ಮುಂಬೈ: ಇತ್ತೀಚಿನ ದಿನಗಳಲ್ಲಿ ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುವ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿರುವುದಕ್ಕೆ ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಅವರು ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದುಕೊಂಡಿದ್ದರು. ಕೊಹ್ಲಿ ಸರಣಿಯಲ್ಲಿ 141.50ರ ಸರಾಸರಿಯಲ್ಲಿ 283 ರನ್ ಗಳಿಸಿದ್ದರು.
ಆದರೆ ಮೊಹಮ್ಮದ್ ಸಿರಾಜ್ ಅವರಿಗೆ ಜಂಟಿಯಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ:ಮನೆಮದ್ದು: ಆರೋಗ್ಯದ ಹಲವು ಸಮಸ್ಯೆಗಳಿಗೆ ಔಷಧೀಯ ಗುಣದ “ದಾಸವಾಳ ಹೂ” ರಾಮಬಾಣ
“ಸಿರಾಜ್ ಅವರು ವಿರಾಟ್ ಕೊಹ್ಲಿಗೆ ಸರಿಸಮಾನರಾಗಿದ್ದರು ಎಂದು ನಾನು ಭಾವಿಸುತ್ತೇನೆ. ಬ್ಯಾಟಿಂಗ್ ವಿಕೆಟ್ ಗಲ್ಲಿ ಅವರು ಉತ್ತಮ ಬೌಲಿಂಗ್ ಮಾಡಿದ್ದರು. ಹೀಗಾಗಿ ಸಿರಾಜ್ ಜಂಟಿಯಾಗಿ ಮ್ಯಾನ್ ಆಫ್ ದಿ ಸಿರೀಸ್ ಗೆಲ್ಲಬೇಕಿತ್ತು. ಬ್ಯಾಟರ್ ದೊಡ್ಡ ಶತಕ ಹೊಡೆದಾಗ ನಾವು ಆ ಕಡೆ ಹೆಚ್ಚಾಗಿ ಆಕರ್ಷಣೆಗೊಳಗಾಗುತ್ತೇವೆ. ಆದರೆ ಮೊಹಮ್ಮದ್ ಸಿರಾಜ್ ಈ ಸಂಪೂರ್ಣ ಸರಣಿಯಲ್ಲಿ ಅಸಾಧಾರಣ ಪ್ರದರ್ಶನ ತೋರಿದ್ದರು ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಹೇಳಿದರು.
ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊಹಮ್ಮದ್ ಸಿರಾಜ್ 10.22ರ ಸರಾಸರಿಯಲ್ಲಿ 9 ವಿಕೆಟ್ ಕಿತ್ತಿದ್ದರು.