Advertisement
ಚಿಕ್ಕಬಾಣಾವಾರದ ಮನೆಯೊಂದರಲ್ಲಿ ಜೆಎಂಬಿ ಉಗ್ರರು ವಾಸ ಮಾಡಿ ಶಸ್ತ್ರಾಸ್ತ್ರ ಸಂಗ್ರಹಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಂಬಿ ಮುಖ್ಯಸ್ಥ ಕೌಸರ್ ಸೇರಿದಂತೆ 12 ಮಂದಿ ಆರೋಪಿಗಳ ವಿರುದ್ಧ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ದೋಷಾರೋಪ ಪಟ್ಟಿಯಲ್ಲಿ ಜೆಎಂಬಿ ಉಗ್ರ ಸಂಘಟನೆ ಬೆಂಗಳೂರಿನಲ್ಲಿ ಪಡೆದಿದ್ದ ಅಡಗುತಾಣಗಳು, ಶಸ್ತ್ರಾಸ್ತ್ರಗಳ ಸಂಗ್ರಹ, ಉಗ್ರರ ತರಬೇತಿ, ಸಭೆಗಳು, ಬೋಧ್ ಗಯಾ ಸ್ಫೋಟ ಪ್ರಕರಣದಲ್ಲಿ ಶಾಮೀಲು, ಸಂಘಟನೆಯ ಆರ್ಥಿಕ ಬಲವರ್ಧನೆಗೆ ನಡೆಸಿದ ಡಕಾಯಿತಿ ಕೃತ್ಯಗಳ ಬಗ್ಗೆ ದಾಖಲಿಸಲಾಗಿದೆ.
Related Articles
Advertisement
ಗೌಪ್ಯ ಸಂದೇಶ! ಕೋಡ್ ವರ್ಡ್‌ಗಳ ಬಳಕೆ!: ಜೆಎಂಬಿ ಸಂಘಟನೆಯ ಸದಸ್ಯರು ಪೊಲೀಸರಿಗೆ ಸಿಕ್ಕಿಬೀಳಬಾರದು ಎಂಬ ಉದ್ದೇಶದಿಂದ ತಮ್ಮ ಮೊಬೈಲ್‌ಗಳಲ್ಲಿ ಸಾಮಾನ್ಯ ಸಂದೇಶಗಳನ್ನು ಕಳುಹಿಸುತ್ತಿರಲಿಲ್ಲ. ಪ್ರೊಟೆಕ್ಟೆಡ್ ಟೆಕ್ಟ್ ಹೆಸರಿನ ಅಪ್ಲಿಕೇಶನ್ ಬಳಸಿ ಸಂದೇಶ ರವಾನಿಸಿಕೊಳ್ಳುತ್ತಿದ್ದರು. ಓದಿದ ಬಳಿಕ ಸಂದೇಶ ಅಳಿಸಿ ಹಾಕುತ್ತಿದ್ದರು.
ಇದಲ್ಲದೆ ಸಂಘಟನೆಯ ಸದಸ್ಯರು ಕೋಡ್‌ವರ್ಡ್‌ಗಳ ಮೂಲಕ ಮಾತನಾಡುತ್ತಿದ್ದರು. ಉದಾ: ” ಬಲ್ಬ್” ಎಂದರೆ ಮದ್ದುಗುಂಡು, ಅದೇ ರೀತಿ “ಹೋಲ್ಡರ್” – ಶಸ್ತ್ರಾಸ್ತ್ರ “ಕಾಲರ್” – ಎಲೆಕ್ಟ್ರಿಕ್ ವಸ್ತುಗಳು, ರೋಮಿ ಕಾ ಚಮಾಲ್ – ಬಾಂಬ್ ರಾಕೆಟ್‌ಗೆ ಬೇಕಾದ ಪ್ರಮುಖ ವಸ್ತು , “ಮೇವಾ” – ಸ್ಫೋಟಕಗಳು ಎಂಬ ಕೋಡ್ ವರ್ಡ್‌ಗಳನ್ನು ಬಳಕೆ ಮಾಡುತ್ತಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಯಾರ್ಯಾರ ವಿರುದ್ಧ ದೋಷಾರೋಪ ಪಟ್ಟಿ?: ಬಾಂಗ್ಲಾ ಮೂಲದ ಕೌಸರ್ (40) ಪಶ್ಚಿಮ ಬಂಗಾಳದ ನಾಜೀರ್ ಶೇಖ್ (25), ಆರೀಪ್ ಹುಸೇನ್, ಆಸೀಫ್ ಇಕ್ಬಾಲ್ (23) ಕದೋರ್ ಖಾಜಿ (33) ಹಬೀಬುರ್ ರೆಹಮಾನ್ (28) ದಿಲ್ವಾರ್ ಹುಸೆನ್ (28) ಮುಸ್ತಾಫಿರ್ ರೆಹಮಾನ್ ( 39) ಆದಿಲ್ ಶೇಖ್ ( 27) ಅಬ್ದುಲ್ ಕರೀಂ 921) ಮೊಶ್ರಫ್ ಹುಸೈನ್ (22) ಅಸ್ಸಾಂ ಮೂಲದ ಆರೀಫ್ ಹಯಸೈನ್ (24) ಬಿ.ಡಿ ಆರೀಫ್ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಹಾಗೂ ದೇಶದ ವಿರುದ್ಧ ಯುದ್ಧ ಸಾರುವುದು (ಐಪಿಸಿ 121, 121ಎ) ಮತ್ತಿತರ ಕಲಂಗಳ ಅಡಿಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.
ಶಂಕಿತ ಆರೋಪಿಗಳು: ಕೌಸರ್ ಜತೆ ಸಂಪರ್ಕ ಹೊಂದಿದ್ದ ಬಾಂಗ್ಲಾದೇಶದ ಬಿ.ಡಿ ಶರೀಫ್, ಸಲಾವುದ್ದೀನ್ ಸಲಿನ್, ಮಿಂಟೋ, ಫಹಾದ್, ಪ.ಬಂಗಾಳದ ಸಾಜದ್ ಅಲಿ, ಅಸಾದುಲ್ಲಾ, ಸೀಶ್ ಮೊಹ ಮದ್ ಎಂಬುವವರನ್ನು ಶಂಕಿತ ಆರೋಪಿಗಳೆಂದು ಪರಿಗಣಿ ಸಿದ್ದು ತನಿಖೆ ನಡೆಸುತ್ತಿರುವುದಾಗಿ ಎನ್‌ಐಎ ಹೇಳಿದೆ.
“ಮಾಲ್ ಇ ಘನಿಮತ್’ ಹೆಸರಲ್ಲಿ ಡಕಾಯಿತಿ!: ಬಾಂಗ್ಲಾದೇಶದ ಜೆಎಂಬಿ ಪ್ರಮುಖ ಸಲಾವುದ್ದೀನ್ ಸಲಿನ್ ಎಂಬಾತನಿಂದ ಆರ್ಥಿಕ ನೆರವು ಸಿಗುವುದು ನಿಲ್ಲುತ್ತಿದ್ದಂತೆಯೇ ಸಂಘಟನೆಯನ್ನು ಆರ್ಥಿಕವಾಗಿ ಬಲಪಡಿಸಲು ಕೌಸರ್ ಹಾಗೂ ಆತನ ತಂಡ ಡಕಾಯಿತಿ ಮಾಡಲು ನಿರ್ಧರಿಸಿತ್ತು. ಈ ಕಾರ್ಯಕ್ಕೆ ” ಮಾಲ್ ಇ ಘನಿಮತ್’ ಹೆಸರಲ್ಲಿ 2018ರಲ್ಲಿ ಅತ್ತಿಬೆಲೆ, ಕೊತ್ತನೂರು, ಠಾಣಾ ವ್ಯಾಪ್ತಿಗಳಲ್ಲಿ ನಾಲ್ಕು ಡಕಾಯಿತಿ ಕೃತ್ಯ ನಡೆಸಿ ಚಿನ್ನಾಭರಣ ಹಾಗೂ ಮತ್ತಿತರ ವಸ್ತುಗಳನ್ನು ದೋಚಿತ್ತು. ಇದೇ ವಸ್ತುಗಳನ್ನು ಅಸ್ಸಾಂನಲ್ಲಿ ಮಾರಾಟ ಮಾಡಿ ಆ ಹಣವನ್ನು ಸಂಘಟನೆಗೆ ಬಳಸಲಾಗಿತ್ತು ಎಂಬ ಮಾಹಿತಿ ದಾಖಲಿಸಲಾಗಿದೆ.
ಚಿಕ್ಕಬಾಣಾವರದ ಮನೆಯಲ್ಲಿ ಆಶ್ರಯ ಪಡೆದು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದ, ಜೆಎಂಬಿ ಚಟುವಟಿಕೆಗಳನ್ನು ಸಕ್ರಿಯಗೊಳಿಸಿದ್ದ ಆರೋಪ ಪ್ರಕರಣ ಸಂಬಂಧ ಕೌಸರ್ ಸೇರಿ ಇತರ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಪ್ರಕರಣದ ತನಿಖೆಯನ್ನು ಎನ್‌ಐಎ ಮುಂದುವರಿಸಿದೆ.-ಪಿ. ಪ್ರಸನ್ನಕುಮಾರ್, ಎನ್‌ಐಎ ಪರ ವಕೀಲ