ಸುಳ್ಯ: ಗೇರು ಕೃಷಿ ಲಾಭದಾಯಕ ಮತ್ತು ಪರಿಸರ ಸ್ನೇಹಿ ಈ ಬೆಳೆಗೆ ಖರ್ಚು ಮತ್ತು ಶ್ರಮ ಕಡಿಮೆ. ಇಂದು ಈ ಬೆಳೆಯತ್ತ ಹೆಚ್ಚು ಹೆಚ್ಚು ಕೃಷಿಕರು ಮನ ಮಾಡುತ್ತಿದ್ದಾರೆ. ಗೇರು ಕೃಷಿ ಬಗ್ಗೆ ಪೂರ್ತಿ ಮಾಹಿತಿ ಪಡೆದು ರೈತರು ತಮ್ಮಲ್ಲಿರುವ ಖಾಲಿ ಜಾಗವನ್ನು ಬಳಸಿ ಕೃಷಿ ಮಾಡಿ ಎಂದು ಗೇರು ಸಂಶೋಧನಾ ನಿರ್ದೇಶನಾಲಯದ ನಿವೃತ್ತ ವಿಜ್ಞಾನಿ ಯದುಕುಮಾರ್ ಅವರು ತಿಳಿಸಿದರು.
ಅವರು ಇಲ್ಲಿನ ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಗೇರು ಕೃಷಿ ಬಗ್ಗೆ ರೈತರಿಗೆ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಗೇರು ಬೀಜಕ್ಕೆ ಉತ್ತಮ ಬೇಡಿಕೆ ಇದೆ. ದೇಶದಲ್ಲಿನ ಉತ್ಪತ್ತಿ ಸಾಕಾಗದೆ ವಿದೇಶದಿಂದಲೂ ಆಮದು ಮಾಡಿ ಕೊಳ್ಳಲಾಗುತ್ತದೆ. ಗೇರು ಬೀಜದ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ. ಇನ್ನು 10 ವರ್ಷಗಳವರೆಗೂ ಮಾರುಕಟ್ಟೆಯಲ್ಲಿ ಉತ್ತಮ ದರ ದೊರೆಯಲಿದೆ ಎಂದರು.
ಕರಾವಳಿ ಅಲ್ಲದೆ ರಾಜ್ಯದ ಒಳ ಪ್ರದೇಶಗಳಲ್ಲೂ ರೈತರು ಗೇರು ಕೃಷಿಯತ್ತ ಆಸಕ್ತರಾಗಿದ್ದಾರೆ. ಮಂಡ್ಯದಲ್ಲಿ ಕಬ್ಬು, ಭತ್ತ ಬೆಳೆಯುವ ಕೃಷಿಕರು ಆ ಕೃಷಿಗಳಲ್ಲಿ ಹೆಚ್ಚಿನ ಲಾಭ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿ ಆ ಪ್ರದೇಶದಲ್ಲಿ ಗೇರು ಕೃಷಿ ಮಾಡುತ್ತಿದ್ದಾರೆ ಎಂದರು.
ವೈಜ್ಞಾನಿಕ ರೀತಿಯಲ್ಲಿ ಗೇರು ಕೃಷಿ ಮಾಡಿದರೆ 1 ಹೆಕ್ಟೇರ್‌ನಲ್ಲಿ 1111 ಗಿಡಗಳಿಂದ 3 ಟನ್ ಗೇರು ಬೀಜ ಉತ್ಪನ್ನ ದೊರೆಯುತ್ತದೆ ಎಂದು ಯದುಕುಮಾರ್ ಮಾಹಿತಿ ನೀಡಿದರು.
ಜಿ.ಪಂ.ಸದಸ್ಯೆ ಪುಷ್ಪಾವತಿ ಬಾಳಿಲ ಅವರು ಕಾರ್ಯಕ್ರಮ ಉದ್ಘಾಟಿಸಿ ಪರ್ಯಾಯ ಕೃಷಿಯತ್ತ ಮುಖ ಮಾಡಿದ ಈ ಪರಿಸರದ ಕೃಷಿಕರು ಗೇರು ಕೃಷಿಯತ್ತ ಮನಸ್ಸು ಮಾಡಬೇಕೆಂದರು.
ವೈಜ್ಞಾನಿಕ ಕ್ರಮ ಅನುಸರಿಸಿ
ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅವರು ಅಧ್ಯಕ್ಷತೆ ವಹಿಸಿ ಯಾವುದೇ ಕೃಷಿ ಮಾಡುವಾಗ ವೈಜ್ಞಾನಿಕ ಕ್ರಮ ಅನುಸರಿಸಿ. ಇದರಿಂದ ಅಧಿಕ ಲಾಭಾಂಶ ಪಡೆಯಬಹುದೆಂದರು.
ಮುಖ್ಯ ಅತಿಥಿಗಳಾಗಿ ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್.ರೈ ಭಾಗವಹಿಸಿದ್ದರು. ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕಿ ಸುಹಾನ ಅವರು ಸ್ವಾಗತಿಸಿ, ಅರ್ಬನ್ ಪೂಜೇರ್ ವಂದಿಸಿದರು. ಕೈಗಾರಿಕಾ ವಿಸ್ತರಣಾಧಿಕಾರಿ ವೀರಪ್ಪ ಗೌಡ ಅವರು ನಿರೂಪಿಸಿದರು.