ನವದೆಹಲಿ: ಪ್ರತಿ ಕೆ.ಜಿ. ಅಡಕೆಗೆ 300ರೂ. ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಕರ್ನಾಟಕ ಬಿಜೆಪಿ ಘಟಕದ ನಿಯೋಗ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಇದರ ಜತೆಗೆ ಪಾನ್‌ಮಸಾಲಾ ಮೇಲಿನ ಜಿಎಸ್‌ಟಿ ಪ್ರಮಾಣವನ್ನು ಶೇ.5ಕ್ಕೆ ಇಳಿಕೆ ಮಾಡಬೇಕೆಂದು ಶಾಸಕ ಅರಗ ಜ್ಞಾನೇಂದ್ರ ನೇತೃತ್ವದ ಕರ್ನಾಟಕ ಬಿಜೆಪಿಯ ಅಡಕೆ ವಿಭಾಗದ ನಿಯೋಗ ಮನವಿ ಮಾಡಿದೆ.
ಅದಕ್ಕಾಗಿ ಕೇಂದ್ರ ಹಣಕಾಸು, ಕೃಷಿ ಮತ್ತು ವಾಣಿಜ್ಯ ಖಾತೆ ಸಚಿವರಿಗೆ ಪ್ರತ್ಯೇಕವಾಗಿ ಗುರುವಾರ ಮನವಿ ಸಲ್ಲಿಸಲಾಯಿತು. ಸ್ಥಳೀಯ ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ. ಅಡಕೆಗೆ 280 ರೂ.ಗೆ ಇಳಿಕೆಯಾಗಿದೆ. ಕೆಲ ಸಮಯ ಹಿಂದೆ ಧಾರಣೆ 380 ರೂ. ವರೆಗೆ ಇತ್ತು. ಶ್ರೀಲಂಕಾ ಮತ್ತು
ಇತರ ರಾಷ್ಟ್ರಗಳಿಂದ ಕಡಿಮೆ ದರ್ಜೆಯ ಅಡಕೆ ದೇಶದ ಮಾರುಕಟ್ಟೆಗೆ ಪ್ರವೇಶ ಪಡೆದಿರುವುದರಿಂದ ಹೀಗಾಗಿದೆ. ಹೀಗಾಗಿ, ಬೆಳೆಗಾರರು ತೊಂದರೆಗೀಡಾಗಿದ್ದಾರೆ. ಜತೆಗೆ ಕಡಿಮೆ ದರ್ಜೆಯ ಅಡಕೆ ಮಾರುಕಟ್ಟೆಗೆ ಪ್ರವೇಶ ಮಾಡುವುದನ್ನು ತಡೆಯಲು ಕ್ರಮ ಕೈಗೊಳ್ಳಬೇಕು. ಕನಿಷ್ಠ
ಬೆಂಬಲ ಬೆಲೆಯನ್ನು ಪ್ರತಿ ಕೆಜಿ ಅಡಿಕೆಗೆ 300 ರೂ. ನಿಗದಿಪಡಿಸಬೇಕೆಂದು ಮನವಿ ಮಾಡಲಾಗಿದೆ.
ಶೇ.5ಕ್ಕೆ ಇಳಿಕೆ ಮಾಡಿ: ಇದರ ಜತೆಗೆ ಪಾನ್ ಮಸಾಲಾ ಮೇಲಿನ ಜಿಎಸ್‌ಟಿಯನ್ನು ಶೇ.5ಕ್ಕೆ ಇಳಿಕೆ ಮಾಡುವಂತೆಯೂ ನಿಯೋಗ ಒತ್ತಾಯಿಸಿದೆ. ಸದ್ಯ ಅದು ಶೇ.18 ಆಗಿದೆ. ತೆರಿಗೆ ಪ್ರಮಾಣ ಇಳಿಕೆ ಮಾಡಿದರೆ ಸಣ್ಣ ಉದ್ದಿಮೆಯಲ್ಲಿ ಪಾನ್ ಮಸಾಲಾ ತಯಾರಿಕೆ ಮಾಡುವವರಿಗೆ ನೆರವಾಗುತ್ತದೆ ಎಂದು ಜ್ಞಾನೇಂದ್ರ ಅವರು ಮನವಿ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಆದಾಯ ಹೆಚ್ಚಿದರೆ ಕಡಿಮೆ ತೆರಿಗೆ: ಇದೇ ವೇಳೆ ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಪ್ರಭಾರ ವಿತ್ತ ಸಚಿವ ಪಿಯೂಷ್ ಗೋಯಲ್ ಆದಾಯ ಹೆಚ್ಚಾಗಿ ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದರೆ ಮತ್ತಷ್ಟು ವಸ್ತುಗಳ ಮೇಲಿನ ತೆರಿಗೆ ಪ್ರಮಾಣ ತಗ್ಗಿಸಲಾಗುತ್ತದೆ ಎಂದು ಹೇಳಿದ್ದಾರೆ.