ಹಿರಿಯ ನಟಿ ಗೀತಾ ಮತ್ತೆ ಬಂದಿದ್ದಾರೆ. ಅವರು ಎಲ್ಲೇ ಇದ್ದರೂ ಸರಿ, ಒಳ್ಳೆಯ ಪಾತ್ರ ಅನಿಸಿದರೆ ಖಂಡಿತವಾಗಿಯೂ ಬಂದು ನಟಿಸುತ್ತಾರೆ. ಇದರಲ್ಲಿ ಯಾರಿಗೂ ಅನುಮಾನ ಬೇಡ. ಇದು ಸ್ವತಃ ಗೀತಾ ಅವರು ಹೇಳುವ ಮಾತುಗಳು. ಹೌದು, “ಎಲ್ಲರೂ ಗೀತಾ ಅವರು ಅಮೆರಿಕದಲ್ಲಿದ್ದಾರೆ. ಅವರು ಸಿನಿಮಾದಲ್ಲಿ ನಟಿಸುವುದಿಲ್ಲ ಅಂತ ಅವರವರೇ ನಿರ್ಧಾರ ಮಾಡಿಕೊಳ್ಳುತ್ತಾರೆ. ಅದೆಲ್ಲಾ ಸುಳ್ಳು. ನಾನು ಎಲ್ಲೇ ಇರಲಿ, ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಬಂದು ನಟಿಸುತ್ತೇನೆ’ ಹೀಗೆ ಸ್ಪಷ್ಟಪಡಿಸುತ್ತಾರೆ ಗೀತಾ.
ಸದ್ಯಕ್ಕೆ ಗೀತಾ ಅವರು “ಹಳ್ಳಿ ಪಂಚಾಯ್ತಿ’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಸಲ ಅವರು ರೈತಮಹಿಳೆ ಪಾತ್ರ ಮಾಡಿ ನೇಗಿಲು ಹೊತ್ತಿದ್ದಾರೆ. ಅದು ಈ ವಾರ ತೆರೆಗೆ ಬರುತ್ತಿದೆ. ಇನ್ನು, ಇದರೊಂದಿಗೆ ಗೀತಾ ಅವರು ಮಲಯಾಳಂ ಹಾಗೂ ತೆಲುಗು ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಬಂದಿದ್ದು 1983ರಲ್ಲಿ. ಅಲ್ಲಿಂದ 1995ರವರೆಗೂ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡಿದ ಖುಷಿ ಅವರಿಗಿದೆ.
ಈವರೆಗೆ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಗೀತಾ ಅವರು ಆಗ ತಮ್ಮ ಜತೆಗೆ ನಟಿಸಿದ್ದ ಸಮಾನ ನಟ, ನಟಿಯರ ಜತೆ ಕಾಂಟ್ಯಾಕ್ಟ್ ಇಲ್ಲ. 2002ರಲ್ಲಿ “ಪೂರ್ವಾಪರ’ ಚಿತ್ರದಲ್ಲಿ ನಟಿಸಿದ್ದ ಅವರು ಆ ಬಳಿಕ ಕೆಲ ಚಿತ್ರಗಳಲ್ಲಿ ನಟಿಸಿದರಾದರೂ, ಯಾವುದೂ ಹೇಳಿಕೊಳ್ಳುವಂತಹ ಪಾತ್ರ ಇರಲಿಲ್ಲ. ಆಗ ಇದ್ದ ಚಿತ್ರರಂಗಕ್ಕೂ, ಈಗಿನ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂಬುದನ್ನು ಅರಿತಿದ್ದಾರೆ ಗೀತಾ.
ಗೀತಾ ಅವರಿಗಾಗಿಯೇ ಕಥೆ ಬರೆಯೋರಿಲ್ಲ. ಆದರೆ, ಅವರಿಗೆ ಸುಮ್ಮನೆ ಬಂದು ಹೋಗುವಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲು ಇಷ್ಟವೂ ಇಲ್ಲ. ಎರಡು ಸೀನ್ ಇದ್ದರೂ ಪರವಾಗಿಲ್ಲ. ಜನ ಗುರುತಿಸುವಂತಿರಬೇಕೆಂಬುದು ಅವರ ಮಾತು. ಎಲ್ಲರಿಗೂ ಗೀತಾ ಅಮೆರಿಕದಲ್ಲಿರುವುದರಿಂದ ನಟಿಸುತ್ತಾರೋ ಇಲ್ಲವೋ, ಬರುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಇದೆ. ಆದರೆ, ಗೀತಾ ಮಾತ್ರ, ಒಳ್ಳೇ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಅವರು ಸ್ವತಃ ಫ್ಲೈಟ್ ಜಾರ್ಜ್ ಹಾಕಿಕೊಂಡು ಇಲ್ಲಿಗೆ ಬಂದು ನಟಿಸಿ ಹೋಗುತ್ತಾರಂತೆ ಅವರು.
ಎಲ್ಲಾ ಭಾಷೆಯಲ್ಲೂ ನಟಿಸಿರುವ ಗೀತಾ ಅವರಿಗೆ ಕನ್ನಡ ಮತ್ತು ಮಲಯಾಳಂ ಚಿತ್ರರಂಗ ಕಂಫರ್ಟ್ ಅಂತೆ. ಅವರು ಬೆಂಗಳೂರಲ್ಲೇ ಆಡಿ ಬೆಳೆದಿರುವುದರಿಂದ ಮನೆಯಲ್ಲಿ ಮಾತಾಡುವುದು ಸಹ ಕನ್ನಡವನ್ನೇ. ಆ ದಿನಗಳಲ್ಲಿ ಎಲ್ಲವೂ ಕಷ್ಟವಾಗಿತ್ತು. ಆದರೆ, ಒಳ್ಳೇ ಚಿತ್ರಗಳು ಬರುತ್ತಿದ್ದವು. ಈಗ ಎಲ್ಲವೂ ಸುಲಭವಾಗಿದೆ. ಆದರೆ, ಹೇಳಿಕೊಳ್ಳುವಂತಹ ಚಿತ್ರಗಳಿಲ್ಲ. ಆದರೂ, ಈಗ ಡಿಜಿಟಲ್‌ವುಯ ಆಗಿರುವುದರಿಂದ ಹೊಸ ಪ್ರತಿಭೆಗಳು ಹೊಸದೇನನ್ನೋ ಮಾಡುತ್ತಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಎಂಬುದು ಆವರ ಮಾತು.
ಎಲ್ಲವೂ ಸರಿ, ಗೀತಾ ಅವರಿಗೊಂದು ಬೇಸರವಿದೆ. ಅದು ಸಿಗದ ಪ್ರಶಸ್ತಿ. ಮಲಯಾಳಂನಲ್ಲಿ “ಪಂಚಾಗ್ನಿ’ ಎಂಬ ಮೊದಲ ಚಿತ್ರ ಮಾಡಿದ್ದ ಅವರಿಗೆ ಒಳ್ಳೇ ಮೆಚ್ಚುಗೆ ಸಿಕ್ಕಿತ್ತಂತೆ. ಅದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಎಲ್ಲೆಡೆಯಿಂದ ಕೇಳಿಬಂದಿತ್ತು. ಹಾಗೆ ನೋಡಿದರೆ, ಆ ಚಿತ್ರಕ್ಕೆ ಅವರಿಗೆ ಪ್ರಶಸ್ತಿ ಸಿಗುತ್ತೆ ಎಂಬ ಆಸೆ ಇತ್ತು. ಅದು ಬರಲಿಲ್ಲ. ಅದೊಂದು ನಕ್ಸಲೆಟ್ ಸ್ಟೋರಿಯಾಗಿದ್ದರಿಂದ ವಿಭಿನ್ನ ಕಥಾಹಂದರ ಹೊಂದಿದ್ದ ಚಿತ್ರ. ಆಗ ಬರದ ಪ್ರಶಸ್ತಿ, ಈಗ ಬಂದರೇನು, ಬಿಟ್ಟರೇನು ಎಂದು ಸುಮ್ಮನಾಗುತ್ತಾರೆ ಗೀತಾ. ಅಂದಹಾಗೆ, ಸದ್ಯಕ್ಕೆ ಅವರು ತೆಲುಗಿನ ವಾಹಿನಿಯೊಂದಕ್ಕೆ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.