೆ ಐದೇ ದಿನದಲ್ಲಿ ಡ್ರೈವಿಂಗ್‌ ಕಲಿತೆ! ನನ್ನ ಬದುಕಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೇ ಇಲ್ಲಿಂದ.

ಹಾಗಂತ ನನ್ನ ಸಿನೆಮಾ ಜರ್ನಿ ಹೂವಿನ ಹಾಸಿಗೆ ಆಗಿಲ್ಲ. ಇಲ್ಲೂ ಕಲ್ಲು-ಮುಳ್ಳುಗಳಿವೆ. ಲಡಾಖ್‌ನಲ್ಲಿ ಜಾಹೀರಾತಿನ ಶೂಟಿಂಗ್‌ ವೇಳೆ “ಅಗ್ನಿ ಆಕಸ್ಮಿಕ’ದಲ್ಲಿ ನನ್ನ ಮುಖದ ಸ್ವಲ್ಪ ಭಾಗ ಸುಟ್ಟು ಹೋಗಿತ್ತು. ಇನ್ನೊಂದು ಚಿತ್ರದಲ್ಲಿ ಬಿಲ್ಡಿಂಗ್‌ನಿಂದ ಜಿಗಿಯುವಾಗ ಕಬ್ಬಿಣದ ಸರಳು ಬಡಿದು ಬೆನ್ನುಮೂಳೆ ಮುರಿದಿತ್ತು. ಆಗ 8 ತಿಂಗಳು ಹಾಸಿಗೆ ಹಿಡಿದಿದ್ದೆ . ಆರೋಗ್ಯ ಸುಧಾರಿ ಸಿದ ತತ್‌ಕ್ಷಣ ಮತ್ತೆ ಬಿಲ್ಡಿಂಗ್‌ ಜಂಪ್‌ ದೃಶ್ಯದಲ್ಲೇ ಭಾಗವಹಿಸಬೇಕಾಗಿ ಬಂತು! ಚಿತ್ರದ ನಿರ್ದೇಶಕ ಮಹೇಶ್‌ ಭಟ್‌, ಈಗಷ್ಟೇ ಹುಶಾರಾಗಿದ್ದೀರಾ, ನೀವು ಈ ಸಾಹಸಕ್ಕೆ ಬೇಡ ಅಂದರು. ಅವರನ್ನು ಕನ್ವಿನ್ಸ್ ಮಾಡಿ, ಬಿಲ್ಡಿಂಗ್‌ ನಿಂದ ಜಿಗಿದು ಗೆದ್ದೆ!

ಆಮೇಲೆ ಏನೇನೆಲ್ಲ ಆಗಿದೆ ಗೊತ್ತಾ? ಬಾಲಿವುಡ್‌ ನಟಿಯರಾದ ಐಶ್ವರ್ಯಾ ರೈ, ಪರಿಣಿತಾ ಚೋಪ್ರಾ, ಕರೀನಾ ಕಪೂರ್‌, ಕತ್ರಿನಾ ಕೈಫ್, ಆಲಿಯಾ ಭಟ್‌ ಸೇರಿ ಹಲವರಿಗೆ ಡ್ಯೂಪ್‌ ಆಗಿ, ಬೈಕ್‌, ಕಾರ್‌ ಚೇಸಿಂಗ್‌ನಲ್ಲಿ ಪಾಲ್ಗೊಂಡಿದ್ದೇನೆ. ಫೈಟ್‌ ಸೀನ್‌ಗಳಲ್ಲಿ ಹಾರುವ, ಜಿಗಿಯುವ, ಹೊಡೆಯುವ ದೃಶ್ಯಗಳನ್ನೂ ನಿರ್ವಹಿಸಿ, “ಗೀತಾ-ದಿ ಗ್ರೇಟ್‌’ ಅನ್ನಿಸಿ ಕೊಂಡಿದ್ದೇನೆ. ನಟರುಗಳಾದ ಅಕ್ಷಯ್‌ ಕುಮಾರ್‌, ಶಾರೂಖ್‌, ಅಜಯ್‌ ದೇವಗನ್‌, ಜಾನ್‌ ಅಬ್ರಹಾಂ, ನಟಿಯರಾದ ರಾಣಿ ಮುಖರ್ಜಿ, ಕಾಜೋಲ್‌ ಮುಂತಾದವರು ಪ್ರೀತಿಯಿಂದ ಮಾತಾಡಿಸ್ತಾರೆ. ಡಿಗ್ರಿ ಮುಗಿ ಸಿರುವ ಮಕ್ಕಳು, ನಮ್ಮ ಅಮ್ಮನೇ ನಮಗೆ ಹೀರೋ ಎಂದು ಖುಷಿ ಹೆಚ್ಚಿಸಿದ್ದಾರೆ. ನಾವಿರುವ ಏರಿಯಾದ ಜನ ದೀದೀ ಎಂದು ಕರೆದು ಗೌರವಿಸು ತ್ತಾರೆ. ಬರೀ 20 ವರ್ಷದ ಹಿಂದೆ ನಯಾ ಪೈಸೆಗೂ ಗತಿಯಿಲ್ಲದಿದ್ದವಳು ಈಗ ಒಂದು ಫ್ಲಾಟ್‌ ತಗೊಂಡಿದ್ದೇನೆ. ಒಳ್ಳೆಯ ಹೆಸರು ಸಂಪಾದಿಸಿದ್ದೇನೆ.

ಸಾಹಸ ಕಲಾವಿದರ ಬದುಕು ಸದಾ ಕತ್ತಿಯ ಮೇಲಿನ ನಡಿಗೆ. ಚೇಸ್‌, ಫೈಟ್‌, ಜಂಪ್‌-ಸಾಹಸ ಗಳು ಒಂದೇ ಟೇಕ್‌ಗೆ ಓಕೆ ಆಗುತ್ತವೆ ಎನ್ನಲು ಆಗಲ್ಲ. ಹಲವು ಕಾರಣಕ್ಕೆ ಒಂದು ಸ್ಟಂಟ್‌ನ 3-4 ಬಾರಿ ಮಾಡಬೇಕಾಗಿ ಬರ ಬಹುದು. ಕೆಲವೊಮ್ಮೆ ಪೆಟ್ಟು ಬೀಳಬಹುದು. ಮೂಳೆ ಮುರಿಯಬಹುದು. “ತಿಂಗಳ ರಜೆ’ ಯಂಥ ಸಂದರ್ಭ ದಲ್ಲೂ ಶೂಟಿಂಗ್‌ ನಡೆಯಬಹುದು. ಅದಕ್ಕೆಲ್ಲ ಮಾನಸಿಕವಾಗಿ ಸಿದ್ಧರಾಗಿರಬೇಕು. ಒಂದು ಕಾಲಕ್ಕೆ ನನಗೆ ವಿಪರೀತ ಹಸಿವೆಯಿತ್ತು. ಆಗ ಬಯಸಿದ್ದು ಸಿಗುತ್ತಿರಲಿಲ್ಲ. ಈಗ, ನಾನು ಬಯಸಿದ್ದೆಲ್ಲ ಸಿಗುತ್ತದೆ. ಆದರೆ ಅತಿಯಾಗಿ ತಿನ್ನುವಂತಿಲ್ಲ! ಕಾರಣ, ನನ್ನ ವೃತ್ತಿ! ಹೀರೊ ಯಿನ್‌ಗಳಿಗೆ ಡ್ನೂಪ್‌ ಆಗುವುದರಿಂದ ನಾನು “ದಪ್ಪ’ ಆಗುವಂತಿಲ್ಲ. ಸದಾ ಸ್ಲಿಮ್‌ ಅಂಡ್‌ ಟ್ರಿಮ್‌ ಆಗಿಯೇ ಇರಬೇಕು! ನಾವೂ ಸ್ಟಂಟ್‌ ವುಮನ್‌ ಆಗಬೇಕು ಅನ್ನುವವರಿಗೆ ನಾನು ಹೇಳುವ ಕಿವಿಮಾತಿದು.

ನನಗೆ ನಾನೇ ಮಾದರಿ. ನನಗೆ ಯಾರೂ ರೋಲ್‌ ಮಾಡೆಲ್‌ ಇಲ್ಲ. ಪ್ರತೀ ಕಷ್ಟವೂ ಇವತ್ತಲ್ಲ ನಾಳೆ ಕೊನೆಯಾಗುತ್ತೆ. ಶ್ರದ್ಧೆ, ಆತ್ಮವಿಶ್ವಾಸ ಮತ್ತು ಪರಿಶ್ರಮ ಖಂಡಿತ ನಮ್ಮನ್ನು ಕಾಪಾಡುತ್ತೆ. ನಾವು ಯಾರಿಗೂ ಕಡಿಮೆಯಿಲ್ಲ ಅಂದುಕೊಂಡು ಬದುಕಬೇಕು, ಕಷ್ಟ ಬಂದಾಗ ಕಂಗಾಲಾಗದೆ ಎದುರಿಸಬೇಕು ಅನ್ನುವ ನಿಜಬದುಕಿನ ಈ ಸಾಹಸಿ ಸಿಂಹಿಣಿಗೆ ಅಭಿನಂದನೆ ಹೇಳಲು- geetastunt@gmail.com

– ಎ.ಆರ್‌.ಮಣಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next